ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಕೇಂದ್ರ ಸಮಿತಿಯು ಸ್ವಾಗತಿಸಿದ್ದು, ಸರ್ಕಾರವನ್ನು ಅಭಿನಂದಿಸಿದೆ.
‘ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರವು ಇಂದು ವಿಶ್ವದ ಗಮನ ಸೆಳೆಯುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಬೆಂಗಳೂರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮಾನ್ಯತೆ ಇದೆ. ಹಾಗಾಗಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ (ಬಿಐಎಎಲ್) ಕೆಂಪೇಗೌಡರ ಹೆಸರನ್ನಿಡುವುದು ಸೂಕ್ತವಾಗಿದೆ’ ಎಂದು ಸಮಿತಿ ಅಧ್ಯಕ್ಷ ಬಿ.ಎಲ್. ಲಕ್ಕೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಮರಿಮಲ್ಲಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಬಿಐಎಎಲ್‌ಗೆ ಕೆಂಪೇಗೌಡರ ಹೆಸರನ್ನಿಡುವುದು ಸೂಕ್ತ ಎಂದು ನಾಡಿನ ಹಲವು ಸಾಹಿತಿಗಳು, ರೈತ ಮುಖಂಡರು, ಮಠಾಧೀಶರು ಸೇರಿದಂತೆ ಹಲವರು ಅಭಿಪ್ರಾಯಪಟ್ಟಿದ್ದರು. ಅದಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಕೆಂಪೇಗೌಡರ ಹೆಸರನ್ನೇ ಬಿಐಎಎಲ್‌ಗೆ ಇಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟದಲ್ಲಿ ನಿರ್ಧರಿಸಿರುವುದು ಸಂತಸ ತಂದಿದೆ’ ಎಂದು ಅವರು ಹೇಳಿದ್ದಾರೆ.‘ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಆರ್. ಅಶೋಕ, ಬಿಐಎಎಲ್ ಸಮಸ್ಯೆಗಳಿಗೆ ಸಂಬಂಧಪಟ್ಟ ಸದನ ಸಮಿತಿ ಅಧ್ಯಕ್ಷರೂ ಆದ ಶಾಸಕ ಡಾ.ಡಿ. ಹೇಮಚಂದ್ರಸಾಗರ್ ಹಾಗೂ ಇತರೆ ಸದಸ್ಯರಿಗೆ ಸಮಿತಿ ಅಭಿನಂದನೆ ಸಲ್ಲಿಸುತ್ತದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.