ADVERTISEMENT

ಪೂಜೆ ನೆಪದಲ್ಲಿ ಬಾಲಕಿ ಕೊಂದ ಅಮ್ಮ–ಮಗಳು!

ತಾವೇ ಕೊಂದು ತಾಯಿ ವಿರುದ್ಧ ದೂರಿದರು

​ಪ್ರಜಾವಾಣಿ ವಾರ್ತೆ
Published 4 ಮೇ 2018, 20:50 IST
Last Updated 4 ಮೇ 2018, 20:50 IST
ಪ್ರಮೀಳಾ, ರಮ್ಯಾ
ಪ್ರಮೀಳಾ, ರಮ್ಯಾ   

ಬೆಂಗಳೂರು: ದೆವ್ವ ಬಿಡಿಸುತ್ತೇವೆಂದು 13 ವರ್ಷದ ಬಾಲಕಿಯನ್ನು ಹೊಡೆದು ಸಾಯಿಸಿದ ಅಮ್ಮ–ಮಗಳು, ತಾವು ಮಾಡಿದ ತಪ್ಪನ್ನು ಬಾಲಕಿಯ ತಾಯಿ ಮೇಲೆ ಹೊರಿಸಲು ಹೊರಟಿದ್ದರು. ಆದರೆ, ಪೊಲೀಸ್ ತನಿಖೆಯು ಅವರ ಸಂಚನ್ನು ವಿಫಲಗೊಳಿಸಿ, ಇಬ್ಬರಿಗೂ ಜೈಲಿನ ದಾರಿ ತೋರಿಸಿದೆ.

ವಿಜ್ಞಾನನಗರ 8ನೇ ಅಡ್ಡರಸ್ತೆ ನಿವಾಸಿ ಪ್ರಮೀಳಾ (40) ಹಾಗೂ ಅವರ ಮಗಳು ರಮ್ಯಾ (20) ಬಂಧಿತರು. ಬುಧವಾರ ರಾತ್ರಿ ಶರಣ್ಯಾ ಎಂಬ ಬಾಲಕಿಯನ್ನು ಹತ್ಯೆಗೈದ ಆರೋಪಿಗಳು, ನಂತರ ಬೈಯ್ಯಪ್ಪನಹಳ್ಳಿ ಠಾಣೆಗೆ ತೆರಳಿ ಮೃತಳ ತಾಯಿ ವಿರುದ್ಧವೇ ದೂರು ಕೊಟ್ಟಿದ್ದರು.

‘ಮಗಳು ಓದುವುದನ್ನು ಬಿಟ್ಟು, ಸದಾ ಟಿ.ವಿ ಮುಂದೆ ಕುಳಿತಿರುತ್ತಾಳೆ ಎಂದು ಕೋಪಗೊಂಡು ಶರಣ್ಯಾಳನ್ನು ಆಕೆಯ ತಾಯಿಯೇ ಹೊಡೆದು ಸಾಯಿಸಿದರು’ ಎಂದು ಪ್ರಮೀಳಾ ದೂರಿದ್ದರು. ಪೊಲೀಸರು ಗಾಯತ್ರಿ ಅವರನ್ನು ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿದಾಗ ಸಾವಿನ ರಹಸ್ಯ ಬಯಲಾಗಿದೆ.

ADVERTISEMENT

ಪ್ರಾಣ ತೆಗೆದ ಪೂಜೆ: ಪತಿಯಿಂದ ಪ್ರತ್ಯೇಕವಾಗಿದ್ದ ಗಾಯತ್ರಿ, ಇಬ್ಬರು ಹೆಣ್ಣು ಮಕ್ಕಳ ಜತೆ ಮಾರುತಿನಗರದ ಚನ್ನಮ್ಮ ಲೇಔಟ್‌ನಲ್ಲಿ ನೆಲೆಸಿದ್ದರು. ಶರಣ್ಯಾ 8ನೇ ತರಗತಿ ಓದುತ್ತಿದ್ದಳು. ಹಿರಿಯ ಮಗಳು ತಾಯಿಯೊಂದಿಗೆ ಮನೆಗೆಲಸಕ್ಕೆ ಹೋಗುತ್ತಾಳೆ.‍ ಆರೋಪಿ ಪ್ರಮೀಳಾ ಸಹ ಸುತ್ತಮುತ್ತಲ ಮನೆಗಳಿಗೆ ಸ್ವಚ್ಛತಾ ಕೆಲಸಕ್ಕೆ ಹೋಗುತ್ತಾರೆ. ಹೀಗಾಗಿ, ಅವರಿಗೆ ಕೆಲ ದಿನಗಳ ಹಿಂದೆ ಗಾಯತ್ರಿಯ ಪರಿಚಯವಾಗಿತ್ತು.

