ADVERTISEMENT

ಪಿಯು ಕಾಲೇಜು ವೇಳಾಪಟ್ಟಿಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 18:30 IST
Last Updated 17 ಆಗಸ್ಟ್ 2012, 18:30 IST

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವೇಳಾಪಟ್ಟಿ ಮತ್ತು ದಸರಾ ರಜೆ ಕಡಿತಕ್ಕೆ ಉಪನ್ಯಾಸಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರು ಪಿಯು ವೆಬ್‌ಸೈಟ್‌ನಲ್ಲಿ ತರಗತಿ ಅವಧಿಯು ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 4.30ಕ್ಕೆ ಮುಕ್ತಾಯಗೊಳ್ಳಬೇಕು ಎಂದು ಆದೇಶ ನೀಡಿದ್ದಾರೆ.  ಆದರೆ ಈ ಆದೇಶ ಸಂಪೂರ್ಣ ಅವೈಜ್ಞಾನಿವಾಗಿದ್ದು, ಕೂಡಲೇ ಬದಲಾಯಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎಚ್.ಎಸ್.ಸುರೇಶ್ ಹೇಳಿದ್ದಾರೆ.

`ನಗರ ಪ್ರದೇಶದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಟ್ರಾಫಿಕ್‌ನಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುವುದರಿಂದ ಈ ಅವಧಿಗೆ ಕಾಲೇಜನ್ನು ತಲುಪಲು ಕಷ್ಟವಾಗುತ್ತದೆ. ಇದರೊಂದಿಗೆ ಸಂಜೆ 4.30ಕ್ಕೆ ತರಗತಿ ಮುಗಿಯುವುದರಿಂದ ಮನೆ ತಲುಪುವುದು ವಿಳಂಬವಾಗುವುದರಿಂದ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಅಧ್ಯಯನ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಿಲ್ಲ~ ಎಂದು ಅವರು ದೂರಿದ್ದಾರೆ.

`ಪ್ರಸಕ್ತ ಅಕ್ಟೋಬರ್ ತಿಂಗಳ ದಸರಾ ರಜೆಯನ್ನು ಈ ಬಾರಿ ಕೇವಲ 10 ದಿನಗಳಿಗೆ ಕಡಿತಗೊಳಿಸಲಾಗಿದೆ. ಈ ರಜೆಯಲ್ಲಿ ಕೇವಲ ಮೂರು ದಿನ ಮಾತ್ರ ಇಲಾಖೆಯಿಂದ ರಜೆ ನೀಡಲಾಗಿದ್ದು, ಉಳಿದ ಏಳು ದಿನವು ಸರ್ಕಾರಿ ರಜೆಯಾಗಿದೆ. ಈ ಕಡಿತವನ್ನು ಕೂಡಲೇ ರದ್ದುಪಡಿಸಿ, ಈ ಹಿಂದೆ ಇದ್ದಂತೆ ಅ.7 ರಿಂದ 29ರ ವರೆಗೆ ದಸರಾ ರಜೆ ಘೋಷಿಸಬೇಕು~ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.