ADVERTISEMENT

ಪ್ರಶಸ್ತಿ ಸುದ್ದಿ ಕೇಳಿ ಉಪೇಂದ್ರಗೆ ಗಾಬರಿ!

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ಬೆಂಗಳೂರು: ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾದ ಬಳಿಕ ಗುರುವಾರ ಪ್ರಶಸ್ತಿ ಸಿಕ್ಕಿದ ಬಹುತೇಕ ತಾರೆಯರು ಪ್ರತಿಕ್ರಿಯೆ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಸಿಕ್ಕಿದವರು ಸಂತಸ ಪಡುವುದು ಸಹಜವೇ. ಆದರೆ ತಮ್ಮ ನಿರ್ದೇಶನದ  `ಸೂಪರ್~ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದ ಸುದ್ದಿ ಕೇಳಿ ಮನಾಲಿಯಲ್ಲಿ ಶೂಟಿಂಗ್‌ನಲ್ಲಿದ್ದ ಉಪೇಂದ್ರ ಗಾಬರಿಗೊಳಗಾದರಂತೆ!

ಉಪೇಂದ್ರ ಅವರ ಹೊಸ ಚಿತ್ರ `ಕಠಾರಿ ವೀರ ಸುರಸುಂದರಾಂಗಿ~ ಚಿತ್ರದ ಶೂಟಿಂಗ್ ಮನಾಲಿಯಲ್ಲಿ ನಡೆಯುತ್ತಿದೆ. ಶುಕ್ರವಾರ ಚಿತ್ರತಂಡ ಮನಾಲಿಯಿಂದ ಜೋರ್ಡಾನ್ ದೇಶಕ್ಕೆ ತೆರಳಿದೆ.ಮನಾಲಿಯಲ್ಲಿ ಶೂಟಿಂಗ್‌ನಲ್ಲಿದ್ದಾಗ ಉಪೇಂದ್ರ ಅವರಿಗೆ ಬುಧವಾರ ರಾತ್ರಿ ಚಲನಚಿತ್ರ ಆಯ್ಕೆ ಸಮಿತಿಯ ತರುಣ ಸದಸ್ಯರೊಬ್ಬರು ದೂರವಾಣಿ ಕರೆ ಮಾಡಿದ್ದಾರೆ.
 
`ಸಾರ್, ನಾಳೆ ಆಯ್ಕೆ ಸಮಿತಿ ಸಭೆ ನಡೆಯಲಿದೆ. ಅದರಲ್ಲಿ ನಿಮ್ಮ ಚಿತ್ರ ಸೂಪರ್‌ಗೆ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಗುವುದು ಖಂಡಿತಾ. ನಾನೇ ಮುಂದೆ ನಿಂತು ವ್ಯವಸ್ಥೆ ಮಾಡಿದ್ದೇನೆ. ನಾಳೆ ಅಲ್ಲಿ ಪಾರ್ಟಿಗೆ ಎಲ್ಲ ರೆಡಿ ಮಾಡಿಕೊಳ್ಳಿ~ ಎಂದು ಆ ಸದಸ್ಯರು ಆಶ್ವಾಸನೆ ನೀಡಿದರಂತೆ. ಸುದ್ದಿ ಕೇಳಿ ನಗೆಯಾಡಿದ ಉಪೇಂದ್ರ, `ಅಲ್ಲಪ್ಪಾ, ಅದು ಪ್ರಶಸ್ತಿಗಾಗಿ ಮಾಡಿದ ಸಿನಿಮಾ ಅಲ್ಲ. ಅದಕ್ಕೆ ಪ್ರಶಸ್ತಿ ಬರೋದು ಸಾಧ್ಯವಿಲ್ಲ. ಹೇಗೆ ಪ್ರಶಸ್ತಿ ಕೊಡಿಸುತ್ತೀಯ?~ಎಂದು ತಮಾಷೆ ಮಾಡಿದರಂತೆ.

