ADVERTISEMENT

ಬಾಲಾಜಿ ಕೃಪೆಯಿಂದ ಕಕ್ಷೆ ಸೇರಿದ ಗಗನನೌಕೆ!

ಸಂಸತ್‌ನ ವಿಜ್ಞಾನ, ತಂತ್ರಜ್ಞಾನ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಟಿ. ಸುಬ್ಬರಾಮಿ ರೆಡ್ಡಿ ಉದ್ಗಾರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 19:29 IST
Last Updated 8 ಜನವರಿ 2014, 19:29 IST
ನಗರದ ಇಸ್ರೊ ಕ್ಯಾಂಪಸ್‌ಗೆ ಬುಧವಾರ ಭೇಟಿ ನೀಡಿದ ಸಂಸತ್‌ನ ವಿಜ್ಞಾನ, ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಟಿ. ಸುಬ್ಬರಾಮಿ ರೆಡ್ಡಿ, ಇಸ್ರೊ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್‌ ಅವರಿಂದ ಮಾಹಿತಿ ಪಡೆದರು. ಸ್ಥಾಯಿ ಸಮಿತಿ ಸದಸ್ಯರು ಹಾಜರಿದ್ದರು	–ಪ್ರಜಾವಾಣಿ ಚಿತ್ರ
ನಗರದ ಇಸ್ರೊ ಕ್ಯಾಂಪಸ್‌ಗೆ ಬುಧವಾರ ಭೇಟಿ ನೀಡಿದ ಸಂಸತ್‌ನ ವಿಜ್ಞಾನ, ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಟಿ. ಸುಬ್ಬರಾಮಿ ರೆಡ್ಡಿ, ಇಸ್ರೊ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್‌ ಅವರಿಂದ ಮಾಹಿತಿ ಪಡೆದರು. ಸ್ಥಾಯಿ ಸಮಿತಿ ಸದಸ್ಯರು ಹಾಜರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಇತ್ತೀಚೆಗೆ ಉಡಾವಣೆ ಮಾಡಿದ ಗಗನನೌಕೆ ಮಂಗಳ ಗ್ರಹದ ಕಕ್ಷೆಗೆ ಸೇರಿದ ಮೇಲೆ ಉಳಿಯುವ ಅವಧಿ ಎಷ್ಟು?’

‘ಆರು ತಿಂಗಳು’
‘ಬರೀ ಆರು ತಿಂಗಳೇ? ನಾನು ಕನಿಷ್ಠ ಆರು ವರ್ಷವಾದರೂ ಇರುತ್ತದೆ ಎಂದುಕೊಂಡಿದ್ದೆ’

–ಸಂಸತ್‌ನ ವಿಜ್ಞಾನ, ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಟಿ. ಸುಬ್ಬರಾಮಿ ರೆಡ್ಡಿ, ತಮಗೆ ಭಾರತೀಯ ಬಾಹ್ಯಾ­ಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿಯೂ ಇಲ್ಲದಿರುವುದನ್ನು ಪತ್ರಿಕಾ ಗೋಷ್ಠಿ­ಯಲ್ಲಿ ಬುಧವಾರ ಹೊರಹಾಕಿದ ಬಗೆ ಇದು.

ಪಕ್ಕದಲ್ಲಿ ಕುಳಿತಿದ್ದ ಇಸ್ರೊ ಅಧ್ಯಕ್ಷ ಡಾ.ಕೆ.­ರಾಧಾಕೃಷ್ಣನ್‌ ಅವರಿಗೆ ಗಗನನೌಕೆ ಆಯುಷ್ಯದ ಬಗೆಗೆ ಪ್ರಶ್ನಿಸಿ ಉತ್ತರ ಪಡೆದ ಅವರು, ಮೇಲಿನಂತೆ ಉದ್ಗಾರ ತೆಗೆದರು. ಸಂಸತ್‌ನ ವಿಜ್ಞಾನ ಸ್ಥಾಯಿ ಸಮಿತಿ ಅಧ್ಯಕ್ಷರಂತಹ ಮಹತ್ವದ ಹುದ್ದೆಯಲ್ಲಿ­ದ್ದರೂ ಇದುವರೆಗೆ ಮಂಗಳ ಗ್ರಹದ ಯೋಜನೆಗೆ ಸಂಬಂಧಿಸಿದಂತೆ ತಮ್ಮಲ್ಲಿ ಯಾವುದೇ ಮಾಹಿತಿ ಇಲ್ಲದಿರುವುದನ್ನು ಪ್ರದರ್ಶಿಸಿದರು.