‘ಈ ನಡುವೆ ಶರಣ್ಯಾಳ ವರ್ತನೆಯಲ್ಲಿ ಬದಲಾವಣೆ ಆಗಿದೆ. ನಮ್ಮ ಮಾತನ್ನು ಕೇಳದ ಆಕೆ, ಹೇಗೇಗೋ ಆಡುತ್ತಿರುತ್ತಾಳೆ’ ಎಂದು ಅವರು ಪ್ರಮೀಳಾ ಬಳಿ ಹೇಳಿಕೊಂಡಿದ್ದರು. ಅದಕ್ಕೆ, ‘ಮಗಳಿಗೆ ದೆವ್ವ ಮೆಟ್ಟಿಕೊಂಡಿರಬೇಕು. ನಿಮ್ಮ ಮನೆಯಲ್ಲಿ ಓಂಶಕ್ತಿ ಪೂಜೆ ಮಾಡಿದರೆ, ಅದು ಶರಣ್ಯಾಳ ದೇಹವನ್ನು ಬಿಟ್ಟು ಹೋಗುತ್ತದೆ’ ಎಂದಿದ್ದರು. ಆ ಮಾತನ್ನು ನಂಬಿದ ಗಾಯತ್ರಿ ಪೂಜೆಗೆ ಒಪ್ಪಿಕೊಂಡಿದ್ದರು.

ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಮಗಳು ರಮ್ಯಾಳೊಂದಿಗೆ ಅವರ ಮನೆಗೆ ತೆರಳಿದ ಪ್ರಮೀಳಾ, ಪೂಜೆ ಶುರು ಮಾಡಿದ್ದರು. ಶರಣ್ಯಾಳನ್ನು ದೇವಿ ಫೋಟೊ ಮುಂದೆ ಕೂರಿಸಿ, ಬೇವಿನ ಸೊಪ್ಪು ಹಾಗೂ ಕಬ್ಬಿಣದ ಪೈಪ್‌ನಿಂದ ಹೊಡೆದಿದ್ದರು. ಈ ವೇಳೆ ಆಕಸ್ಮಿಕವಾಗಿ ತಲೆಗೆ ಪೆಟ್ಟು ಬಿದ್ದಿದ್ದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಯಿಗೆ ಹೆದರಿಸಿದರು: ‘ಶರಣ್ಯಾ ಸತ್ತಿದ್ದರಿಂದ ಗಾಬರಿಗೊಂಡ ತಾಯಿ–ಮಗಳು, ‘ಪೂಜೆಯಿಂದ ಮಗಳು ಸತ್ತಳು ಎಂದು ಯಾರಿಗಾದರೂ ಹೇಳಿದರೆ, ದೇವಿ ಮುನಿಸಿಕೊಳ್ಳುತ್ತಾಳೆ. ಹಿರಿಯ ಮಗಳ ಪ್ರಾಣಕ್ಕೂ ಕುತ್ತು ಬರಬಹುದು’ ಎಂದು ಗಾಯತ್ರಿಗೆ ಹೆದರಿಸಿದ್ದರು.

