ಬೆಂಗಳೂರು: ನಗರದ ಮೂಲಭೂತ ಸೌಕರ್ಯಗಳಿಗೆ ಸರ್ಕಾರ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಿದ್ದು, ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆ ಮತ್ತು ಕಾಮಗಾರಿಗಳಿಗೆ ವಿವಿಧ ಸಂಸ್ಥೆಗಳ ಮೂಲಕ 5,500 ಕೋಟಿ ನೆರವು ಒದಗಿಸುವುದಾಗಿ ಭರವಸೆ ನೀಡಿದೆ. ಅಲ್ಲದೆ, ಬಿಬಿಎಂಪಿ ಹಾಗೂ ಜಲಮಂಡಳಿಗೆ ತಲಾ ಒಂದು ಸಾವಿರ ಕೋಟಿ ಅನುದಾನ; `ನಮ್ಮ ಮೆಟ್ರೊ~ ಯೋಜನೆಗೆ 500 ಕೋಟಿ ಆರ್ಥಿಕ ನೆರವು ನೀಡುವ ಆಶ್ವಾಸನೆ ನೀಡಿದೆ.
ರಸ್ತೆ, ಉದ್ಯಾನವನ ಹಾಗೂ ಘನತ್ಯಾಜ್ಯ ನಿರ್ವಹಣೆ, ಮೂಲ ಸೌಲಭ್ಯ ಸೇರಿದಂತೆ ಪ್ರಮುಖ ಆಯ್ದ ಯೋಜನೆಗಳಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಒಂದು ಸಾವಿರ ಕೋಟಿ ನೆರವು ನೀಡುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಬುಧವಾರ ಮಂಡಿಸಿದ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.
ಐದು ಸಿಗ್ನಲ್ ಮುಕ್ತ ಕಾರಿಡಾರ್: ನಗರದಲ್ಲಿ ವಾಹನ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಪಾಲಿಕೆಯ ಮೂಲಕ ಈ ವರ್ಷ 426 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಒಟ್ಟು 51.5 ಕಿ.ಮೀ. ಉದ್ದದ ಐದು ಮುಖ್ಯವಾದ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಉ್ದ್ದದೇಶಿಸಿದೆ.
ಇದರ ಜತೆಗೆ, 200 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್‌ಶ್ಯೂರ್ ಡಿಸೈನ್ ನಾರ್ಮ್ಸ ಮೇಲೆ ಪ್ರಮುಖ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪ್ರಸ್ತಾಪಿಸಲಾಗಿದೆ. ಎಂಟು ವಾಹನ ನಿಲುಗಡೆ ಸಮುಚ್ಚಯ ಮತ್ತು ಘನ ತ್ಯಾಜ್ಯ ನಿರ್ವಹಣಾ ಮೂಲ ಸೌಲಭ್ಯ ಯೋಜನೆಗಳ ನಿರ್ಮಾಣವನ್ನು ತಲಾ 200 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಹಸಿ ಘನ ತ್ಯಾಜ್ಯ ಬಳಸಿ ಮಿಥೇನ್ ಉತ್ಪಾದಿಸುವ 16 ಯೋಜನೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಜಲಮಂಡಳಿಗೂ 1000 ಕೋಟಿ ನೆರವು: ನಗರಕ್ಕೆ 500 ದಶಲಕ್ಷ ಲೀಟರ್ ಹೆಚ್ಚುವರಿ ನೀರು ಪೂರೈಸುವ ಮೂಲಕ ನಗರದ ಹೊರವಲಯಗಳ ನೀರಿನ ಬವಣೆ ನೀಗಿಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ಕಾವೇರಿ 4ನೇ ಘಟ್ಟ 2ನೇ ಹಂತದ ಯೋಜನೆಯನ್ನು ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
ಬಳಕೆ ಪ್ರಮಾಣ ಲೆಕ್ಕಕ್ಕೆ ಸಿಗದ ನೀರಿನ ಬಳಕೆಯನ್ನು ಕಡಿಮೆ ಮಾಡುವ ಹಾಗೂ ಒಳಚರಂಡಿ ವ್ಯವಸ್ಥೆ ಮತ್ತು ಸಂಸ್ಕರಣಾ ಘಟಕಗಳಿಗೆ ಸಂಬಂಧಿಸಿದ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಒಟ್ಟಾರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ 1000 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.
