ADVERTISEMENT

ಪಾಲಿಕೆ ಅಧಿಕಾರಿಗಳಿಗೆ ಹೈಕೋರ್ಟ್ ತರಾಟೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ಬೆಂಗಳೂರು: ಬೆಂಗಳೂರು-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಹಾಗೂ ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಲೇಔಟ್ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಒತ್ತುವರಿ ಕುರಿತು ಮಾಹಿತಿ ನೀಡುವಂತೆ ಹೈಕೋರ್ಟ್ ಆದೇಶಿಸಿದರೆ ಅಲ್ಲಿ ಎಷ್ಟು ಮಹಡಿಗಳ ಕಟ್ಟಡ ನಿರ್ಮಾಣ ಆಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಿದ ಪಾಲಿಕೆ ಅಧಿಕಾರಿಗಳು ಬುಧವಾರ ತೀವ್ರ ತರಾಟೆಗೆ ಒಳಗಾಗಬೇಕಾಯಿತು.

ಕೃಷಿ ಗಂಗೋತ್ರಿ ಲೇಔಟ್ ನಿವೇಶನ ಮಾಲೀಕರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.

ಜಕ್ಕೂರು ಬಳಿಯ ಬ್ಲಾಕ್ ನಂ. 25ರಲ್ಲಿ ಕ್ರೌನ್ ಡೆವಲಪರ್ಸ್‌ ಸಂಸ್ಥೆಯಿಂದ ಇಲ್ಲಿ ಒತ್ತುವರಿ ನಡೆದಿದೆ ಎನ್ನುವುದು ಅರ್ಜಿದಾರರ ದೂರು. ಬೆಂಗಳೂರು-ಬಳ್ಳಾರಿ ರಸ್ತೆಯಿಂದ ಜಿಕೆವಿಕೆ ಲೇಔಟ್ ತಲುಪಲು ತಮಗೆ ಇರುವುದು ಇದೊಂದೇ ಮಾರ್ಗ. ಆದರೆ ಇಲ್ಲಿ ಒತ್ತುವರಿ ನಡೆದಿರುವ ಕಾರಣ ಜನರು ಕಷ್ಟ ಅನುಭವಿಸುವಂತಾಗಿದೆ ಎನ್ನುವುದು ಅವರ ಆರೋಪ.

ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ವರದಿ ನೀಡುವಂತೆ ಕೋರ್ಟ್ ಈ ಹಿಂದೆ  ಪಾಲಿಕೆಗೆ ಆದೇಶಿಸಿತ್ತು. ಅದರಂತೆ ಪಾಲಿಕೆ ಅಧಿಕಾರಿಗಳು ಬುಧವಾರ ವರದಿ ನೀಡಿದ್ದರು.

`ಇಲ್ಲಿ ಒಂದು ಕಟ್ಟಡ ನಿರ್ಮಾಣ ಆಗುತ್ತಿದೆ. ನೆಲ ಮಹಡಿ ಹಾಗೂ ಒಂದನೇ ಮಹಡಿ ನಿರ್ಮಾಣ ಕಾರ್ಯ ಮುಗಿದಿದೆ~ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನು ಗಮನಿಸಿ ಪೀಠ ತೀವ್ರ ಕೋಪಗೊಂಡಿತು.

`ಹೈಕೋರ್ಟ್ ಆದೇಶವನ್ನೂ ಅರ್ಥ ಮಾಡಿಕೊಳ್ಳಲು ಬರುವುದಿಲ್ಲವೇ, ನಾವು ಹೇಳಿದ್ದು ಏನು, ನೀವು ವರದಿ ಮಾಡಿದ್ದು ಏನು~ ಎಂದು ಹಾಜರು ಇದ್ದ ಪಾಲಿಕೆಯ ಸಹಾಯಕ ಎಂಜಿನಿಯರ್ ಬಸವರಾಜ ಹಾಗೂ ಸಹಾಯಕ ನಿರ್ದೇಶಕ (ನಗರ ಯೋಜನಾ ಪ್ರಾಧಿಕಾರ) ಬಿ.ಮಂಜೇಶ್ ಅವರನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ಪೀಠದ ಕೋಪ ಗಮನಿಸಿದ ಪಾಲಿಕೆ ಪರ ವಕೀಲರು ಮಧ್ಯೆ ಪ್ರವೇಶಿಸಿ, ಅರ್ಜಿದಾರರ ನಿಜವಾದ ಸಮಸ್ಯೆ ಏನು ಎಂಬ ಬಗ್ಗೆ ತಾವು ಅಧಿಕಾರಿಗಳಿಗೆ ತಿಳಿಸುವುದಾಗಿ ಪೀಠಕ್ಕೆ ಭರವಸೆ ನೀಡಿದರು. ಅದಕ್ಕೆ ನ್ಯಾಯಮೂರ್ತಿಗಳು, `ನಿಮಗೆ ಇರುವುದು ಕೇವಲ 24 ಗಂಟೆ ಅವಧಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ. ಗುರುವಾರ (ಫೆ.23) ವರದಿ ನಮ್ಮ ಕೈಸೇರಬೇಕು~ ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.