ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ವಸಂತಪುರದಲ್ಲಿ ನಿವೇಶನ ನಿರ್ಮಾಣ ಉದ್ದೇಶಕ್ಕಾಗಿ ಇದೇ ಜೂನ್ ತಿಂಗಳಲ್ಲಿ ಮಂಜೂರು ಮಾಡಲಾಗಿದ್ದ 2.35 ಎಕರೆ ಜಮೀನನ್ನು ಸಂಘವು ಮಂಗಳವಾರ ಪ್ರಾಧಿಕಾರಕ್ಕೆ ವಾಪಸ್ ನೀಡಿದೆ.
`ನಿಯಮಬದ್ಧವಾಗಿಯೇ ಜಮೀನನ್ನು ಪಡೆದಿದ್ದರೂ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರಿಂದ ಜಮೀನು ವಾಪಸ್ ನೀಡಿದ್ದೇವೆ. ಈವರೆಗೆ ಸಂಘದ ಸದಸ್ಯರಿಗೆ 712 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ನಿವೇಶನ ಹಂಚಿಕೆಯಲ್ಲಿ ಯಾವುದೇ ಅವ್ಯವಹಾರವೂ ನಡೆದಿಲ್ಲ. ನಿಯಮ ಉಲ್ಲಂಘಿಸಿ ಒಂದೇ ಒಂದು ನಿವೇಶನವನ್ನೂ ಹಂಚಿಕೆ ಮಾಡಿಲ್ಲ. ಈ ವಿಚಾರದಲ್ಲಿ ಯಾವುದೇ ತನಿಖೆ ಎದುರಿಸಲು ಸಂಘ ಸಿದ್ಧವಿದೆ' ಎಂದು ಸಂಘದ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ ತಿಳಿಸಿದರು.
`ಸಂಘದ ಸದಸ್ಯರಿಗೆ ನಿವೇಶನ ಮಂಜೂರು ಮಾಡುವಂತೆ 1997ರಿಂದಲೂ ಪ್ರಾಧಿಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸುತ್ತಿದ್ದೆವು. ಸಂಘದ ಮನವಿಗೆ ಸ್ಪಂದಿಸಿದ ಪ್ರಾಧಿಕಾರವು 2006ರಲ್ಲಿ 45 ಎಕರೆ ಜಮೀನನ್ನು ಸಂಘಕ್ಕೆ ಮಂಜೂರು ಮಾಡಿತ್ತು. 45 ಎಕರೆ ಜಮೀನಿಗಾಗಿ ್ಙ 1.26 ಕೋಟಿ ಹಣವನ್ನು ಸಂಘದ ವತಿಯಿಂತ ಕಟ್ಟಿದ್ದೇವೆ. ಇತರೆ ಇಲಾಖೆಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮಂಜೂರು ಮಾಡಿದಂತೆಯೇ ನಮ್ಮ ಸಂಘಕ್ಕೂ ಜಮೀನು ಮಂಜೂರು ಮಾಡಲಾಗಿದೆ. ಬಿಡಿಎ ನೌಕರರು ಎಂಬ ಕಾರಣಕ್ಕೆ ರಿಯಾಯಿತಿ ದರದಲ್ಲಿ ಜಮೀನು ಕೊಟ್ಟಿಲ್ಲ' ಎಂದು ಸ್ಪಷ್ಟಪಡಿಸಿದರು.
`2006ರ ನವೆಂಬರ್‌ನಲ್ಲಿ ದೊಡ್ಡಕಲ್ಲಸಂದ್ರದಲ್ಲಿ 27 ಎಕರೆ ಜಮೀನನ್ನು ಮೊದಲ ಬಾರಿಗೆ ಸಂಘಕ್ಕೆ ಮಂಜೂರು ಮಾಡಲಾಯಿತು. ಆನಂತರ 2007 ಮತ್ತು 2011ರಲ್ಲಿ ಲಿಂಗದೇವರಹಳ್ಳಿಯಲ್ಲಿ ಒಟ್ಟು 15 ಎಕರೆ ಜಮೀನನ್ನು ಮೂರು ಹಂತಗಳಲ್ಲಿ ಮಂಜೂರು ಮಾಡಲಾಗಿದೆ. 45 ಎಕರೆಯಲ್ಲಿ ಉಳಿದ 3 ಎಕರೆ ಜಮೀನು ಮಂಜೂರು ಮಾಡುವುದು ಬಾಕಿ ಇದ್ದುದ್ದರಿಂದ ಇದೇ ವರ್ಷದ ಜೂನ್‌ನಲ್ಲಿ ವಸಂತಪುರದ ಸರ್ವೆ ನಂ. `53/1ಎ ಮತ್ತು 53/1ಬಿ'ಯ 2.35 ಎಕರೆ ಜಮೀನನ್ನು ಮಂಜೂರು ಮಾಡಲಾಗಿತ್ತು' ಎಂದು ತಿಳಿಸಿದರು.
`ಸಂಘದಲ್ಲಿ ಒಟ್ಟು 1,100 ಮಂದಿ ಸದಸ್ಯರಿದ್ದಾರೆ. ಈಗಾಗಲೇ 712 ಮಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.
ಪ್ರಾಧಿಕಾರ ಜಮೀನು ನೀಡಲು ವಿಳಂಬ ಮಾಡಿದ ಕಾರಣ ಕೆಲವರಿಗೆ ನಿವೇಶನ ಹಂಚಿಕೆ ಮಾಡುವುದು ವಿಳಂಬವಾಗಿತ್ತು. ಈ ಕಾರಣಕ್ಕೆ ಸುಮಾರು 300 ಮಂದಿ ಸದಸ್ಯರು ನಿವೇಶನದ ಬದಲಿಗೆ ಕಟ್ಟಿದ್ದ ಹಣ ವಾಪಸ್ ನೀಡುವಂತೆ ಕೇಳಿದ್ದರು.
ಹೀಗಾಗಿ ಪ್ರತಿಯೊಬ್ಬರಿಗೆ ಬಡ್ಡಿ ಸಹಿತ ್ಙ 16 ಲಕ್ಷ ವಾಪಸ್ ನೀಡಲಾಗಿದೆ' ಎಂದರು. `ಪ್ರಾಧಿಕಾರ ಮಂಜೂರು ಮಾಡಿದ್ದ ಜಮೀನು ಹಳ್ಳ ಗುಂಡಿಗಳಿಂದ ಕೂಡಿತ್ತು. ಖರಾಬ್ ಜಮೀನನ್ನು ಸಮತಟ್ಟು ಮಾಡಲು ಸುಮಾರು 4 ಕೋಟಿ ಖರ್ಚಾಗಿದೆ. ನೀರು, ವಿದ್ಯುತ್ ಹಾಗೂ ರಸ್ತೆ ಅಭಿವೃದ್ಧಿಗೆ ಸುಮಾರು 6ರಿಂದ 8 ಕೋಟಿ ಖರ್ಚು ಮಾಡಲಾಗಿದೆ. ಈ ಎಲ್ಲ ಖರ್ಚನ್ನು ಸೇರಿಸಿ ಪ್ರತಿ ನಿವೇಶನಕ್ಕೆ ್ಙ 3.10 ಲಕ್ಷವನ್ನು ಸಂಘದ ಕಾರ್ಯಕಾರಿ ಸಮಿತಿ ನಿಗದಿ ಪಡಿಸಿದೆ. ಈ ಮೊತ್ತಕ್ಕೇ ಈವರೆಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ' ಎಂದು ಅವರು ವಿವರಿಸಿದರು.
`ನಿವೇಶನ ಅಭಿವೃದ್ಧಿಗೆ ಮುನ್ನ ಆ ಜಮೀನಿನಲ್ಲಿದ್ದ ಅಥವಾ ನಿವೇಶನ ಅಭಿವೃದ್ಧಿಗೆ ಸಹಕರಿಸಿದ ಸ್ಥಳೀಯ ರೈತರಿಗೆ ಒಂದು ಎಕರೆ ಜಮೀನಿನಲ್ಲಿ ಒಂದು ನಿವೇಶನ ನೀಡಬೇಕು ಎಂಬ ನಿಯಮ ರೂಪಿಸಿಕೊಳ್ಳಲಾಗಿದೆ. ಅದೇ ರೀತಿ ಈವರೆಗೆ 42 ನಿವೇಶನಗಳನ್ನು ರೈತರಿಗೆ ನೀಡಲಾಗಿದೆ. ಈ ಹಂಚಿಕೆ ನಿಯಮಬಾಹಿರವಲ್ಲ. ಹೀಗಾಗಿ ನಿವೇಶನ ಹಂಚಿಕೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.
`ಈ ಹಿಂದೆ ನಿವೇಶನಕ್ಕೆ ಹಣ ಕಟ್ಟಿದ್ದ 20 ಮಂದಿ ಹಾಲಿ ನೌಕರರು ಮತ್ತು 40 ಮಂದಿ ನಿವೃತ್ತ ನೌಕರರಿಗೆ ಈವರೆಗೆ ನಿವೇಶನ ನೀಡಲಾಗಿಲ್ಲ. ಈಗ ಜಮೀನನ್ನು ವಾಪಸ್ ನೀಡಿರುವುದರಿಂದ ಆ 60 ಮಂದಿಗೆ ನಿವೇಶನ ನೀಡಲು ಪ್ರಾಧಿಕಾರ ಬೇರೆ ಜಮೀನು ಮಂಜೂರು ಮಾಡಬೇಕಿದೆ' ಎಂದು ಅವರು ಹೇಳಿದರು.
ರದ್ದು ಪಡಿಸುವ ಸಂದರ್ಭ ಎದುರಾಗಿಲ್ಲ
`ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ನೀಡಿದ್ದ ಜಮೀನನ್ನು ರದ್ದು ಪಡಿಸುವ ಬಗ್ಗೆ ಪ್ರಾಧಿಕಾರದ ಮಂಡಳಿಯ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿತ್ತು. ಈಗ ಸಂಘದ ಅಧ್ಯಕ್ಷರೇ ಜಮೀನನ್ನು ಪ್ರಾಧಿಕಾರಕ್ಕೆ ವಾಪಸ್ ನೀಡಿದ್ದಾರೆ. ಹೀಗಾಗಿ ಜಮೀನು ರದ್ದು ಪಡಿಸುವ ಸಂದರ್ಭವೇ ಎದುರಾಗಿಲ್ಲ. ಸಂಘಕ್ಕೆ ನೀಡಬೇಕಿರುವ ಉಳಿದ ಜಮೀನನ್ನು ಮಂಜೂರು ಮಾಡುವ ಬಗ್ಗೆ ಪ್ರಾಧಿಕಾರದ ಮಂಡಳಿಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುದು'
-ಶ್ಯಾಮ್ ಭಟ್, ಆಯುಕ್ತರು,
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.