ಮೆಟ್ರೊಗೆ ರೂ. 500 ಕೋಟಿ ಅನುದಾನ: `ನಮ್ಮ ಮೆಟ್ರೊ~ ಯೋಜನೆಗೆ 500 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಇನ್ನು ಒಂಬತ್ತು ತಿಂಗಳಲ್ಲಿ ಮಾರ್ಗ-1ರಲ್ಲಿ ಇನ್ನೂ 10.4 ಕಿ.ಮೀ. ಕಾಮಗಾರಿ ಪ್ರಾರಂಭಿಸಲು ಉದ್ದೇಶಿಸಿರುವ ಸರ್ಕಾರ, 2013ರ ಡಿಸೆಂಬರ್ ಅಂತ್ಯದೊಳಗೆ ಒಂದನೇ ಹಂತದ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಿದೆ.
ಒಟ್ಟು 26,405 ಕೋಟಿ ರೂಪಾಯಿ ವೆಚ್ಚದಲ್ಲಿ 72 ಕಿ.ಮೀ. ಉದ್ದದ 4 ವಿಸ್ತರಣಾ ಮಾರ್ಗಗಳು ಹಾಗೂ 2 ಹೊಸ ಮಾರ್ಗಗಳನ್ನು ಒಳಗೊಂಡಂತಹ 2ನೇ ಹಂತಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಪ್ರಯಾಣಿಕರಿಗೆ ಹೆಚ್ಚು ಅಗತ್ಯವಾದ ಕೊನೆಯ ಹಂತದವರೆಗಿನ ಸಂಪರ್ಕವನ್ನು ಈ ನಾಲ್ಕು ವಿಸ್ತರಣಾ ಮಾರ್ಗಗಳು ಕಲ್ಪಿಸಲಿವೆ. ನಗರದ ಕೆಲವು ಜನನಿಬಿಡ ಮತ್ತು ಸಂಚಾರ ದಟ್ಟಣೆ ಪ್ರದೇಶಗಳ ಮೂಲಕ ಹಾದು ಹೋಗುವ ಎರಡು ಹೊಸ ಮಾರ್ಗಗಳು ಮಾಹಿತಿ ತಂತ್ರಜ್ಞಾನ ಉದ್ಯಮಗಳಿಗೆ ಸಂಪರ್ಕ ಕಲ್ಪಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.
`ನಮ್ಮ ಮೆಟ್ರೊ~ದ ಎರಡನೇ ಹಂತದ ಕಾಮಗಾರಿಯನ್ನು 2012-13ರಲ್ಲಿ ಪ್ರಾರಂಭಿಸಿ, 2017-18ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಎರಡನೇ ಹಂತದಲ್ಲೂ ಪಾಲುದಾರಿಕೆ ವಹಿಸಲು ಹಾಗೂ ಕಾಮಗಾರಿಗೆ ಭಾಗಶಃ ಹಣಕಾಸು ನೆರವು ಒದಗಿಸುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಕೋರಿದೆ.
ಸ್ಪಷ್ಟ ಕಾರ್ಯನೀತಿ: ಅಡ್ಡಾದಿಡ್ಡಿಯಾಗಿ ನಗರ ಬೆಳೆಯುವುದನ್ನು ತಡೆಯಲು ಸಹಕಾರಿಯಾಗುವಂತೆ ಸರ್ಕಾರ ಒಂದು ಸ್ಪಷ್ಟ ಕಾರ್ಯನೀತಿಯನ್ನು ರೂಪಿಸಲು ಕೂಡ ಉದ್ದೇಶಿಸಿದೆ.
ಕೆಂಪೇಗೌಡ ಬಡಾವಣೆ ಅಭಿವೃದ್ಧಿ, ಅಡಚಣೆರಹಿತ ಸಂಪರ್ಕಕ್ಕಾಗಿ ಹೊರವಲಯ ರಸ್ತೆ ಸುಧಾರಣೆ ಮತ್ತು ಎತ್ತರಿಸಿದ ರಸ್ತೆಗಳ ನಿರ್ಮಾಣ ಕಾರ್ಯವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
2012-13ರಲ್ಲಿ ಪೆರಿಫೆರಲ್ ಹೊರವರ್ತುಲ ರಸ್ತೆ ಕಾಮಗಾರಿಯ ಯೋಜನಾ ವರದಿ ತಯಾರಿಕೆ ಮತ್ತು ಭೂಸ್ವಾಧೀನ ಕಾರ್ಯವನ್ನು ಕೈಗೆತ್ತಿಕೊಳ್ಳಲು ಕೂಡ ಉದ್ದೇಶಿಸಲಾಗಿದೆ.
