ಬೊಮ್ಮನಹಳ್ಳಿ: ಇಲ್ಲಿಗೆ ಸಮೀಪದ ಕೂಡ್ಲು ಗ್ರಾಮದ ಶ್ಯಾಮರೆಡ್ಡಿ ಬಂಡೆಯ ಕ್ವಾರಿಯ ನೀರಿನ ಗುಂಡಿಗೆ ಬಿದ್ದು ಮೂವರು ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಮಕ್ಕಳ ಕುಟುಂಬದವರಿಗೆ ಸರ್ಕಾರದ ವತಿಯಿಂದ ಪರಿಹಾರ ಧನದ ಚೆಕ್ ಅನ್ನು ಶಾಸಕ ಬಿ.ಶಿವಣ್ಣ ಬುಧವಾರ ವಿತರಿಸಿದರು.
ಪೋಷಕರಿಗೆ ತಲಾ ರೂ1.5 ಲಕ್ಷ ಚೆಕ್ ನೀಡಿದ ಶಾಸಕರು, ಕುಟುಂಬದವರಿಗೆ ಸಾಂತ್ವನ ಹೇಳಿದರು. `ಶಿಕ್ಷಣ ಇಲಾಖೆಯ ವತಿಯಿಂದ ಮಕ್ಕಳ ಕಲ್ಯಾಣ ನಿಧಿಯಿಂದ ಶೀಘ್ರದಲ್ಲಿ ತಲಾ ರೂ25 ಸಾವಿರ ನೀಡಲಾಗುವುದು' ಎಂದು ಭರವಸೆ ನೀಡಿದರು.
ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕ್ವಾರಿಯ ಹಳ್ಳಕ್ಕೆ ಬೇಲಿ ಹಾಕಿ, ಶೀಘ್ರದಲ್ಲಿ ಹಳ್ಳ ಮುಚ್ಚಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಸಹಾಯಕ ಆಯುಕ್ತ ನಾಗರಾಜ್, ತಹಶೀಲ್ದಾರ್ ಶಿವೇಗೌಡ, ಕಾಂಗ್ರೆಸ್ ಮುಖಂಡರಾದ ಬಾಬುರಾಜ್, ಗಟ್ಟಹಳ್ಳಿ ಸೀನಪ್ಪ ಮತ್ತಿತರರು ಹಾಜರಿದ್ದರು. ಕಳೆದ ಶುಕ್ರವಾರ ಆಟವಾಡುತ್ತಿದ್ದ ವೇಳೆ ಕ್ವಾರಿಯ ಗುಂಡಿಗೆ ಬಿದ್ದು ಮೇಘ, ಐಶ್ವರ್ಯ, ಲೋಕೇಶ್ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.