ಅಲ್ಲದೆ, ತಾವೇ ಕೊಲೆ ಮಾಡಿದ್ದಾಗಿ ಪೊಲೀಸರೆದುರು ತಪ್ಪೊಪ್ಪಿಕೊಳ್ಳುವಂತೆಯೂ ಅವರಿಗೆ ಸೂಚಿಸಿದ್ದರು. ಅದಕ್ಕೆ ಅವರು ಒಪ್ಪಿದ ಬಳಿಕ, ನಸುಕಿನ ವೇಳೆ (2.30ರ ಸುಮಾರಿಗೆ) ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರ ಬಳಿ ಆರೋಪಿಗಳು ಕಟ್ಟುಕತೆ ಹೆಣೆದಿದ್ದರು. ಗಾಯತ್ರಿ ಸಹ ತಪ್ಪೊಪ್ಪಿಕೊಂಡಿದ್ದರಿಂದ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ದರು.

ಗೊಂದಲದ ಹೇಳಿಕೆ: ‘ಮಗಳನ್ನು ನಾನೇ ಕೊಂದೆ’ ಎಂದು ಪದೇ ಪದೇ ಹೇಳುತ್ತಿದ್ದ ಗಾಯತ್ರಿ, ‘ಅವರ ಮಾತು ಕೇಳಿ ಹಾಗೆ ಮಾಡಿದೆ’ ಎಂದು ಒಮ್ಮೊಮ್ಮೆ ಹೇಳುತ್ತಿದ್ದರು. ಯಾರ ಮಾತು ಕೇಳಿ ಏನು ಮಾಡಿದಿರಿ ಎಂದು ಕೇಳಿದರೆ ಮೌನಕ್ಕೆ ಶರಣಾಗುತ್ತಿದ್ದರು. ಪುನಃ ಮನೆಗೆ ತೆರಳಿ ಪರಿಶೀಲಿಸಿದಾಗ ಯಾವುದೋ ಪೂಜೆ ನಡೆದಿದೆ ಎಂಬುದಕ್ಕೆ ಸಾಂದರ್ಭಿಕ ಸಾಕ್ಷ್ಯಗಳು ಲಭ್ಯವಾದವು ಎಂದು ಪೊಲೀಸರು ವಿವರಿಸಿದರು.

ಗಾಯತ್ರಿ ಅವರ ಹಿರಿಯ ಮಗಳನ್ನು ವಿಚಾರಿಸಿದಾಗ, ‘ಆ ದಿನ ನಾನು ಊರಿನಲ್ಲಿ ಇರಲಿಲ್ಲ. ಏನಾಗಿದೆ ಎಂದು ಯಾರೂ ಹೇಳುತ್ತಿಲ್ಲ. ಅಮ್ಮ ಕೊಲೆ ಮಾಡಿರುವುದಕ್ಕೆ ಸಾಧ್ಯವೇ ಇಲ್ಲ’ ಎಂದರು. ಅನುಮಾನದ ಮೇಲೆ ಫಿರ್ಯಾದಿ ಪ್ರಮೀಳಾ ಅವರನ್ನು ಶುಕ್ರವಾರ ಸಂಜೆ ಪುನಃ ಠಾಣೆಗೆ ಕರೆಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ತಪ್ಪೊಪ್ಪಿಕೊಂಡರು. ನಂತರ ಮಗಳನ್ನೂ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

**

ತಾಯಿ ಫೋಟೊ ಕಳುಹಿಸಿದ ಡಿಸಿಪಿ!: ಪೊಲೀಸರು ಒಂದು ಹಂತದಲ್ಲಿ ಗಾಯತ್ರಿಯೇ ಆರೋಪಿ ಎಂಬ ನಿರ್ಧಾರಕ್ಕೆ ಬಂದಿದ್ದರು. ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿ, ‘ಪ್ರಕರಣ ಬೆಳಕಿಗೆ ಬಂದ ಸ್ವಲ್ಪ ಸಮಯದಲ್ಲೇ ಆರೋಪಿಯನ್ನು ಪತ್ತೆ ಮಾಡಿದ್ದೇವೆ’ ಎಂದು ಗಾಯತ್ರಿ ಅವರ ಫೋಟೊ ಸಮೇತ ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದರು.

ಆದರೆ, ಶುಕ್ರವಾರ ರಾತ್ರಿ ವೇಳೆಗೆ ಪ್ರಕರಣ ಸಂಪೂರ್ಣ ತಿರುವು ಪಡೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.