ADVERTISEMENT

ಬಡ್ತಿ: ನ್ಯಾಯಮೂರ್ತಿಗಳಿಂದ ವಿಭಿನ್ನ ನಿಲುವು

​ಪ್ರಜಾವಾಣಿ ವಾರ್ತೆ
Published 13 ಜೂನ್ 2012, 19:30 IST
Last Updated 13 ಜೂನ್ 2012, 19:30 IST

ಬೆಂಗಳೂರು: ಪಿ.ಡಿ.ದಿನಕರನ್ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಅವಧಿಯಲ್ಲಿ 2009ರಲ್ಲಿ ಕಾಯ್ದೆಯೊಂದಕ್ಕೆ ತಿದ್ದುಪಡಿ ತಂದು ನ್ಯಾಯಾಲಯದ ಸಿಬ್ಬಂದಿಗೆ ನೀಡಿರುವ ಬಡ್ತಿಯು ಸರಿಯೇ, ಅಲ್ಲವೇ ಎಂಬ ಬಗ್ಗೆ ವಿಭಾಗೀಯ ಪೀಠದ ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ನಿಲುವು ತಳೆದಿದ್ದಾರೆ.

ಸೆಕ್ಷನ್ ಆಫೀಸರ್, ರಿಜಿಸ್ಟ್ರಾರ್, ಪ್ರಥಮ- ದ್ವಿತೀಯ ದರ್ಜೆ ಸಹಾಯಕರು, ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಹೀಗೆ ವಿವಿಧ ಶ್ರೇಣಿಗಳ ಸಿಬ್ಬಂದಿಯ ಬಡ್ತಿಗೆ ಸಂಬಂಧಿಸಿದಂತೆ ಹಿಂದೆ ಇದ್ದ ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಗೆ ಮಾಡಿ ತಿದ್ದುಪಡಿ ಮಾಡಿರುವ ಪ್ರಕರಣ ಇದಾಗಿದೆ.

ಬಡ್ತಿಯು ಸರಿಯಾಗಿ ನೀಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಹೈಕೋರ್ಟ್ ಹಾಗೂ ಬಡ್ತಿ ಪಡೆದ ಸಿಬ್ಬಂದಿ ಸಲ್ಲಿಸಿದ್ದ ಮೇಲ್ಮನವಿಗೆ ನ್ಯಾಯಮೂರ್ತಿಗಳಾದ ಆನಂದ ಬೈರಾರೆಡ್ಡಿ ಹಾಗೂ ಸುಭಾಷ್ ಬಿ. ಅಡಿ ಅವರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದರಿಂದ ಪ್ರಕರಣದ ವಿಚಾರಣೆಯನ್ನು ಮೂರನೆಯ ನ್ಯಾಯಮೂರ್ತಿಗಳು ನಡೆಸಬೇಕಿದೆ.
ಅವರು ನೀಡುವ ತೀರ್ಪು ನ್ಯಾಯಾಲಯದ ನೂರಾರು ಸಿಬ್ಬಂದಿಯ `ಭವಿಷ್ಯ~ವನ್ನು ನಿರ್ಧರಿಸಲಿದೆ.
 
