ADVERTISEMENT

ಬಸವ ಸಂಶೋಧನಾ ಕೇಂದ್ರಕ್ಕೆ ಚಿಂತನೆ

‘ಬಸವಶ್ರೀ’,‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ಮೇ 2014, 19:30 IST
Last Updated 4 ಮೇ 2014, 19:30 IST
ಬಸವ ವೇದಿಕೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಸಂಶೋಧಕ ಆರ್‌.ಶಿವಣ್ಣ ಅವರಿಗೆ ‘ವಚನ ಸಾಹಿತ್ಯಶ್ರೀ’, ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌. ರಾವ್‌ ಅವರಿಗೆ ‘ಬಸವಶ್ರೀ’ ಹಾಗೂ ಲೇಖಕಿ ಲತಾ ರಾಜಶೇಖರ್‌ (ಬಲತುದಿ) ಅವರಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಿದರು. ಸಿ.ಎನ್‌.ಆರ್‌. ರಾವ್‌ ಅವರ ಪತ್ನಿ ಇಂದುಮತಿ, ಉಪಲೋಕಾಯುಕ್ತ ಸುಭಾಷ್‌ ಬಿ. ಅಡಿ, ಬಸವ ವೇದಿಕೆ ಕಾರ್ಯಾಧ್ಯಕ್ಷ ಸಿ.ಸೋಮಶೇಖರ್‌, ಉಪಾಧ್ಯಕ್ಷ ಎಸ್‌.ಷಡಕ್ಷರಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಬಸವ ವೇದಿಕೆ ಉಪಾಧ್ಯಕ್ಷ ಎಂ.ಎಸ್.ಆರ್‌. ಆರಾಧ್ಯ, ಸಹಕಾರ ಸಚಿವ ಎಚ್‌.ಎಸ್‌.ಮಹದೇವ ಪ್ರಸಾದ್‌ ಮತ್ತಿತರರು ಚಿತ್ರದಲ್ಲಿದ್ದಾರೆ 	– ಪ್ರಜಾವಾಣಿ ಚಿತ್ರ
ಬಸವ ವೇದಿಕೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಸಂಶೋಧಕ ಆರ್‌.ಶಿವಣ್ಣ ಅವರಿಗೆ ‘ವಚನ ಸಾಹಿತ್ಯಶ್ರೀ’, ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌. ರಾವ್‌ ಅವರಿಗೆ ‘ಬಸವಶ್ರೀ’ ಹಾಗೂ ಲೇಖಕಿ ಲತಾ ರಾಜಶೇಖರ್‌ (ಬಲತುದಿ) ಅವರಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಿದರು. ಸಿ.ಎನ್‌.ಆರ್‌. ರಾವ್‌ ಅವರ ಪತ್ನಿ ಇಂದುಮತಿ, ಉಪಲೋಕಾಯುಕ್ತ ಸುಭಾಷ್‌ ಬಿ. ಅಡಿ, ಬಸವ ವೇದಿಕೆ ಕಾರ್ಯಾಧ್ಯಕ್ಷ ಸಿ.ಸೋಮಶೇಖರ್‌, ಉಪಾಧ್ಯಕ್ಷ ಎಸ್‌.ಷಡಕ್ಷರಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಬಸವ ವೇದಿಕೆ ಉಪಾಧ್ಯಕ್ಷ ಎಂ.ಎಸ್.ಆರ್‌. ಆರಾಧ್ಯ, ಸಹಕಾರ ಸಚಿವ ಎಚ್‌.ಎಸ್‌.ಮಹದೇವ ಪ್ರಸಾದ್‌ ಮತ್ತಿತರರು ಚಿತ್ರದಲ್ಲಿದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅಂತರರಾಷ್ಟ್ರೀಯ ಬಸವ ಸಂಶೋಧನಾ ಕೇಂದ್ರ ಸ್ಥಾಪನೆ ಕುರಿತು ಪರಿಶೀಲನೆ ನಡೆಸ­ಲಾ­ಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಸವ ವೇದಿಕೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಆಚರಣೆ ಹಾಗೂ ‘ಬಸವಶ್ರೀ’ ಮತ್ತು ‘ವಚನ ಸಾಹಿತ್ಯ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಬಸವ ಸಂಶೋಧನಾ ಕೇಂದ್ರದ  ಸ್ಥಾಪನೆಯ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಚರ್ಚೆ ನಡೆಸಿ, ರೂಪುರೇಷೆಗಳನ್ನು ಸಿದ್ಧಪಡಿಸ­ಲಾಗು­ವುದು’ ಎಂದರು.

‘ಬಸವಾದಿ ಶರಣರು ಸಾಮಾಜಿಕ ನ್ಯಾಯದ ಪರಿಕಲ್ಪನೆ ನೀಡಿದವರು. ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಜನರ ನಡುವೆ ತಂದಾಗ ಮಾತ್ರ ಜಾತಿ ತಾರತಮ್ಯ ಭಾವ ಕಡಿಮೆ­ಯಾಗಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಬಸವಣ್ಣನವರ ಕುರಿತು ಬರೀ ಮಾತು ಅಥವಾ ಕಾರ್ಯಕ್ರಮಗಳಾದರೆ ಸಾಲದು, ಅವರ ವಚನಗಳ ಸಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಿಜವಾದ ಅರ್ಥದಲ್ಲಿ ಬಸವಣ್ಣನಿಗೆ ಗೌರವ­ವನ್ನು ಸಲ್ಲಿಸಿದಂತಾಗುತ್ತದೆ’ ಎಂದು ಹೇಳಿದರು.

‘ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದವರು ಮೇಧಾವಿ­ಗಳಾಗುತ್ತಾರೆ ಎಂಬುದು ತಪ್ಪುಕಲ್ಪನೆ­ಯಾಗಿದೆ. ಇದಕ್ಕೆ ಕನ್ನಡ ಮಾಧ್ಯಮದಲ್ಲಿ ಓದಿ ಸಾಧನೆ ಮಾಡಿದ ಸಿ.ಎನ್‌.ಆರ್‌.ರಾವ್‌ ಅವರೇ ಸಾಕ್ಷಿ’ ಎಂದರು.

ಸರ್ಕಾರದಿಂದ ಸನ್ಮಾನ: ‘ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ  ಸಿ.ಎನ್‌.ಆರ್‌.­ರಾವ್‌ ಅವರಿಗೆ ಸರ್ಕಾರದಿಂದ ನಾಗರಿಕ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ತಿಳಿಸಿದರು.

ದೇವರಿದ್ದಾನೆ ಎಂಬ ನಂಬಿಕೆ: ‘ಬಸವಶ್ರೀ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ವಿಜ್ಞಾನಿ ಸಿ.ಎನ್‌.ಆರ್‌.­ರಾವ್‌, ‘ದೇವರಿದ್ದಾನೆ ಎಂದು ನಾನು ಕೂಡ ನಂಬುತ್ತೇನೆ. ಜಗತ್ತು ಮತ್ತು ನಮ್ಮ ಹುಚ್ಚಿನ ಮೇಲೆ ಲಗಾಮು ಹಾಕಲು ದೇವರೆಂಬ ಶಕ್ತಿ ಇದ್ದಾನೆ. ಬೇರೆ– ಬೇರೆಯವರ ಭಾವನೆಯಲ್ಲಿ ದೇವರು ಹಲವು ರೀತಿಯಿದ್ದಾನೆ’ ಎಂದರು.

‘ಸಣ್ಣ ಸಂಶೋಧನೆ ಮಾಡಿದ ನನಗೆ ಈ ಪ್ರಶಸ್ತಿ ಬರುತ್ತದೆಂದು ಎಣಿಸಿರಲಿಲ್ಲ. ನಾನು ಚಿಕ್ಕವನಿದ್ದಾಗ ನಮ್ಮ ತಾಯಿ ಬಸವಣ್ಣನವರ ವಚನಗಳ ಕುರಿತು ಅವು ವಚನಗಳಲ್ಲ, ಉಪನಿಷತ್ತುಗಳು ಎಂಬುದಾಗಿ ಹೇಳುತ್ತಿದ್ದರು’ ಎಂದು ನೆನಪಿಸಿಕೊಂಡರು.

‘ಜನಸೇವೆಯೇ ದೇವರ ಸೇವೆಯಾಗಿದೆ, ಬಡವರಿಗೆ, ದೀನ ದುರ್ಬಲರಿಗೆ ನಮ್ಮಿಂದಾದ ಸಹಾಯ ಮಾಡಬೇಕು. ವಿದ್ಯಾರ್ಥಿಗಳಿಗೆ ವಿದ್ಯಾ­ದಾನ ಮಾಡಬೇಕು. ಕೊನೆಯವರೆಗೂ ವಿಜ್ಞಾನ ಕ್ಷೇತ್ರದಲ್ಲಿ ಇದ್ದುಕೊಂಡು ಸೇವೆ ಮಾಡಬೇಕೆಂಬ ಆಸೆಯಿದೆ’ ಎಂದು ಹೇಳಿದರು.

ಉಪಲೋಕಾಯುಕ್ತ ಸುಭಾಷ್‌ ಬಿ.ಅಡಿ, ‘ಬಸವಣ್ಣ ಮಹಾ ಸಂತ. ವಚನ ಸಾಹಿತ್ಯ ಕೆಲವರಿಗೆ ಮಾತ್ರ ಸೀಮಿತವಾಗಬಾರದು. ಬಸವಣ್ಣ ಯಾವುದೇ ಒಂದು ಜಾತಿಗೆ ಸೀಮಿತವಾದವರಲ್ಲ. ಅವರು ಮಹಾ ಮಾನವತಾವಾದಿ’ ಎಂದರು.

‘ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ’
‘ಸಿಬ್ಬಂದಿ ವೇತನ, ಡೀಸೆಲ್ ದರ ಏರಿಕೆ ಇತ್ಯಾದಿಗಳಿಂದ ಸಾರಿಗೆ ಸಂಸ್ಥೆಗೆ ಆರ್ಥಿಕವಾಗಿ ಹೆಚ್ಚಿನ ಹೊರೆಯಾ
ಗಿದ್ದ­ರಿಂದ ಬಸ್ ಪ್ರಯಾಣ ದರದಲ್ಲಿ ಏರಿಕೆ ಮಾಡುವುದು ಅನಿವಾರ್ಯ­ವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

‘ಸಿಬ್ಬಂದಿ ವೇತನ, ಅವರಿಗೆ ಕಲ್ಪಿಸಬೇಕಾ-­ಗಿರುವ ಸೌಲಭ್ಯಗಳು ಹಾಗೂ ಇತರ ಹಲವು ಏರಿಕೆಗಳಿಂದಾಗಿ ಬಸ್ ಪ್ರಯಾಣ ದರ ಏರಿಸದೆ ಅನ್ಯ ದಾರಿಯಿರಲಿಲ್ಲ’ ಎಂದರು.

‘ದೇವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ­ಯಲ್ಲಿನ ಸುಂಕ ವಸೂಲಿ ಘಟಕದಲ್ಲಿ ಶುಲ್ಕ ಏರಿಕೆ ಮಾಡಿರುವು­ದರಿಂದ ಗಲಾಟೆಯಾಗಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದರು.

‘ವಚನ ಸಾಹಿತ್ಯ ಶ್ರೀ’ ಪ್ರಶಸ್ತಿ ಪಡೆದ ಲೇಖಕಿ ಲತಾ ರಾಜಶೇಖರ್‌, ‘ಬಸವಣ್ಣನವರು ಹೇಳಿದ ವಚನಗಳ ಸಾರ ಇಂದಿಗೂ ಪ್ರಸ್ತುತ.  ಬಸವಣ್ಣ ಸಮಾಜದ ಜ್ಯೋತಿ. 12ನೇ ಶತಮಾನದಲ್ಲಿಯೇ ಕ್ರಾಂತಿ ಮಾಡಿದ ಬಸವಣ್ಣ ಸಮಾಜದಲ್ಲಿನ ತಾರತಮ್ಯ ಭಾವನೆಗಳ ವಿರುದ್ಧ ಹಾಗೂ ಸ್ತ್ರೀಯರ ಹಕ್ಕುಗಳಿಗಾಗಿ ಹೋರಾಡಿದವರು’ ಎಂದರು.

‘ವಚನ ಸಾಹಿತ್ಯ ಶ್ರೀ’ ಪ್ರಶಸ್ತಿ ಪಡೆದ ಶರಣ ಸಾಹಿತ್ಯ ಸಂಶೋಧಕ ಆರ್‌.ಶಿವಣ್ಣ, ‘ಬಸವ ತತ್ವ ಪ್ರಚಾರದಲ್ಲಿ ನನ್ನದು ಅಳಿಲು ಸೇವೆ. ಬಸವನ ತತ್ವಗಳು ಜನಸಾಮಾನ್ಯರಿಗೆ ತಲುಪಬೇಕು. ವಚನಗಳು ವೇದ–ಉಪನಿಷತ್‌ಗಳಿಗಿಂತ ಕಡಿಮೆ­ಯಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.