ADVERTISEMENT

ಬಸವಣ್ಣನಿಂದ ಸಮಾಜದಲ್ಲಿ ಸಾಮರಸ್ಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2012, 19:30 IST
Last Updated 24 ಜೂನ್ 2012, 19:30 IST

ಮಹದೇವಪುರ: `ಶರಣ ಶ್ರೇಷ್ಠರಾದ ಬಸವೇಶ್ವರರು ಸಮಾಜದಲ್ಲಿ ಸಾಮರಸ್ಯ ಸಾಧಿಸಲು ಪ್ರಯತ್ನಿಸಿದರು~ ಎಂದು ಶಾಸಕ ಅರವಿಂದ ಲಿಂಬಾವಳಿ ಭಾನುವಾರ ಇಲ್ಲಿ ಹೇಳಿದರು.ಬಿಜೆಪಿ ಸ್ಥಳೀಯ ಘಟಕ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ಬಸವೇಶ್ವರರ ತತ್ವ-ಸಿದ್ದಾಂತಗಳು ಎಂದೆಂದಿಗೂ ಪ್ರಸ್ತುತ~ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮೀಜಿ, `ಬಸವೇಶ್ವರರು ಸಂಸ್ಕಾರವೇ ಕುಲವೆಂದು ಭಾವಿಸಿದವರು. ಶಿವನ ಪೂಜೆ ಮಾಡುವವರೇ ನಿಜವಾದ ಮನುಷ್ಯರು. ಸಕಲ ಜೀವಿಗಳ ಒಳಿತನ್ನು ಬಯಸುವವರ ಮೇಲೆ ದೇವರ ಕೃಪೆ ಇದ್ದೇ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸಹಬಾಳ್ವೆಯಿಂದ ಬದುಕುವುದನ್ನು ಕಲಿಯಬೇಕು~ ಎಂದು ಸಲಹೆ ಮಾಡಿದರು.

ವಿಭೂತಿಪುರ ವೀರಸಿಂಹಾಸನ ಸಂಸ್ಥಾನದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ಘಟಕದ ಅಧ್ಯಕ್ಷ ಪಿ.ಕೆ.ಜಯಚಂದ್ರರೆಡ್ಡಿ, ಬಿಬಿಎಂಪಿ ಸದಸ್ಯರಾದ ಎನ್.ಆರ್.ಶ್ರೀಧರ್‌ರೆಡ್ಡಿ, ಸಚ್ಚಿದಾನಂದಮೂರ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೋತ್ಥಾನ ರಕ್ತನಿಧಿ ಸಂಸ್ಥೆಯ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಸುಮಾರು 150ಕ್ಕೂ ಹೆಚ್ಚು ಯುವಕ- ಯುವತಿಯರು ಶಿಬಿರದಲ್ಲಿ ಭಾಗವಹಿಸಿ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.