ಕೋರ್ಟ್ ಹೇಳಿದ್ದೇನು?
`ಮುಖ್ಯ ನ್ಯಾಯಮೂರ್ತಿಗಳಿಗೆ ಸಂವಿಧಾನ 229ನೇ ವಿಧಿಯ ಪ್ರಕಾರ ನಿಯಮಕ್ಕೆ ತಿದ್ದುಪಡಿ ತಂದು ಬಡ್ತಿಗೆ ಹೆಚ್ಚಿನ ಶೈಕ್ಷಣಿಕ ಅರ್ಹತೆ ಗೊತ್ತುಮಾಡುವ ಅಧಿಕಾರ ಇದೆ. ಇದಕ್ಕೆ ರಾಜ್ಯಪಾಲರ ಅನುಮತಿ ಅಗತ್ಯವೂ ಇಲ್ಲ~ ಎಂದು ಇಬ್ಬರೂ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಆದರೆ ನ್ಯಾ. ಬೈರಾರೆಡ್ಡಿ ಅವರು, `ಈ ತಿದ್ದುಪಡಿಯನ್ನು ಹಾಲಿ ಇರುವ ಸಿಬ್ಬಂದಿಗೆ ಅನ್ವಯ ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ 2009ರಲ್ಲಿ ತಿದ್ದುಪಡಿ ಬರುವ ಮುನ್ನ ತೆರವುಗೊಂಡಿದ್ದ ಸ್ಥಾನಗಳಿಗೆ ನೀಡಲಾದ ಬಡ್ತಿಯನ್ನು ರದ್ದುಗೊಳಿಸಬೇಕು. ನಿಯಮಾನುಸಾರ ಬಡ್ತಿ ನೀಡುವವರೆಗೆ ಈಗ ಬಡ್ತಿ ಹೊಂದಿರುವ ಸಿಬ್ಬಂದಿ ತಮ್ಮ ಹುದ್ದೆಯಲ್ಲಿ ಉಸ್ತುವಾರಿಯಾಗಿ ಮುಂದುವರಿಯಬೇಕು~ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ

ಆದರೆ ನ್ಯಾ.ಅಡಿ ಅವರು, `ತಿದ್ದುಪಡಿ ಬರುವ ಪೂರ್ವದಲ್ಲಿ ತೆರವುಗೊಂಡಿರುವ ಸ್ಥಾನಗಳಿಗೆ ಭರ್ತಿ ಮಾಡುವಾಗ ತಿದ್ದುಪಡಿ ನಂತರದ ನಿಯಮ ಅನ್ವಯ ಮಾಡಿರುವುದು ಸರಿಯಲ್ಲ. ಹಾಗೆಯೇ, ತಿದ್ದುಪಡಿ ನಂತರದಲ್ಲಿ ತೆರವುಗೊಂಡಿರುವ ಸ್ಥಾನಗಳಿಗೆ ಹಳೆಯ ನಿಯಮ ಅನ್ವಯ ಮಾಡಿರುವುದು ಕಾನೂನುಬಾಹಿರ. ಇದನ್ನು ಮೀರಿ ಬಡ್ತಿ ಪಡೆದಿರುವ ಸಿಬ್ಬಂದಿಯ ಬಡ್ತಿಯು ರದ್ದುಗೊಳ್ಳಬೇಕು~ ಎಂದಿದ್ದಾರೆ. ಮೂರನೆಯ ನ್ಯಾಯಮೂರ್ತಿಗಳು, ಈ ಎರಡು ತೀರ್ಪಿನಲ್ಲಿ ಒಂದನ್ನು ಎತ್ತಿಹಿಡಿಯಬೇಕಿದೆ.

ಏನಿದು ವಿವಾದ:ಹೈಕೋರ್ಟ್ ಕಾಯ್ದೆಯ ಕೆಲವು ನಿಯಮಗಳಿಗೆ 2009ರಲ್ಲಿ ತಿದ್ದುಪಡಿ  ತಂದಿದ್ದ ನ್ಯಾ. ದಿನಕರನ್ ಆ ತಿದ್ದುಪಡಿ ಅನ್ವಯ ಹಲವರಿಗೆ ಬಡ್ತಿ ನೀಡಿದ್ದರು.ನಿಯಮಾನುಸಾರ ಬಡ್ತಿಗೆ ಅರ್ಹರಾದವರನ್ನು ಕಡೆಗಣಿಸಿ, ತಮ್ಮ ಆಪ್ತರು ಎಂಬ ಕಾರಣಕ್ಕೆ ಕೆಲವು ಸಿಬ್ಬಂದಿಗೆ ಬಡ್ತಿ ನೀಡಲಾಗಿದೆ ಎಂದು ಬಡ್ತಿ ವಂಚಿತ ಸಿಬ್ಬಂದಿ ಏಕಸದಸ್ಯಪೀಠದ ಮೊರೆ ಹೋಗಿದ್ದರು. ಈ ಸಿಬ್ಬಂದಿ ಪರವಾಗಿ ಪೀಠ ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಈಗ ಮೇಲ್ಮನವಿ ಮೂಲಕ ಪ್ರಶ್ನಿಸಲಾಗಿದೆ.