ರಾಜ್ಯದ ನಗರ ಪ್ರದೇಶದಲ್ಲಿ ಕೆರೆ ಮತ್ತು ಜಲ ಘಟಕಗಳನ್ನು ಸಂರಕ್ಷಿಸುವ ಅಗತ್ಯತೆಯನ್ನು ಸರ್ಕಾರ ಮನಗಂಡು ಕೆರೆಗಳ ಸಂರಕ್ಷಣೆ, ಪುನರ್ ಸ್ಥಾಪನೆ ಹಾಗೂ ಜೀರ್ಣೋದ್ಧಾರಕ್ಕಾಗಿ ಬಜೆಟ್‌ನಲ್ಲಿ 50 ಕೋಟಿ ರೂಪಾಯಿಗಳನ್ನು ಒದಗಿಸಿದ್ದು, ಇದಕ್ಕೆ ಪೂರಕವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿ ಸಮಾನ ಮೊತ್ತವನ್ನು ಭರಿಸಲಿವೆ.
ಡಿಸೆಂಬರ್ ವೇಳೆಗೆ ಪೂರ್ಣ: ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 1479 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ವಿಸ್ತರಣಾ ಕಾರ್ಯವನ್ನು ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ಇದರಿಂದ ವಿಮಾನ ನಿಲ್ದಾಣವು ಒಂದು ವರ್ಷದಲ್ಲಿ ಈಗಿನ 11 ದಶಲಕ್ಷ ಪ್ರಯಾಣಿಕರ ಸಾಮರ್ಥ್ಯಕ್ಕೆ ಬದಲಿಗೆ 17.5 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಲಿದೆ.
ಅನಿಲ ಕೊಳವೆ ಮಾರ್ಗ ಈ ವರ್ಷ ಪೂರ್ಣ: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಜಿಎಐಎಲ್) ಧಾಬೋಲ್‌ನಿಂದ ಬೆಂಗಳೂರಿನವರೆಗೆ ಕೈಗೊಂಡಿರುವ ಪ್ರಾಕೃತಿಕ ಅನಿಲ ಕೊಳವೆ ಮಾರ್ಗದ ಕಾಮಗಾರಿಯನ್ನು ಈ ಹಣಕಾಸು ವರ್ಷದಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ಆ ಮೂಲಕ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ವಿದ್ಯುತ್ ಸ್ಥಾವರಗಳು, ಸಾಗಣೆ ವಾಹನಗಳು, ಕೈಗಾರಿಕೆಗಳು ಮತ್ತು ಕುಟುಂಬಗಳಿಗೆ ಶುದ್ಧ ಇಂಧನ ಒದಗಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಜಿಎಐಎಲ್ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಮತ್ತು ಅಭಿವೃದ್ಧಿ ನಿಗಮದೊಂದಿಗೆ ಜಂಟಿ ಉದ್ಯಮ ಸ್ಥಾಪಿಸಲಾಗಿದೆ.
200 ಕೋಟಿ ವೆಚ್ಚದಲ್ಲಿ ಎಂಟು ಮಲ್ಟಿ ಲೆವೆಲ್ ಪಾರ್ಕಿಂಗ್
ಸ್ವಾತಂತ್ರ್ಯ ಉದ್ಯಾನವನ; ಕೋರಮಂಗಲ ಫೋರಂ ಮಾಲ್ ಹತ್ತಿರ, ಹಾಸ್‌ಮ್ಯಾಟ್ ಆಸ್ಪತ್ರೆ ಮುಂಭಾಗ, ರಸೆಲ್ ಮಾರುಕಟ್ಟೆ ಮುಂಭಾಗ, ಎಸ್.ಪಿ. ಕ್ರಾಸ್ ರಸ್ತೆ, ಪುರಭವನ ಬಳಿ, ಯಲಹಂಕ ಆರ್‌ಟಿಓ ಕಚೇರಿ ಸಮೀಪ, ವಿಜಯನಗರ ಮೆಟ್ರೊ ನಿಲ್ದಾಣ ಬಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.