ಆದರೆ ಉಪೇಂದ್ರರ ಆಶ್ಚರ್ಯಕ್ಕೆ ತಕ್ಕಂತೆ ಗುರುವಾರ ಸಂಜೆ ಪ್ರಶಸ್ತಿ ಪ್ರಕಟವಾಗಿಯೇ ಬಿಟ್ಟಿದೆ. ಗೆಳೆಯರೊಬ್ಬರು ಫೋನ್ ಮಾಡಿ ಶೂಟಿಂಗ್‌ನಲ್ಲಿದ್ದ ಉಪೇಂದ್ರರಿಗೆ ಸುದ್ದಿ ತಿಳಿಸಿದಾಗ ಅವರು ಗಾಬರಿಯಾದರಂತೆ. `ಅರೆ.. ಹೇಳಿದಂತೆ ಕೊಡಿಸೇ ಬಿಟ್ಟನಲ್ಲಪ್ಪ! ಪ್ರಶಸ್ತಿ ಸಿಕ್ಕಿದ್ದು ನನಗೇ ಆಶ್ಚರ್ಯ ತಂದಿದೆ. ಅದು ಪ್ರಶಸ್ತಿಯ ಸಿನಿಮಾ ಅಲ್ಲವೇ ಅಲ್ಲ~ ಎಂದು ಹೇಳಿದರಂತೆ. ಉಪೇಂದ್ರ ಮಾತು ಕೇಳಿ ಯೂನಿಟ್‌ನವರೆಲ್ಲ ನಕ್ಕಿದ್ದಾರೆ!

ತಮ್ಮ ಚಿತ್ರಕ್ಕೆ ತಾವೇ ಪ್ರಶಸ್ತಿ ನೀಡಿದರು!

ಈ ಮಧ್ಯೆ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರೊಬ್ಬರು ತಾವೇ ಛಾಯಾಗ್ರಹಣ ಮಾಡಿದ ಚಿತ್ರ `ಸೂಪರ್~ಗೆ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲೇಬೇಕೆಂದು ಸಭೆಯಲ್ಲಿ ಕೂಗಾಡಿ ಆಗ್ರಹಿಸಿದ ಘಟನೆಯೂ ತಡವಾಗಿ ಬೆಳಕಿಗೆ ಬಂದಿದೆ.

ಚಿತ್ರ ಪ್ರಶಸ್ತಿಯ ತೀರ್ಪುಗಾರರೇ ತಮ್ಮ ಚಿತ್ರವನ್ನು ಪ್ರಶಸ್ತಿಗೆ ಆಯ್ಕೆ ಮಾಡುವುದು ನೈತಿಕವಾಗಿ ಎಷ್ಟು ಸರಿ? ಎಂಬ ಪ್ರಶ್ನೆಯೂ ಎದ್ದಿದೆ. ರಾಜ್ಯ ಸರಕಾರದ ಚಲನಚಿತ್ರ ಪ್ರಶಸ್ತಿ ಸಮಿತಿಯ ನಿಯಮಾವಳಿಯಲ್ಲಿ  ತಮ್ಮದೇ ಚಲನಚಿತ್ರವನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಅದೇ ಚಿತ್ರದಲ್ಲಿ ಕೆಲಸ ಮಾಡಿದವರು ಭಾಗವಹಿಸುವಂತಿಲ್ಲ  ಎಂದು ಸ್ಪಷ್ಟವಾಗಿ ನಮೂದಿಸಿದ್ದರೂ ಈ ನಿಯಮವನ್ನು ಉಲ್ಲಂಘಿಸಿ, ಆ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದೇ ಅಲ್ಲದೆ, ಪ್ರಶಸ್ತಿಗಾಗಿ ಪಟ್ಟು ಹಿಡಿದದ್ದು ಸ್ಪಷ್ಟ ಪಕ್ಷಪಾತದ ಪ್ರಕರಣ ಎನ್ನುವ ಮಾತು ಉದ್ಯಮದಲ್ಲಿ ಕೇಳಿ ಬರುತ್ತಿವೆ.

ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಮಟ್ಟಿಗೆ ಈ ವರ್ಷ ವಿವಾದದ ವರ್ಷವಾಗುವಂತಿದೆ. ಈಗಾಗಲೆ ಚಲನಚಿತ್ರ ಸಬ್ಸಿಡಿ ಸಮಿತಿಯ ಅಧ್ಯಕ್ಷರು ಮತ್ತು ಒಬ್ಬ ಸದಸ್ಯರು ಸಬ್ಸಿಡಿ ಪಟ್ಟಿಗೆ ಚಿತ್ರಗಳನ್ನು ಸೇರಿಸಲು ಲಂಚ ಪಡೆದಿದ್ದಾರೆಂಬ ವಿವಾದ ಪೊಲೀಸ್ ಕೇಸ್ ದಾಖಲಾಗಿ, ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿದೆ. ಇದರ ಬೆನ್ನಲ್ಲೆ ಪ್ರಶಸ್ತಿ ಸಮಿತಿಯ ಕೆಲವು ನಿಯಮಬಾಹಿರ ನಡವಳಿಕೆಗಳೂ ವರದಿಯಾಗಿದ್ದು, ಅದೂ ನ್ಯಾಯಾಲಯದ ಕಟ್ಟೆ ಹತ್ತುವ ಸಾಧ್ಯತೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.