ADVERTISEMENT

ಬಾರ್ ಉದ್ಯೋಗಿ ಕೊಲೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಬೆಂಗಳೂರು: ಬಾರ್ ಮುಚ್ಚಿದ ನಂತರ ಮದ್ಯ ನೀಡಲು ನಿರಾಕರಿಸಿದ ಕಾರಣಕ್ಕೆ ದುಷ್ಕರ್ಮಿಗಳು ಪ್ರಕಾಶ್ (25) ಎಂಬುವರನ್ನು ಚಾಕುನಿಂದ ಇರಿದು ಕೊಲೆ ಮಾಡಿರುವ ಘಟನೆ ಅಶೋಕನಗರದಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.

ಮೈಸೂರು ಜಿಲ್ಲೆ ಕೆ.ಆರ್.ಪುರ ಮೂಲದ ಪ್ರಕಾಶ್, ಅಶೋಕನಗರದ ಹುಳಿಯಾರ್ ಕೋಯಿಲ್ ಸ್ಟ್ರೀಟ್‌ನಲ್ಲಿರುವ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿದ ನಂತರ ಪ್ರಕಾಶ್ ಮತ್ತು ಇತರೆ ಸಹೋದ್ಯೋಗಿಗಳು ಬಾರ್‌ನಲ್ಲೇ ಮಲಗುತ್ತಿದ್ದರು.

ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ಪ್ರಕಾಶ್ ಮತ್ತವರ ಸಹೋದ್ಯೋಗಿಗಳು ಬಾರ್ ಸ್ವಚ್ಛಗೊಳಿಸುತ್ತಿದ್ದರು. ಆಗ ಬೈಕ್‌ನಲ್ಲಿ ಅಲ್ಲಿಗೆ ಬಂದ ಇಬ್ಬರು ಮದ್ಯ ನೀಡುವಂತೆ ಪ್ರಕಾಶ್ ಅವರನ್ನು ಕೇಳಿದ್ದಾರೆ. ಬಾರ್ ಅವಧಿ ಮುಗಿದಿದ್ದರಿಂದ ಪ್ರಕಾಶ್ ಮದ್ಯ ನೀಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಆ ಇಬ್ಬರು ಬಾರ್ ಸಮೀಪದಲ್ಲೇ ಕಾದಿದ್ದು ಪ್ರಕಾಶ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾರ್ ಸ್ವಚ್ಛಗೊಳಿಸಿದ ನಂತರ ಪ್ರಕಾಶ್, ಸಹೋದ್ಯೋಗಿ ನರೇಂದ್ರ ಎಂಬುವರೊಂದಿಗೆ ಹುಳಿಯಾರ್ ಕೋಯಿಲ್ ಸ್ಟ್ರೀಟ್‌ನಲ್ಲಿ ತಿರುಗಾಟಕ್ಕೆ ಬಂದಾಗ ಸಮೀಪದಲ್ಲೇ ಕಾದಿದ್ದ ದುಷ್ಕರ್ಮಿಗಳು ಅವರೊಂದಿಗೆ ಮತ್ತೆ ಜಗಳ ತೆಗೆದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಪ್ರಕಾಶ್ ಅವರ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಇರಿದಿದ್ದಾರೆ. ಅವರ ನೆರವಿಗೆ ಧಾವಿಸಿದ ನರೇಂದ್ರ ಅವರಿಗೂ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಗಾಯಗೊಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚೀರಾಟ ಕೇಳಿದ ಮತ್ತೊಬ್ಬ ಸಹೋದ್ಯೋಗಿ ಅರುಣ್, ಬಾರ್‌ನಲ್ಲಿದ್ದವರ ಸಹಾಯದಿಂದ ಪ್ರಕಾಶ್ ಮತ್ತು ನರೇಂದ್ರ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಪ್ರಕಾಶ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ನರೇಂದ್ರ ಅವರ ಎಡಗೈಗೆ ಗಾಯವಾಗಿದ್ದು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣ ಸಂಬಂಧ ಹೋಟೆಲ್ ನೌಕರರಾದ ವಿನೀತ್ ಮತ್ತು ನರೇಶ್ ಚೌಧರಿ ಎಂಬುವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಶೋಕನಗರ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT