ADVERTISEMENT

ಬಿಎಂಟಿಎಫ್ ರದ್ದು ಇಲ್ಲ: ಕೋರ್ಟ್‌ನಲ್ಲಿ ಸರ್ಕಾರದ ವಾಗ್ದಾನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಎಂಜಿನಿಯರ್‌ಗಳ ವಿರುದ್ಧ ಅಂದಾಜು 800 ಮೊಕದ್ದಮೆಗಳನ್ನು ದಾಖಲು ಮಾಡಿರುವ ಬೆಂಗಳೂರು ಮಹಾನಗರ ಕಾರ್ಯಪಡೆಯನ್ನು (ಬಿಎಂಟಿಎಫ್) ರದ್ದು ಮಾಡುವುದಿಲ್ಲ ಎಂದು ಸರ್ಕಾರ ಬುಧವಾರ ಹೈಕೋರ್ಟ್‌ಗೆ  ತಿಳಿಸಿದೆ.

ಬಿಎಂಟಿಎಫ್ ರದ್ದು ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಬೆಂಗಳೂರಿನ ಡಿ. ದೇವರಾಜ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.

ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಜನ್ ಪೂವಯ್ಯ, `ಕಾರ್ಯಪಡೆಯನ್ನು ರದ್ದು ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಆದರೆ ಆಡಳಿತಾತ್ಮಕ ಕಾರಣಗಳಿಗೆ, ಕಾರ್ಯಪಡೆ ಸಿಬ್ಬಂದಿಯನ್ನು ಬದಲಾಯಿಸುವ ಅಧಿಕಾರ ಸರ್ಕಾರಕ್ಕೆ ಇದೆ' ಎಂದು ಹೇಳಿಕೆ ಸಲ್ಲಿಸಿದ್ದರು. ಆರ್.ಪಿ. ಶರ್ಮ ಅವರನ್ನು ಕಾರ್ಯಪಡೆ ಮುಖ್ಯಸ್ಥನ ಸ್ಥಾನದಲ್ಲೇ ಮುಂದುವರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದೂ ಅರ್ಜಿದಾರರು ಕೋರಿದ್ದರು. ಸರ್ಕಾರದ ಹೇಳಿಕೆ ಆಧರಿಸಿ, ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ.

ಇನ್ನೊಂದು ಅರ್ಜಿ: ಕಾರ್ಯಪಡೆಯ ಅಧಿಕಾರವನ್ನು ಮೊಟಕುಗೊಳಿಸಿ ಫೆಬ್ರುವರಿ 2ರಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶವನ್ನು ರದ್ದು ಮಾಡಬೇಕು ಎಂದು ಕೋರಿ ಬೆಂಗಳೂರಿನ ಎಚ್. ಪ್ರಮೋದ್ ಮತ್ತು ಇತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಪ್ರತಿಹೇಳಿಕೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಪೀಠ, ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.