‘ಆರೇ ತಿಂಗಳಿಗೆ ಅದರ ಕಾರ್ಯಾ­ಚರಣೆ ಮುಗಿಯುತ್ತದೆ ಎಂದು ಕೇಳಿ ಬೇಜಾರಾಗಿದೆ’ ಎಂದೂ ಅವರು ಹೇಳಿದರು. ‘ಆರು ತಿಂಗಳಿಗೆ ಆಗುವಷ್ಟು ಮಾತ್ರ ಅದರಲ್ಲಿ ಇಂಧನ ಇದೆ ಸರ್‌’ ಎಂದು ರಾಧಾಕೃಷ್ಣನ್‌ ಉತ್ತರಿಸಿದರು.

ಸ್ಥಾಯಿ ಸಮಿತಿಯ ಮತ್ತೊಬ್ಬ ಸದಸ್ಯರು, ‘ಆರು ತಿಂಗಳಾದ ಮೇಲೆ ಆ ಗಗನನೌಕೆ ಏನಾಗುತ್ತದೆ; ಸಮುದ್ರದಲ್ಲಿ ಬೀಳುವುದೇ ಇಲ್ಲವೆ ಗಗನದಲ್ಲೇ ಹೊತ್ತಿ ಉರಿಯುವುದೇ’ ಎಂದು ಪ್ರಶ್ನಿಸಿದರು. ‘ನೀರಿಗೂ ಬೀಳುವುದಿಲ್ಲ, ಗಗನದಲ್ಲಿ ಹೊತ್ತಿಯೂ ಉರಿಯುವುದಿಲ್ಲ. ಬಾಹ್ಯಾ­ಕಾಶದ ತ್ಯಾಜ್ಯವಾಗಿ ಉಳಿಯಲಿದೆ’ ಎಂದು ಇಸ್ರೊ ಅಧ್ಯಕ್ಷರು ಸಮಜಾಯಿಷಿ ನೀಡಿದರು.

ಪ್ರದರ್ಶನಕ್ಕೆ ಇಟ್ಟಿದ್ದ ಪ್ರತಿಕೃತಿಗಳನ್ನು ಸ್ಥಾಯಿ ಸಮಿತಿ ಸದಸ್ಯರು ವೀಕ್ಷಿಸಿದರು. ಇಸ್ರೊ ಅಧ್ಯಕ್ಷರು ಮಂಗಳನ ಅಂಗಳಕ್ಕೆ ಕಳುಹಿಸಿದ ನೌಕೆ ಕುರಿತಂತೆ ವಿವರಿಸಲು ಆರಂಭಿಸಿದ ಕೂಡಲೇ ಮಧ್ಯದಲ್ಲಿ ತಡೆದ ಸ್ಥಾಯಿ ಸಮಿತಿ ಅಧ್ಯಕ್ಷರು, ‘ಅದಿರಲಿ, ಪರಿಸರ ಮಾಲಿನ್ಯದ ಬಗೆಗೆ ಸ್ವಲ್ಪ ಹೇಳಿ’ ಎಂದರು. ಆಗ ಅಲ್ಲಿದ್ದ ವಿಜ್ಞಾನಿಗಳೆಲ್ಲ ಕಕ್ಕಾಬಿಕ್ಕಿಯಾದರು.

‘ರಾಧಾಕೃಷ್ಣನ್‌ ಅವರು ಇಸ್ರೊ ಸಂಸ್ಥೆಯನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆಯತ್ತ ಮುನ್ನಡೆ­ಸಿದ್ದಾರೆ. ದೈವಿ ಶಕ್ತಿ ಹಾಗೂ ವಿಜ್ಞಾನ ಶಕ್ತಿ ಇಲ್ಲಿ ಸಂಗಮವಾಗಿದೆ. ರಾಧಾಕೃಷ್ಣನ್‌ ಅವರು ತಿರುಪತಿ­ಯಲ್ಲಿ ಬಾಲಾಜಿಯನ್ನು ಪ್ರಾರ್ಥಿಸಿದ್ದರಿಂದಲೇ ಉಡಾವಣೆ ಕಾರ್ಯಗಳೆಲ್ಲ ಯಾವುದೇ ಸಮಸ್ಯೆ­ಯಿಲ್ಲದೆ ಮುಗಿದು ನೌಕೆ, ಕಕ್ಷೆಯನ್ನು ಸೇರು­ವಂತಾಗಿದೆ’ ಎಂದು ಸುಬ್ಬರಾಮಿ ರೆಡ್ಡಿ ಹೇಳಿದರು.

‘ದೈವಿ ಬಲ ಇಲ್ಲದಿದ್ದರೆ ಈ ಮಹಾನ್‌ ಕಾರ್ಯ ಮುಗಿಯುವುದು ಕಷ್ಟವಿತ್ತು’ ಎಂದು ರೆಡ್ಡಿ ಹೇಳಿದಾಗ, ಪಕ್ಕದಲ್ಲಿ ಕುಳಿತಿದ್ದ ರಾಧಾಕೃಷ್ಣನ್‌ ಜೋರಾಗಿ ನಕ್ಕರು. ಅಲ್ಲಿದ್ದ ಉಳಿದವರ ಮುಖದಲ್ಲೂ ಆ ನಗೆ ಪ್ರತಿಫಲಿಸುತ್ತಿತ್ತು.

ಮಾನವಸಹಿತ ಗಗನನೌಕೆ: ಇಸ್ರೊ ಯತ್ನ
ಬೆಂಗಳೂರು:
‘ಭಾರತೀಯ ಬಾಹ್ಯಾಕಾಶ ಸಂಶೋ­­ಧನಾ ಸಂಸ್ಥೆ (ಇಸ್ರೊ)ಯಿಂದ ಮಾನವಸಹಿತ ಗಗನ ನೌಕೆಯನ್ನು ಕಳಿಸಲು ಯತ್ನಗಳು ನಡೆದಿದ್ದು, ಪ್ರಯೋಗಾರ್ಥ ನೌಕೆ ಜಿಎಸ್‌ಎಲ್‌ವಿ ಮಾರ್ಕ್‌–3 ಏಪ್ರಿಲ್‌ ವೇಳೆಗೆ ಉಡಾವಣೆಗೆ ಸಿದ್ಧವಾಗಲಿದೆ’ ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್‌ ತಿಳಿಸಿದರು.

ಇಸ್ರೊ ಆವರಣದಲ್ಲಿ ಬುಧವಾರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

‘ಮಾನವಸಹಿತ ಗಗನನೌಕೆ ಕಳಿಸುವ ಯೋಜನೆಯಲ್ಲಿ ನಾವಿನ್ನೂ ಆರಂಭಿಕ ಹಂತ­ದಲ್ಲಿದ್ದೇವೆ. ಸಾಕಷ್ಟು ಪ್ರಯೋಗ ನಡೆಸಬೇಕಿದೆ. ಪ್ರಯೋಗಾರ್ಥ ನೌಕೆ ಸಿದ್ಧಪಡಿಸುವ ಯೋಜ­ನೆಗೆ ಕೇಂದ್ರದಿಂದ ಈಗಾಗಲೇ ಅನುಮತಿ ಸಿಕ್ಕಿದ್ದು, ಇದಕ್ಕಾಗಿ ₨ 145 ಕೋಟಿ ಅನುದಾನ ಸಹ ದೊರೆತಿದೆ’ ಎಂದು ವಿವರಿಸಿದರು.

‘ಮಾನವಸಹಿತ ನೌಕೆ ಕಳುಹಿಸಲು ಗಗನಯಾನಿಗಳು ಪರಿಸರದಲ್ಲಿ ಉಂಟಾಗುವ ಬದಲಾವಣೆಗಳಿಗೆ ತಕ್ಕಂತೆ ಹೊಂದಿಕೊಳ್ಳಲು ವಿಶೇಷವಾದ ತಂತ್ರಜ್ಞಾನಬೇಕು. ಜೀವರಕ್ಷಕ ವ್ಯವಸ್ಥೆ ಮತ್ತು ಅಪಾಯದಿಂದ ಪಾರಾಗುವ ಸೌಲಭ್ಯಗಳೂ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವಾಸಾರ್ಹವಾದ ಉಡಾವಣೆ ವ್ಯವಸ್ಥೆಯನ್ನು ನಾವು ಹೊಂದಬೇಕು’ ಎಂದು ಹೇಳಿದರು.

‘ನೌಕೆಯಲ್ಲಿ ಗಗನಯಾನಿಗಳಿಗೆ ಅಗತ್ಯವಾದ ಸ್ಥಳಾವಕಾಶವನ್ನು ಕಲ್ಪಿಸಬೇಕಿದೆ. ಅಂತಹ ನೌಕೆ ತಯಾರಿಸುವ ಕೆಲಸ ಈಗ ನಡೆದಿದೆ’ ಎಂದು ತಿಳಿಸಿದರು. ‘ಏಪ್ರಿಲ್‌ನಲ್ಲಿ ನೌಕೆಯನ್ನು ಪ್ರಯೋಗಾರ್ಥ ಉಡಾವಣೆ ಮಾಡುತ್ತೇವೆ. ಆದರೆ, ಆಗ ಗಗನಯಾನಿಗಳನ್ನು ಕಳುಹಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT