ಬೆಂಗಳೂರು: ಸರ್ಕಾರದಲ್ಲಿನ ಕೆಲವು ಪ್ರಭಾವಿ ವ್ಯಕ್ತಿಗಳು ರೈತರ ಹೆಸರಿನಲ್ಲಿ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ನಿವೇಶನಗಳನ್ನು ಪಡೆದುಕೊಂಡಿರುವುದರಿಂದ ಬಿಡಿಎ ಸುಮಾರು 400 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ ಆರೋಪಿಸಿದರು.
‘ಈ ಬಗ್ಗೆ ದಾಖಲೆಗಳೊಂದಿಗೆ ಲೋಕಾಯುಕ್ತರಿಗೆ ದೂರು ನೀಡಿದ್ದೇನೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಡಿಎನ ಹಿರಿಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು. ಲೋಕಾಯುಕ್ತ ತನಿಖೆಯಾದರೆ ಇನ್ನಷ್ಟು ವಿಚಾರಗಳು ಹೊರಬರುತ್ತವೆ’ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
1996ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಗಟು ಉಕ್ಕು ಮಾರುಕಟ್ಟೆಯನ್ನು ಸ್ಥಳಾಂತರಿಸಿ ಹೊಸ ಬಡಾವಣೆಯನ್ನು ನಿರ್ಮಿಸುವ ಉದ್ದೇಶಕ್ಕಾಗಿ ಕೊಂಡದಾಸನಪುರ, ಗೊರವಿಗೆರೆ, ಕಾಜಿ ಸೊಣ್ಣೇಹಳ್ಳಿ ಗ್ರಾಮಗಳಲ್ಲಿ ಒಟ್ಟು 181 ಎಕರೆ ಜಮೀನು ಸ್ವಾಧೀನ ಮಾಡಿಕೊಂಡಿತು. ಆದರೆ ಇಲ್ಲಿಯವರೆಗೂ ಅಲ್ಲಿ ಯಾವುದೇ ಬಡಾವಣೆ ನಿರ್ಮಿಸಿಲ್ಲ. ಸ್ವಾಧೀನ ಮಾಡಿಕೊಂಡ 181 ಎಕರೆ ಜಮೀನು ಏನಾಗಿದೆ ಎಂದು ಬಿಡಿಎ ವಿಚಾರಿಸಿಯೂ ಇಲ್ಲ ಎಂದು ದತ್ತ ಆರೋಪಿಸಿದರು.
ಬಿಡಿಎಗೆ ಜಮೀನು ನೀಡಿದ ರೈತರಿಗೆ/ಭೂಮಾಲಿಕರಿಗೆ ಪ್ರೋತ್ಸಾಹ ಯೋಜನೆಯಡಿ ನಿವೇಶನಗಳನ್ನು ನೀಡುವ ನೆಪದಲ್ಲಿ ಸರ್ಕಾರದಲ್ಲಿನ ಪ್ರಭಾವಿಗಳಿಗೆ 160 ನಿವೇಶನಗಳನ್ನು ನಗರದ ಹಳೆಯ ಪ್ರತಿಷ್ಠಿತ ಬಡಾವಣೆಗಳಲ್ಲಿ ನೀಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.