ADVERTISEMENT

ಬಾಹ್ಯಾಕಾಶ ಸಂಶೋಧನೆಯಲ್ಲಿ ಸ್ವಾಯತ್ತತೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST

ಬೆಂಗಳೂರು: `ಭಾರತ 2030ರ ವೇಳೆಗೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಸ್ವಾಯತ್ತತೆ ಸಾಧಿಸಲಿದೆ~ ಎಂದು ಇಸ್ರೊ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್ ವಿಶ್ವಾಸ ವ್ಯಕ್ತಪಡಿಸಿದರು.

ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಭಾನುವಾರ ನಡೆದ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಈಗಾಗಲೇ ಸಾಕಷ್ಟು ಮುಂದುವರಿದಿದೆ. ಭಾರತ ನಿರ್ವಹಿಸುತ್ತಿರುವ ಉಪಗ್ರಹಗಳಿಂದ ಜಗತ್ತಿನ ಸುಮಾರು 70 ದೇಶಗಳು ದೂರಸಂಪರ್ಕ ಸೇವೆ ಪಡೆಯುತ್ತಿವೆ. ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಉಪಗ್ರಹ ಉಡ್ಡಯನ ಕ್ಷೇತ್ರದಲ್ಲಿ ಭಾರತ ಸ್ವಲ್ಪ ಮಟ್ಟಿಗೆ ಹಿಂದುಳಿದಿದೆ. ಈ ಕೊರತೆಯನ್ನು ತುಂಬಿಕೊಳ್ಳುವ ಪ್ರಯತ್ನಗಳು ಇಸ್ರೊದಿಂದ ಆಗುತ್ತಿದೆ~ ಎಂದರು.

`ವಿಜ್ಞಾನದ ಆಶಯಗಳು ಕಡು ಬಡವರಿಗೂ ತಲುಪಲು ಸಾಧ್ಯವಾಗಬೇಕು~ ಎಂದು ಅವರು ಆಶಿಸಿದರು.
ವಿದ್ಯಾರ್ಥಿಗಳು ತಾವು ಪಡೆದ ಪದವಿಯಿಂದ ಸಮಾಜಕ್ಕೆ ಉಪಯೋಗವಾಗುವ ಕಾರ್ಯಗಳಿಗೆ ತೊಡಗಿಸಿಕೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ.ಎ.ಎಚ್. ರಾಮರಾವ್ ಮಾತನಾಡಿ, ಶ್ರದ್ಧೆ ಹಾಗೂ ಸಂಸ್ಕಾರ ರೂಢಿಸಿಕೊಳ್ಳಲು ಕಿವಿಮಾತು ಹೇಳೀದರು.

ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿ ಹೆಚ್ಚು ಅಂಕ ಪಡೆದ ಬಿ.ಎ. ವಿದ್ಯಾರ್ಥಿನಿ ಆರ್. ಗಾಯಿತ್ರಿ, ಬಿ.ಎಸ್‌ಸಿ ವಿದ್ಯಾರ್ಥಿನಿ ಡಿ. ಕಲ್ಯಾಣಿ ಮತ್ತು ಬಿ.ಸಿ.ಎ ವಿದ್ಯಾರ್ಥಿನಿ ಸ್ವಾತಿ ಆರ್. ಶಂಕರ್ ಅವರಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ. ಲೀಲಾವತಿ, ಅಧ್ಯಾಪಕ ಮಂಡಳಿಯ ಕಾರ್ಯದರ್ಶಿ ಪ್ರೊ. ಪ್ರಮೋದ ಆರ್. ಮುತಾಲಿಕ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.