ಬೆಂಗಳೂರು: ನಿರೀಕ್ಷೆಯಂತೆ ಈ ವರ್ಷವೂ ಬಿಬಿಎಂಪಿ ಬಜೆಟ್ ಮಂಡನೆ ವಿಳಂಬವಾಗಲಿದೆ. ಕಟ್ಟಡ ನಿರ್ಮಾಣ ವೆಚ್ಚಗಳು ಹೆಚ್ಚುತ್ತಿದ್ದರೂ ಬಿಬಿಎಂಪಿ ತನ್ನ ಹಳೆಯ ಹಣಕಾಸು ನೀತಿಯನ್ನೇ 2012-13 ನೇ ಸಾಲಿನ ಬಜೆಟ್‌ನಲ್ಲಿಯೂ ಮುಂದುವರೆಸುವಂತೆ ಕಾಣುತ್ತಿದೆ.
ಹಿಂದಿನ ಮೂರು ವರ್ಷಗಳ ಪಾಲಿಕೆಯ ಬಜೆಟ್ ಅನ್ನು ಗಮನಿಸಿದರೆ ಪಾಲಿಕೆಯ ಅವ್ಯವಸ್ಥಿತ ಬಜೆಟ್‌ನ ಚಿತ್ರಣವನ್ನು ಕಾಣಬಹುದು. ಪ್ರತಿ ವರ್ಷದಂತೆ ಈ ವರ್ಷವೂ ಪಾಲಿಕೆ ತನ್ನ ಅವ್ಯವಸ್ಥಿತ ಲೆಕ್ಕಾಚಾರವನ್ನೇ ಮುಂದುವರೆಸುವ ಲಕ್ಷಣಗಳು ಗೋಚರಿಸುತ್ತಿವೆ.
ಕಳೆದ ಸಾಲಿನಲ್ಲಿ ರೂ ಮೂರು ಸಾವಿರ ಕೋಟಿ ಸಾಲದೊಂದಿಗೆ ರೂ. 9,196 ಕೋಟಿ ಬಜೆಟ್ ಅನ್ನು ಪಾಲಿಕೆ ರೂಪಿಸಿತ್ತು. ಅಂತೆಯೇ ಬಜೆಟ್‌ಗೆ ಸರ್ಕಾರದ ಒಪ್ಪಿಗೆ ತೆಗೆದುಕೊಳ್ಳುವುದು ಸುಲಭವಿರಲಿಲ್ಲ. ಮಾರ್ಚ್ 31ರ ಒಳಗೆ ಮಂಡನೆಯಾಗಬೇಕಿದ್ದ ಬಜೆಟ್ ಕಳೆದ ಬಾರಿ ಆಗಸ್ಟ್ 18ಕ್ಕೆ ಮಂಡನೆಯಾಗಿತ್ತು.
ಈ ಬಾರಿಯ ಬಜೆಟ್ ಮಂಡನೆಗೆ ಸಮಯ ಸಮೀಪಿಸುತ್ತಿದ್ದರೂ ಸಮರ್ಪಕ ಬಜೆಟ್ ರೂಪಿಸುವಲ್ಲಿ ಹಾಗೂ ಹಳೆಯ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ಯಾವುದೇ ವ್ಯವಸ್ಥೆಯನ್ನು ಪಾಲಿಕೆ ರೂಪಿಸಿಕೊಂಡಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ನಿರೀಕ್ಷಿಸಿದ್ದ 9,196 ಕೋಟಿ ರೂಪಾಯಿಗಳ ಆದಾಯದಲ್ಲಿ ಜನವರಿ ಅಂತ್ಯದ ವೇಳೆಗೆ ಕೇವಲ ರೂ. 2,275.64 ಕೋಟಿ ಮಾತ್ರ ಸಂಗ್ರಹವಾಗಿದೆ. ರಾಜ್ಯ ಸರ್ಕಾರದಿಂದ ನಿರೀಕ್ಷಿಸಲಾಗಿದ್ದ ಒಟ್ಟು ರೂ. 9,398.54 ಕೋಟಿ ಅನುದಾನದಲ್ಲಿ ರೂ. 2,645.48 ಕೋಟಿ ಮಾತ್ರ ಬಿಡುಗಡೆಯಾಗಿದೆ.
ಪಾಲಿಕೆ ವ್ಯಾಪ್ತಿಯ ಉದ್ಯಾನ, ರಸ್ತೆ, ಚರಂಡಿ, ಪಾದಚಾರಿ ಮಾರ್ಗಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೂಡ ಪಾಲಿಕೆಯ ಬಳಿ ಹಣವಿಲ್ಲದಂತಾಗಿದೆ. ಇದರಿಂದ ಘನತ್ಯಾಜ್ಯ ವಿಲೇವಾರಿಯೂ ಸೇರಿದಂತೆ ಪಾಲಿಕೆಯ ಅನೇಕ ಕಾರ್ಯಗಳು ನೆನೆಗುದಿಗೆ ಬಿದ್ದಿವೆ.
ಪರಿಶಿಷ್ಟ ಜಾತಿ ಹಾಗೂ ವರ್ಗದ ಜನರಿಗೆ ಸ್ವಂತ ಮನೆ ನಿರ್ಮಿಸಿಕೊಡುವ ಯೋಜನೆಯೂ ಪೂರ್ಣಗೊಂಡಿಲ್ಲ. ಕಳೆದ ಒಂದೂವರೆ ವರ್ಷದಿಂದ ಮನೆ ಪೂರ್ಣಗೊಳ್ಳಬಹುದೆಂಬ ನಿರೀಕ್ಷೆಯಲ್ಲಿಯೇ ಫಲಾನುಭವಿಗಳು ದಿನದೂಡುತ್ತಿದ್ದಾರೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಯೋಜನೆಯ ಮೂಲಕ ಆರ್ಥಿಕ ಸ್ವಾವಲಂಬನೆ ಒದಗಿಸಿಕೊಡುವಲ್ಲಿಯೂ ಪಾಲಿಕೆ ಸೋತಿದೆ.
ಪ್ರತಿ ವರ್ಷ ಬೋಗಸ್ ಬಜೆಟ್: `ಪ್ರತಿ ಬಾರಿಯೂ ಬಿಬಿಎಂಪಿಯು ಅವ್ಯವಸ್ಥಿತವಾದ ಹಾಗೂ ಅನಗತ್ಯವಾದ ಬೋಗಸ್ ಬಜೆಟ್ ಅನ್ನು ಮಂಡಿಸುತ್ತಿದ್ದು, ಅದನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಲೇ ಇದ್ದೇನೆ. ಆದರೆ ಅದು ಸಾಧ್ಯವಾಗುತ್ತಲೇ ಇಲ್ಲ~ ಎಂದು ಜೆಡಿಎಸ್ ಗುಂಪಿನ ನಾಯಕ ಪದ್ಮನಾಭರೆಡ್ಡಿ ಪ್ರತಿಕ್ರಿಯಿಸುತ್ತಾರೆ.
`ಬಿಬಿಎಂಪಿಯ ಆರ್ಥಿಕ ಸ್ಥಿತಿ ಈಗ `ಸತ್ಯಂ ಕಂಪ್ಯೂಟರ್~ನ ರೀತಿಯಲ್ಲಿದೆ. ಪಾಲಿಕೆಗೆ ಹೊರಗಿನವರ ಲೆಕ್ಕ ಪರಿಶೋಧನೆ ವ್ಯವಸ್ಥೆಯ ಅಗತ್ಯವಿರುವಂತೆ ಕಾಣುತ್ತಿದೆ. ಬಿಬಿಎಂಪಿ ಆಡಳಿತಕ್ಕೆ ಹಣಕಾಸು ನಿರ್ವಹಣೆಯ ಬಗ್ಗೆ ಸರಿಯಾದ ತಿಳಿವಳಿಕೆಯೇ ಇಲ್ಲದಿರುವುದು ದುರಂತ. ಬಿಬಿಎಂಪಿಗೆ ಹೇಗೆ ಹಣ ಬರುತ್ತದೆ? ಹಾಗೂ ಅದನ್ನು ಹೇಗೆ ಖರ್ಚು ಮಾಡಬೇಕು? ಎಂಬ ಬಗ್ಗೆಯೂ ಆಡಳಿತ ನಡೆಸುವವರಿಗೆ ಚಿಂತನೆ ಇಲ್ಲ~ ಎಂದು ಆರ್ಥಿಕ ತಜ್ಞ ಎನ್. ಕೃಷ್ಣಕುಮಾರ್ ಹೇಳುತ್ತಾರೆ.
ಇನ್ನು, 2008-09 ರಲ್ಲಿ ಆರಂಭಗೊಂಡಿರುವ ಸಣ್ಣ ಕಾಮಗಾರಿಗಳು ಪೂರ್ಣಗೊಳ್ಳಲೂ ಇನ್ನು ಎರಡು- ಮೂರು ವರ್ಷಗಳೇ ಬೇಕಾಗುತ್ತದೆ. ಇದು ಪಾಲಿಕೆಯಲ್ಲಿನ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳ ವೈಫಲ್ಯವನ್ನು ಎತ್ತಿ ತೋರುವಂತಿದೆ. ಆದರೆ, ಈ ಎಲ್ಲ ಆರೋಪಗಳನ್ನು ಉಪ ಮೇಯರ್ ಎಸ್.ಹರೀಶ್ ನಿರಾಕರಿಸುತ್ತಾರೆ. `ಬಿಬಿಎಂಪಿಯು 2008-09 ಹಾಗೂ 2009-10ರಿಂದ ಪಾಲಿಕೆಯ ಅಕ್ರಮ-ಸಕ್ರಮ ಯೋಜನೆಯಿಂದ ಸಾಕಷ್ಟು ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ನಿರೀಕ್ಷೆ ಹೊಂದಿತ್ತು. ದುರದೃಷ್ಟವಶಾತ್ ಯೋಜನೆ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಆದರೂ, ಹಿಂದಿನ ಬಜೆಟ್‌ಗಳಲ್ಲಿ ರೂಪಿಸಲಾಗಿರುವ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಗಮನ ನೀಡಲಾಗಿದೆ~ ಎಂದರು.
`ಆಸ್ತಿ ತೆರಿಗೆಯ ಆದಾಯ ಸಂಗ್ರಹ ರೂ. 600 ಕೋಟಿಯಿಂದ ಈ ವರ್ಷ ರೂ.1800 ಕೋಟಿಗಳಿಗೆ ಹೆಚ್ಚಾಗಿದೆ. ಆಸ್ತಿಗಳಿಗೆ ಗುರುತಿನ ಸಂಖ್ಯೆ (ಪಿಐಡಿ) ನೀಡುವ ಮೂಲಕ ಮುಂದಿನ ವರ್ಷ ಈ ಮೂಲದಿಂದ ಎರಡು ಸಾವಿರ ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. 2 ವರ್ಷಗಳಿಂದ ಪಾಲಿಕೆಗೆ ಸರ್ಕಾರದಿಂದ ಯಾವುದೇ ವಿಶೇಷ ಅನುದಾನಗಳು ಬಂದಿಲ್ಲ. ಇದರಿಂದ ಯೋಜನೆಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ತರಲಾಗಿಲ್ಲ~ ಎಂದು ಅವರು ತಿಳಿಸಿದ್ದಾರೆ.
ಪಾಲಿಕೆಯ ತೆರಿಗೆ ಹಾಗೂ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಮಂಜುನಾಥರಾಜು, `ಯಾವ ಸರ್ಕಾರವೂ ಬಜೆಟ್‌ನ ಶೇಕಡ ನೂರರಷ್ಟು ಕಾರ್ಯರೂಪಕ್ಕೆ ತರಲಾಗುವುದಿಲ್ಲ. ಶೇಕಡ 50 ರಷ್ಟು ಸಾಧನೆಯೇ ದೊಡ್ಡದು. ಹೀಗಿರುವಾಗ ಪಾಲಿಕೆ ಶೇಕಡ 40ಕ್ಕೂ ಹೆಚ್ಚಿನ ಬಜೆಟ್ ಕಾರ್ಯರೂಪಕ್ಕೆ ತಂದಿದೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಬಂಡವಾಳ ಸಂಗ್ರಹ ಗುರಿ ಎಷ್ಟು?
ಪಾಲಿಕೆಯ ದೊಡ್ಡ ಆದಾಯಗಳ ಮೂಲವಾದ ಆರ್ಥಿಕ ಹಾಗೂ ವ್ಯವಹಾರ ವಿಭಾಗದಿಂದ ರೂ. 2,152 ಕೋಟಿ, ಕಂದಾಯದಿಂದ ರೂ. 2,736.75 ಕೋಟಿ, ನಗರ ಯೋಜನೆಯಿಂದ ರೂ.1,116.4 ಕೋಟಿ, ಎಂಜಿನಿಯರಿಂಗ್ ಹಾಗೂ ಸಾರ್ವಜನಿಕ ಕಾಮಗಾರಿಗಳಿಂದ ರೂ. 1,354 ಕೋಟಿ, ಎಂಜಿನಿಯರಿಂಗ್ ಯೋಜನೆಗಳಿಂದ ರೂ. 938 ಕೋಟಿ, ಎಂಜಿನಿಯರಿಂಗ್ ಕ್ಷೇತ್ರದ ಬಂಡವಾಳ ಯೋಜನೆಯಿಂದ ರೂ. 315 ಕೋಟಿ ಮತ್ತು ಜಾಹೀರಾತಿನಿಂದ ರೂ. 198 ಕೋಟಿ ಬಂಡವಾಳ ಸಂಗ್ರಹ ನಿರೀಕ್ಷೆಯನ್ನು ಪಾಲಿಕೆ ಹೊಂದಿತ್ತು. ಇದರಲ್ಲಿ ಕಂದಾಯ ವಿಭಾಗ ಮಾತ್ರ ರೂ.1,251.46 ಕೋಟಿ ಬಂಡವಾಳ ಸಂಗ್ರಹಣೆಯ ಗುರಿ ಸಾಧಿಸಿದೆ. ಇನ್ನು ಸರ್ಕಾರದಿಂದ ನಿರೀಕ್ಷಿಸಿದ್ದ ಹಣವೂ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಿಲ್ಲ.
ಮೇಯರ್ ಆಯ್ಕೆ ನಂತರ ಮಂಡನೆ?
ಏಪ್ರಿಲ್ 23ಕ್ಕೆ ಮೇಯರ್ ಪಿ. ಶಾರದಮ್ಮ ಅವರ ಅಧಿಕಾರ ಅವಧಿ ಪೂರ್ಣಗೊಳ್ಳಲಿದೆ. ನೂತನ ಮೇಯರ್ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಂತರವೇ 2012-13ನೇ ಸಾಲಿನ ಬಜೆಟ್ ಕರಡು ಸಿದ್ಧವಾಗಬೇಕಾಗಿದೆ. ಇದರಿಂದ ಈ ವರ್ಷವೂ ಬಜೆಟ್ ಮಂಡನೆ ವಿಳಂಬವಾಗಲಿದೆ. ಈ ನಡುವೆ, ಬಜೆಟ್ ಕರಡು ಸಿದ್ಧಪಡಿಸುವುದರಲ್ಲಿ ವಿಳಂಬವಾಗಿರುವುದನ್ನು ಒಪ್ಪಿಕೊಳ್ಳುವ ಪಾಲಿಕೆ ಹಣಕಾಸು ಇಲಾಖೆಯ ಅಧಿಕಾರಿಗಳು, ಶೀಘ್ರ ಬಜೆಟ್ ಕರಡು ಪಟ್ಟಿಯನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಸಲಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.