ADVERTISEMENT

`ಪುಸ್ತಕಗಳು ವಿದ್ಯಾರ್ಥಿ ಸಮೂಹಕ್ಕೆ ತಲುಪಬೇಕು'

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 20:35 IST
Last Updated 20 ಡಿಸೆಂಬರ್ 2012, 20:35 IST
ಬೆಂಗಳೂರು: `ಪುಸ್ತಕಗಳು ಕೇವಲ ಲೋಕಾರ್ಪಣೆಗೊಳ್ಳುವುದು ಮಾತ್ರವಲ್ಲ ಅದು ಮುಖ್ಯವಾಗಿ ವಿದ್ಯಾರ್ಥಿ ಸಮೂಹಕ್ಕೆ ತಲುಪಬೇಕು' ಎಂದು ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅಭಿಪ್ರಾಯಪಟ್ಟರು.
 
 ಕನ್ನಡ ಪುಸ್ತಕ ಪ್ರಾಧಿಕಾರವು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಪ್ರಕಟಣೆಗಳ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು. 
 
`ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಈ ದಿನಗಳಲ್ಲೂ ವರ್ಷಕ್ಕೆ ಮೂರು ಸಾವಿರಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಳ್ಳುತ್ತಿರುವುದು ಸಂತಸದ ವಿಚಾರ. ಆದರೆ, ಪುಸ್ತಕಗಳು ಕೇವಲ ಗ್ರಂಥಾಲಯಗಳನ್ನು ಸೇರುವುದಲ್ಲದೇ ಜನಮಾನಸಕ್ಕೆ ಹತ್ತಿರವಾಗಬೇಕು' ಎಂದು ತಿಳಿಸಿದರು.
 
ಸಚಿವ ಗೋವಿಂದ ಎಂ.ಕಾರಜೋಳ, `ಪ್ರಾಧಿಕಾರವು ಪುಸ್ತಕಗಳನ್ನು ಶಾಲೆಗಳಿಗೆ ಉಚಿವಾಗಿ ನೀಡುವ ಪರಿಪಾಠವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಬಹಳ ಸಂತಸ ತಂದಿದೆ' ಎಂದು ಶ್ಲಾಘಿಸಿದರು.
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್.ರಾಮಕೃಷ್ಣ, `ದೇಶದ ವಿವಿಧ ಭಾಗಗಳಲ್ಲಿರುವ ಕನ್ನಡಿಗರಿಗೆ ಕನ್ನಡ ಪುಸ್ತಕಗಳನ್ನು ತಲುಪಿಸುವ ದೃಷ್ಟಿಯಿಂದ ಪ್ರಾಧಿಕಾರದ ವತಿಯಿಂದ ಆನ್‌ಲೈನ್ ಮಾರಾಟದ ಬಗ್ಗೆ ಈಗಾಗಲೇ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ' ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಾಧಿಕಾರದ ವೆಬ್‌ಸೈಟ್ www.kannadapustakapra dhikara.com ಗೆ ಚಾಲನೆ ನೀಡಲಾಯಿತು. ಇಲಾಖೆಯ ಕಾರ್ಯದರ್ಶಿ ಬಸವರಾಜು, ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.