ನ್ಯಾಯಮೂರ್ತಿಗಳ ವಸತಿಗಾಗಿ ಜಾಗ
ಹೈಕೋರ್ಟ್ ನ್ಯಾಯಮೂರ್ತಿಗಳ ವಸತಿಗಾಗಿ ನಾಲ್ಕು ಕಡೆಗಳಲ್ಲಿ ಜಾಗ ಗೊತ್ತು ಮಾಡಿರುವ ಸರ್ಕಾರ, ಈ ಮಾಹಿತಿಯನ್ನು ಬುಧವಾರ ನ್ಯಾಯಾಲಯದ ಮುಂದಿಟ್ಟಿದೆ.

ಕೆ.ಆರ್.ಪುರ ಹೋಬಳಿಯ ಬೈರತಿಖಾನೆ ಗ್ರಾಮದ ಅರ್ಕಾವತಿ ಲೇಔಟ್ ಬಳಿ 8 ಎಕರೆ (ಇದು ಹೈಕೋರ್ಟ್‌ನಿಂದ 14 ಕಿ.ಮೀ. ಅಂತರದಲ್ಲಿದೆ); ಭೂಪಸಂದ್ರದ ಬಳಿ 6.38 ಎಕರೆ (9.5 ಕಿ.ಮೀ. ಅಂತರದಲ್ಲಿದೆ); ನಾಗಾವರದಲ್ಲಿ 10.19 ಎಕರೆ (10.5 ಕಿ.ಮೀ. ಅಂತರ) ಹಾಗೂ ಹೆಣ್ಣೂರು- ಬಾಣಸವಾಡಿ 3ನೇ ಹಂತದಲ್ಲಿ 10.19 ಎಕರೆ (10.5 ಕಿ.ಮೀ. ಅಂತರ) ಜಾಗ ಗೊತ್ತು ಮಾಡಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಲಿಖಿತ ರೂಪದಲ್ಲಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠಕ್ಕೆ ಸಲ್ಲಿಸಿದರು. ಈ ಪೈಕಿ ಅರ್ಕಾವತಿ ಲೇಔಟ್ ಬಳಿ ಜಾಗ ಪ್ರಶಸ್ತವಾಗಿದ್ದು, ಅಲ್ಲಿಯೇ ವಸತಿ ನಿರ್ಮಾಣ ಮಾಡಬಹುದು ಎಂಬ ಮಾಹಿತಿಯನ್ನು ಸರ್ಕಾರದ ಪರ ವಕೀಲ ರವೀಂದ್ರ ಕೊಲ್ಲೆ ಪೀಠಕ್ಕೆ ನೀಡಿದರು.

ಎಚ್‌ಎಸ್‌ಆರ್ ಲೇಔಟ್, ಹೆಬ್ಬಾಳ ಸೇರಿದಂತೆ ಕೆಲವು ಕಡೆಗಳಲ್ಲಿ ಈ ಹಿಂದೆ ಗೊತ್ತು ಮಾಡಿದ್ದ ಜಾಗಗಳು ಒಂದಿಲ್ಲೊಂದು ಕಾರಣದಿಂದ ವಿವಾದಕ್ಕೆ ಒಳಗಾದ ಹಿನ್ನೆಲೆಯಲ್ಲಿ ಈ ನಾಲ್ಕು ಜಾಗಗಳನ್ನು ಈಗ ಗೊತ್ತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT