ADVERTISEMENT

ಬಾಲ ಉತ್ಸವದಲ್ಲಿ ಬಾಲಗೋಂಚಿಗಳು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST

ಬೆಂಗಳೂರು:  ವಿವಿಧ ವೇಷ ಭೂಷಣಗಳನ್ನು ಧರಿಸಿದ್ದ ಮಕ್ಕಳ ಮೊಗದಲ್ಲಿ ಸಂತಸ... ತಾವೂ ಕೂಡ ಯಾರಿಗೂ ಕಡಿಮೆಯಿಲ್ಲ ಎಂಬ ಭಾವ ಅಲ್ಲಿದ್ದ ಮಕ್ಕಳಲ್ಲಿ... ಇವರು ತಮ್ಮ ಅಂಗವಿಕಲತೆಯನ್ನು ಮೀರಿ ಬೆಳೆಯಲು ಹವಣಿಸುತ್ತಿರುವ ಕುಸುಮಗಳಂತೆ ಕಂಗೊಳಿಸುತ್ತಿದ್ದರು.

ಈ ಸನ್ನಿವೇಶವು ಕಂಡುಬಂದಿದ್ದು ಕರ್ನಾಟಕ ರಾಜ್ಯ ಶಿಶು ಕಲ್ಯಾಣ ಸಂಸ್ಥೆಯು ಜನಧಾರೆ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಬಾಲ ಉತ್ಸವ ಕಾರ್ಯಕ್ರಮದಲ್ಲಿ.

ಹಾಡು, ನೃತ್ಯ, ವೇಷಭೂಷಣ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ಅಂಧ ಮಕ್ಕಳು ಹರ್ಷೋದ್ಗಾರದಲ್ಲಿ ಮುಳುಗಿದ್ದರು. ಅವರನ್ನು ನೋಡಿದವರಿಗೆ ಒಂದೆಡೆ ಹರ್ಷವಾದರೆ, ಇನ್ನೊಂದೆಡೆ ಎಂತಹ ಚಂದದ ಮಕ್ಕಳು, ಪ್ರತಿಭೆಯಿದೆ... ಎಂದು ಹೇಳುವ ಅನೇಕ ಮಾತುಗಳು ಕೇಳಿ ಬಂದವು.
ಕರ್ನಾಟಕ ರಾಜ್ಯ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಸುಧಾ ರಘುನಂದನ್ ಮಾತನಾಡಿ, `ಮಕ್ಕಳ ಹಕ್ಕುಗಳನ್ನು ಪ್ರೋತ್ಸಾಹಿಸುವುದು. ಮಕ್ಕಳ ಮುಗ್ಧತೆ ಮತ್ತು ಅವರ ಬಾಲ್ಯವನ್ನು ಕಸಿದುಕೊಳ್ಳದಂತೆ ನಿಗಾ ವಹಿಸುವುದು.  ಮಹಿಳೆಯರು ಮತ್ತು ಮಕ್ಕಳನ್ನು ಸಶಕ್ತರಾಗಿಸುವುದು ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ' ಎಂದು ಹೇಳಿದರು.

ನಗರದ ಸುನಾದ್ ಸ್ಕೂಲ್, ಸೃಷ್ಟಿ, ಬಾಲಜ್ಯೋತಿ  ಸೇರಿದಂತೆ 13 ಅಂಗವಿಕಲ ಶಾಲೆಗಳ ಒಟ್ಟು 180ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಛದ್ಮ ವೇಷ, ಸಮೂಹ ಗಾಯನ ಹಾಗೂ ಸಮೂಹ ನೃತ್ಯ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವಿವಿಧ ನಾಯಕರುಗಳ ವೇಷ ಭೂಷಣಗಳನ್ನು ತೊಟ್ಟಿದ್ದ ಮಕ್ಕಳು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.