ADVERTISEMENT

ಬಿಜೆಪಿ ಅಪಪ್ರಚಾರಗಳಿಗೆ ಪ್ರತ್ಯುತ್ತರ ನೀಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:29 IST
Last Updated 5 ಅಕ್ಟೋಬರ್ 2017, 19:29 IST
ವೇಣುಗೋಪಾಲ್‌
ವೇಣುಗೋಪಾಲ್‌   

ಬೆಂಗಳೂರು: ಬಿಜೆಪಿಯ ಅಪಪ್ರಚಾರಗಳಿಗೆ ತಕ್ಷಣ ಪ್ರತ್ಯುತ್ತರ ನೀಡುವಂತೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಸಾಮಾಜಿಕ ಜಾಲತಾಣ ಘಟಕಗಳ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಕ್ಷದ ಸಾಮಾಜಿಕ ಜಾಲ ತಾಣದ ಕಾರ್ಯ ವೈಖರಿಗಳ ಬಗ್ಗೆ ಪ್ರಮುಖರ ಜೊತೆ ಗುರುವಾರ ಸಭೆ ನಡೆಸಿದ ಅವರು, ಕೋಮು ಸಂಘರ್ಷ ಹರಡುವ ಮೂಲಕ ಮತದಾರರ ಧ್ರುವೀಕರಣ ಮತ್ತು ದೇಶದ ಆರ್ಥಿಕ ಸ್ಥಿತಿಗತಿಯ ಕುರಿತು ಮೋದಿ ಮಾಡಿದ ಭಾಷಣಗಳ ತುಣುಕುಗಳನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ಬಿಜೆಪಿ ಹರಡುತ್ತಿದೆ. ಅದಕ್ಕೆ ವಿರುದ್ಧವಾಗಿ ತಕ್ಕ ಉತ್ತರ ನೀಡಬೇಕು ಎಂದು ಸೂಚಿಸಿದ್ದಾರೆ.

‘ಸುಳ್ಳು ಪ್ರಚಾರದ ಮೂಲಕ ಮತದಾರರ ದಾರಿ ತಪ್ಪಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಈಗಾಗಲೇ ಈ ರೀತಿಯ ಉದ್ದೇಶಗಳಿಗೆ ಸಾಮಾಜಿಕ ಜಾಲ ತಾಣಗಳನ್ನು ಸಮರ್ಪಕವಾಗಿ ಆ ಪಕ್ಷ ಬಳಸಿಕೊಂಡಿದೆ. ನಾವೂ ಕೂಡಾ ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಬೀಳಬಾರದು. ಚುರುಕಿನಿಂದ ಕೆಲಸ ಮಾಡಬೇಕು’ ಎಂದೂ ಅವರು ಸಲಹೆ ನೀಡಿದ್ದಾರೆ.

ADVERTISEMENT

ಕಾಂಗ್ರೆಸ್‌ ಸರಣಿ ಸಭೆ ಇಂದು: ‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಮಹತ್ವದ ಸಭೆ ಶುಕ್ರವಾರ ಬೆಳಿಗ್ಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ. ಪಕ್ಷದ ಎಲ್ಲ ಶಾಸಕರು ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಗಿದೆ. ವೇಣುಗೋಪಾಲ್‌ ಅವರೂ ಸಭೆಯಲ್ಲಿ ಭಾಗವಹಿಸಲಿದ್ದು, ಪಕ್ಷ ಸಂಘಟನೆಯ ಕುರಿತು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡುವ ಸಾಧ್ಯತೆ ಇದೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಬಳಿಕ ಕೆಪಿಸಿಸಿ ಕಚೇರಿಯಲ್ಲಿ ದಿನವಿಡೀ ಸರಣಿ ಸಭೆಗಳನ್ನು ನಡೆಸಲಿರುವ ವೇಣುಗೋಪಾಲ್‌, ‘ಮನೆ ಮನೆಗೆ ಕಾಂಗ್ರೆಸ್‌’ ಅಭಿಯಾನದ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.