ADVERTISEMENT

ಪೊಲೀಸರ ‘ರಾಜಕೀಯ ಪಕ್ಷ’ದ ಟ್ವೀಟ್‌!

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ; ‘ಪೊಲೀಸರೇ ನೀವು ರಾಜಕೀಯ ಪಕ್ಷದ ವಕ್ತಾರರಲ್ಲ’ ಎಂದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 20:02 IST
Last Updated 28 ಮಾರ್ಚ್ 2018, 20:02 IST
ಟ್ವೀಟ್‌
ಟ್ವೀಟ್‌   

ಬೆಂಗಳೂರು: ಕಾಂಗ್ರೆಸ್‌ ಪಕ್ಷವು ಆಯೋಜಿಸಿದ್ದ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ’ ಕಾರ್ಯಕ್ರಮದ ಫೋಟೊವನ್ನು ಟ್ವೀಟ್‌ ಮಾಡಿರುವ ಸಂಚಾರ ಪೊಲೀಸರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಡೆದ ಕಾರ್ಯಕ್ರಮದ ಫೋಟೊವನ್ನು ‘ಹಲಸೂರು ಗೇಟ್‌ ಟ್ರಾಫಿಕ್‌’ ಹೆಸರಿನ ಟ್ವಿಟರ್‌ ಖಾತೆಯಲ್ಲಿ ಸಂಜೆ 5.02 ಗಂಟೆಗೆ ಅಪ್‌ಲೋಡ್‌ ಮಾಡಲಾಗಿತ್ತು. ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ ಕಾರ್ಯಕ್ರಮ ಪುರಭವನದಲ್ಲಿ ನಡೆಯುತ್ತಿದೆ’ ಎಂದು ಬರೆಯಲಾಗಿತ್ತು.

ಈ ಟ್ವೀಟ್‌ ವೀಕ್ಷಿಸಿದ್ದ ಹಲವರು, ಪೊಲೀಸರ ವರ್ತನೆ ಖಂಡಿಸಿ ಮರು ಟ್ವೀಟ್‌ ಮಾಡಿದ್ದಾರೆ. ಅದರಿಂದ ಮುಜುಗರಕ್ಕೀಡಾದ ಪೊಲೀಸರು, ಆ ಫೋಟೊವನ್ನೇ ಟ್ವಿಟರ್ ಖಾತೆಯಿಂದ ಅಳಿಸಿ ಹಾಕಿದ್ದಾರೆ.

ADVERTISEMENT

‘ಇದು ರಾಜಕೀಯ ಪಕ್ಷದ ಕಾರ್ಯಕ್ರಮ. ಪೊಲೀಸರು ನಿರ್ವಹಣೆ ಮಾಡುವ ಟ್ವಿಟರ್‌ನಲ್ಲಿ ಅದರ ಫೋಟೊ ಹೇಗೆ ಬಂತು? ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಲ್ಲವೇ?’ ಎಂದು ಬಸವರಾಜ್‌ ಮೇತ್ರಿ ಪ್ರಶ್ನಿಸಿದ್ದಾರೆ.

ಎಸ್‌. ಕಾರ್ತಿಕ್ ಎಂಬುವವರು, ‘ಸಂಚಾರ ಸಂಬಂಧಿ ವಿಷಯಗಳಿಗೆ ಒತ್ತು ನೀಡಬೇಕಾದ ಪೊಲೀಸರು, ರಾಜಕೀಯ ಪಕ್ಷದ ಕಾರ್ಯಕ್ರಮವನ್ನು
ಪ್ರಚಾರ ಮಾಡಲು ಯಾರು ಹೇಳಿದರು? ನೀವು ರಾಜಕೀಯ ವಕ್ತಾರರಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

‘ಚುನಾವಣಾ ಆಯೋಗವು ಟ್ವೀಟ್‌ ಬಗ್ಗೆ ಗಮನಹರಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಟ್ವೀಟ್ ಮೂಲಕ ಪುಷ್ಪಾ ಒತ್ತಾಯಿಸಿದ್ದಾರೆ.

ನಜೀಬ್ ಫಾರೂಕ್, ‘ಈ ಕೈಯನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ?’ ಎಂದಿದ್ದಾರೆ.

ರಮಣ ರೈ, ‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ವೇಳೆ, ರಾಜಕೀಯ ಪಕ್ಷದ ಪ್ರಚಾರ ಮಾಡು ಎಂದವರು ಯಾರು ನಿಮಗೆ (ಪೊಲೀಸರಿಗೆ)’ ಎಂದು ಕಿಡಿಕಾರಿದ್ದಾರೆ.

*
ಟ್ವೀಟ್‌ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಡಿಸಿಪಿಗೆ ಸೂಚಿಸಿದ್ದೇನೆ. ಅದು ಕೈ ಸೇರಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ.
– ಆರ್‌.ಹಿತೇಂದ್ರ, ಹೆಚ್ಚುವರಿ ಪೊಲೀಸ್‌ ಕಮಿಷನರ್‌(ಸಂಚಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.