ADVERTISEMENT

ಬಿಜೆಪಿಯ ಚುನಾವಣಾ ಗಿಮಿಕ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 20:20 IST
Last Updated 24 ಫೆಬ್ರುವರಿ 2011, 20:20 IST


ಬೆಂಗಳೂರು: ‘ಈ ಬಜೆಟ್ ವಾಸ್ತವಕ್ಕೆ ದೂರವಾದ ಸಂಗತಿಗಳನ್ನು ಒಳಗೊಂಡಿದ್ದು, ಬಿಜೆಪಿಯ ಚುನಾವಣಾ ಗಿಮಿಕ್‌ನಂತಿದೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಬಜೆಟ್ ಕುರಿತು ಗುರುವಾರ ವಿಧಾನಸಭೆಯ ಮೊಗಸಾಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ಇದು ಚುನಾವಣಾ ವರ್ಷದ ಬಜೆಟ್‌ನಂತೆ ಕಾಣುತ್ತಿದೆ. ಒಂದರ್ಥದಲ್ಲಿ ಬಜೆಟ್ ಬಿಜೆಪಿಯ ಪ್ರಣಾಳಿಕೆಯಂತಿದೆ’ ಎಂದರು.

‘ದೇಶದಲ್ಲೇ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಿಸುತ್ತಿದ್ದೇನೆ ಎಂದು ಸಿಎಂ ದೊಡ್ಡ ಪ್ರಚಾರ ಗಿಟ್ಟಿಸಿದರು. ಬಾಜಾ-ಭಜಂತ್ರಿ ಬಾರಿಸಿಕೊಂಡು ವಿಧಾನಸೌಧಕ್ಕೆ ಬಂದು ‘ದಾಖಲೆ’ಯನ್ನೂ ನಿರ್ಮಿಸಿದರು. ಬಜೆಟ್‌ನಲ್ಲಿ ಯಾವುದೇ ಹೊಸ ಸಂಗತಿಯನ್ನೂ ಹೇಳಿಲ್ಲ’ ಎಂದು ಕುಟುಕಿದರು.

‘ಹಿಂದಿನ ಎಲ್ಲ ಬಜೆಟ್‌ಗಳಲ್ಲೂ ಕೃಷಿಗೆ ಆದ್ಯತೆ ನೀಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಬಾರಿ ಕೃಷಿ ಮತ್ತು ಸಂಬಂಧಿತ ವಲಯಗಳ ವಿಷಯವನ್ನು ಒಂದೆಡೆ ಸೇರಿಸಿ ‘ಭಾಗ-1 ಕೃಷಿ’ ಎಂದು ಪ್ರತ್ಯೇಕವಾಗಿ ಮುದ್ರಿಸಿರುವುದೇ ವಿಶೇಷ. ಇದು ಸರ್ಕಾರದ ಗಿಮಿಕ್‌ನ ಭಾಗ ಅಷ್ಟೇ’ ಎಂದರು.

ತೆರಿಗೆಯ ಹೊರೆ: ಈ ಬಜೆಟ್‌ನಲ್ಲಿ ಯಾರ ಮೇಲೂ ತೆರಿಗೆ ವಿಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ ಮಾತಿಗೆ ತಪ್ಪಿರುವ ಅವರು, ವಿವಿಧ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೇರಿದ್ದಾರೆ ಎಂದು ಟೀಕಿಸಿದರು.

ನಾಟಕ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಂದ ತಪ್ಪಿಸಿಕೊಳ್ಳಲು ಕೃಷಿ ಬಜೆಟ್ ಮಂಡನೆ ನಾಟಕ ಆಡಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.