ADVERTISEMENT

ಬಿಬಿಎಂ ವಿದ್ಯಾರ್ಥಿ ಸೆರೆ

ಮೆಯೋಹಾಲ್ ಬಳಿ ಅಪಘಾತ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:46 IST
Last Updated 3 ಜೂನ್ 2013, 19:46 IST

ಬೆಂಗಳೂರು: ನಗರದ ಎಂ.ಜಿ.ರಸ್ತೆಯ ಮೆಯೋಹಾಲ್ ಜಂಕ್ಷನ್ ಸಮೀಪ ಶನಿವಾರ ರಾತ್ರಿ ಕಾರು (ಎಸ್‌ಯುವಿ) ಮತ್ತು ಆಟೊ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸರು ರಾಜೇಶ್ ಎಲ್.ರೆಡ್ಡಿ (24) ಎಂಬ ಬಿಬಿಎಂ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

ಸಿ.ವಿ.ರಾಮನ್‌ನಗರದಲ್ಲಿ ವಾಸವಿರುವ ಉದ್ಯಮಿ ಎಸ್.ಲೋಕೇಶ್‌ರೆಡ್ಡಿ ಮತ್ತು ಪ್ರೇಮ ದಂಪತಿಯ ಮಗನಾದ ರಾಜೇಶ್, ಹೊಸೂರು ರಸ್ತೆ ಕ್ರೈಸ್ಟ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎಂ ಓದುತ್ತಿದ್ದಾನೆ.

`ಸ್ನೇಹಿತರಾದ ಅಶೋಕ್, ಪೃಥ್ವಿ ಮತ್ತು ನವೀನ್ ಜತೆ ಕಾರಿನಲ್ಲಿ ಶಿವಾಜಿನಗರದ ಹೋಟೆಲ್‌ಗೆ ಹೋಗುತ್ತಿದ್ದಾಗ ಮೆಯೋಹಾಲ್ ಜಂಕ್ಷನ್ ಸಮೀಪ ಆಟೊವೊಂದು ಏಕಾಏಕಿ ವಾಹನಕ್ಕೆ ಅಡ್ಡಬಂದಿತು. ಆಗ ನನ್ನ ಕಾರು ಸುಮಾರು 140 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಕೂಡಲೇ ವಾಹನದ ಬ್ರೇಕ್ ಹಾಕಿ ಆಟೊಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದೆ. ಆದರೆ, ನಿಯಂತ್ರಣಕ್ಕೆ ಸಿಗದ ಕಾರು ಆಟೊಗೆ ಡಿಕ್ಕಿ ಹೊಡೆಯಿತು ಎಂದು ರಾಜೇಶ್ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾನೆ' ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವೇಳೆ ಆತ ಪಾನಮತ್ತನಾಗಿದ್ದನೇ ಎಂಬುದು ಗೊತ್ತಾಗಿಲ್ಲ. ಈ ಕಾರಣಕ್ಕಾಗಿ ಆತನಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಸೋಮವಾರ  ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಆತನ ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ವೈದ್ಯರು ಮತ್ತು ಎಫ್‌ಎಸ್‌ಎಲ್ ತಜ್ಞರು ವರದಿ ನೀಡಿದ ಬಳಿಕ, ಆತ ಪಾನಮತ್ತನಾಗಿದ್ದನೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಅಪಘಾತದಲ್ಲಿ ಮರ್ಫಿ ಟೌನ್‌ನ ದೀಪಕ್ (20) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅಲ್ಲದೇ, ದೀಪಕ್ ಅವರ ಸ್ನೇಹಿತ ಕಾರ್ತಿಕ್ ಮತ್ತು ಆಟೊ ಚಾಲಕ ಯೂನಿಸ್ ಅಲಿ ಎಂಬುವರು ಗಾಯಗೊಂಡಿದ್ದರು.

ಅಲಿ ಅವರನ್ನು ಬೌರಿಂಗ್ ಆಸ್ಪತ್ರೆಯಿಂದ ಮಲ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ವೈದ್ಯರು ಅವರ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕಾರ್ತಿಕ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ.

ಬಿಜೆಪಿ ಕಾರ್ಯಕರ್ತರಾದ ಲೋಕೇಶ್‌ರೆಡ್ಡಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ.  ಶಿಕ್ಷಣ ಸಂಸ್ಥೆ, ಹೋಟೆಲ್ ಮತ್ತು ಆಸ್ಪತ್ರೆ ಇದೆ. ಅಲ್ಲದೇ ಅವರು `ಪ್ರೀತಿಯ ತೇರು' ಎಂಬ ಚಲನಚಿತ್ರವನ್ನು ನಿರ್ಮಿಸಿದ್ದಾರೆ.

ಭವಿಷ್ಯ ಹಾಳು ಮಾಡಿದರು: `ವೈಟ್‌ಫೀಲ್ಡ್ ಬಳಿಯ ಎಟ್ಟಕೋಡಿ ಗ್ರಾಮದಲ್ಲಿ ನನ್ನ ಫಾರ್ಮ್‌ಹೌಸ್ ಇದೆ. ಚಾಲಕ ಶ್ರೀನಿವಾಸ್ ಜತೆ ಶನಿವಾರ ಸಂಜೆ ಆ ಫಾರ್ಮ್‌ಹೌಸ್‌ಗೆ ಹೋಗಿದ್ದ ನಾನು ಅಲ್ಲಿಯೇ ಮದ್ಯಪಾನ ಮಾಡಿ, ನಂತರ ಮದ್ಯದ ಖಾಲಿ ಬಾಟಲಿಗಳನ್ನು ಕಾರಿನಲ್ಲಿ ಇಟ್ಟಿದ್ದೆ. ಮನೆಯಲ್ಲಿ ಪತ್ನಿಯ ಹುಟ್ಟುಹಬ್ಬ ಸಮಾರಂಭವಿದ್ದ ಕಾರಣ ಚಾಲಕನೊಂದಿಗೆ ರಾತ್ರಿ 12 ಗಂಟೆ ಸುಮಾರಿಗೆ ಕಾರಿನಲ್ಲಿ ಮನೆಗೆ ವಾಪಸ್ ಬಂದೆ. ಆದರೆ, ಆ ವೇಳೆಗೆ ಮನೆಯಲ್ಲಿ ಊಟ ಖಾಲಿಯಾಗಿತ್ತು. ಇದರಿಂದಾಗಿ ಕಿರಿಯ ಮಗ ರಾಜೇಶ್ ಮತ್ತು ಸ್ನೇಹಿತರು ಹೋಟೆಲ್‌ನಿಂದ ಊಟ ತರಲು ಶ್ರೀನಿವಾಸ್ ಜತೆ ಕಾರಿನಲ್ಲಿ ಹೊರ ಹೋದಾಗ ಈ ಅಪಘಾತ ಸಂಭವಿಸಿದೆ' ಎಂದು ಲೋಕೇಶ್‌ರೆಡ್ಡಿ `ಪ್ರಜಾವಾಣಿ'ಗೆ ತಿಳಿಸಿದರು.

`ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಶ್ರೀನಿವಾಸ್ ತಾನೇ ಕಾರು ಚಾಲನೆ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡರೂ ಪೊಲೀಸರು ಆತನ ವಿರುದ್ಧ ದೂರು ದಾಖಲಿಸಿಲ್ಲ. ಬದಲಿಗೆ ಮಗನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಗ ಯಾವುದೇ ತಪ್ಪು ಮಾಡಿರದಿದ್ದರೂ ಆತನ ಮೇಲೆ ಒತ್ತಡ ಹೇರಿ ಮತ್ತು ಬೆದರಿಕೆ ಹಾಕಿ ತಪ್ಪೊಪ್ಪಿಗೆ ಹೇಳಿಕೆ ಪಡೆದುಕೊಂಡಿದ್ದಾರೆ. ಆ ಮೂಲಕ ಪೊಲೀಸರು ಮಗನ ಭವಿಷ್ಯವನ್ನು ಹಾಳು ಮಾಡಿದ್ದಾರೆ' ಎಂದು ದೂರಿದರು.

ಪತ್ನಿಯ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಲು ಮೇ 22ರಂದು ಹೊಸೂರು ರಸ್ತೆಯ ಶೋ ರೂಂನಲ್ಲಿ  ್ಙ ಒಂದು ಕೋಟಿ ಮೊತ್ತದ `ಆಡಿ-ಕ್ಯೂ 7' ಕಾರು ಖರೀದಿಸಿದ್ದೆ. ವಾಹನಕ್ಕೆ ಫ್ಯಾನ್ಸಿ ನೋಂದಣಿ ಸಂಖ್ಯೆ ಪಡೆಯುವ ಉದ್ದೇಶಕ್ಕಾಗಿ ಆರ್‌ಟಿಒ ಕಚೇರಿಗೆ ಅರ್ಜಿ ಸಲ್ಲಿಸಿದ್ದೆ. ಆರ್‌ಟಿಒ ಅಧಿಕಾರಿಗಳು ಕೆಎ-03, ಎಂಟಿ-222 ನೋಂದಣಿ ಸಂಖ್ಯೆ ಕೊಟ್ಟಿದ್ದು, ನೋಂದಣಿ ಪ್ರಕ್ರಿಯೆ ಸೋಮವಾರ ನಡೆಯಬೇಕಿತ್ತು ಎಂದು ಅವರು ಹೇಳಿದರು.

ಸಿ.ಸಿ ಕ್ಯಾಮೆರಾದಲ್ಲಿ ದಾಖಲು
ರಾಜೇಶ್ ವಿರುದ್ಧ ಕೊಲೆಯ ಉದ್ದೇಶವಿಲ್ಲದೆ ಅಚಾತುರ್ಯವಾಗಿ ಸಂಭವಿಸಿದ ಸಾವು (ಐಪಿಸಿ-304), ನಿರ್ಲಕ್ಷ್ಯ ಅಥವಾ ಅಜಾಗರೂಕತೆಯಿಂದ ಬೇರೆಯವರ ಪ್ರಾಣಕ್ಕೆ ಸಂಚಕಾರ ತಂದ (ಐಪಿಸಿ-337 ಮತ್ತು ಐಪಿಸಿ-338) ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಅಪಘಾತದ ಸಂದರ್ಭದಲ್ಲಿ ರಾಜೇಶ್ ಮತ್ತು ಸ್ನೇಹಿತರ ಜತೆ ಯುವತಿಯೊಬ್ಬಳು ಕಾರಿನಲ್ಲಿದ್ದಳು ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಶನಿವಾರ ರಾತ್ರಿ 1.56ಕ್ಕೆ ಈ ಘಟನೆ ನಡೆದಿದ್ದು, ಮೆಯೋಹಾಲ್ ಜಂಕ್ಷನ್‌ನಲ್ಲಿರುವ ಸಿ.ಸಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯಾವಳಿ ದಾಖಲಾಗಿದೆ. ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಕರಣ ವರ್ಗಾವಣೆ
`ಘಟನೆ ಸಂಬಂಧ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವು (ಐಪಿಸಿ-304ಎ) ಆರೋಪದಡಿ ಅಶೋಕನಗರ ಸಂಚಾರ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಸಿಬ್ಬಂದಿ, ಭಾನುವಾರ ಆರ್‌ಟಿಒ ಕಚೇರಿಗಳಿಗೆ ರಜೆ ಇರುವುದರಿಂದ ಕಾರಿನ ಮಾಲೀಕರ ಬಗ್ಗೆ ಮಾಹಿತಿ ಸಿಗುವುದಿಲ್ಲವೆಂಬ ಕಾರಣ ನೀಡಿ ಆರೋಪಿಯನ್ನು ಪತ್ತೆ ಮಾಡದೆ ನಿರ್ಲಕ್ಷ್ಯ ತೋರಿದರು. ಅಲ್ಲದೇ, ಆರೋಪಿ ಪರ ವಕೀಲರು ಸೋಮವಾರ ಬೆಳಿಗ್ಗೆ ಠಾಣೆಯನ್ನು ಸಂಪರ್ಕಿಸಿದರೂ ಆರೋಪಿಯನ್ನು ಬಂಧಿಸದೆ ಕೈ ಚೆಲ್ಲಿದರು' ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ `ಪ್ರಜಾವಾಣಿ'ಗೆ ತಿಳಿಸಿದರು.

`ಇದೀಗ ಪ್ರಕರಣವನ್ನು ಅಶೋಕನಗರ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗೆ ವರ್ಗಾಯಿಸಲಾಗಿದ್ದು, ಆ ಠಾಣೆಯ ಸಿಬ್ಬಂದಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.