ADVERTISEMENT

ಬುರ್ಖಾ ಧರಿಸಿ, ಚಾಕು ಹಿಡಿದು ಓಡಾಟ

​ಪ್ರಜಾವಾಣಿ ವಾರ್ತೆ
Published 29 ಮೇ 2018, 20:03 IST
Last Updated 29 ಮೇ 2018, 20:03 IST

ಬೆಂಗಳೂರು: ಬುರ್ಖಾ ಧರಿಸಿ, ಚಾಕು ಹಿಡಿದುಕೊಂಡು ಸೋಮವಾರ ರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಶಿವರಾಜ್ ಎಂಬಾತನನ್ನು ಕೆ.ಜಿ.ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಎಚ್‌ಆರ್‌ಬಿಆರ್ ಲೇಔಟ್ ಸಮೀಪದ ಮಸೀದಿಯೊಂದರ ಬಳಿ ಓಡಾಡುತ್ತಿದ್ದ ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಯಾರೋ ಯುವತಿ ಬುರ್ಖಾ ಧರಿಸಿಕೊಂಡು ಹೊರಟಿರಬಹುದು ಎಂದು ಸ್ಥಳೀಯರು ಆರಂಭದಲ್ಲಿ ಸುಮ್ಮನಾಗಿದ್ದರು. ಆರೋಪಿ ಧರಿಸಿದ್ದ ಚಪ್ಪಲಿಗಳನ್ನು ನೋಡಿ ಅನುಮಾನಗೊಂಡಿದ್ದ ಸ್ಥಳೀಯರು, ಆತನನ್ನು ಮಾತನಾಡಿಸಲು ಹೋಗಿದ್ದರು. ಆಗ ಆರೋಪಿ ತಪ್ಪಿಸಿಕೊಂಡು ಓಡಲಾರಂಭಿಸಿದ್ದ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಆತನನ್ನು ಬೆನ್ನಟ್ಟಿದ್ದ ಸ್ಥಳೀಯರು, ಮಸೀದಿ ಬಳಿಯೇ ಹಿಡಿದುಕೊಂಡು ವಿಚಾರಿಸಿದ್ದರು. ಕೈ ಕವಚ ಹಾಕಿಕೊಂಡಿದ್ದ ಆತನ ಬಳಿ ಚಾಕು ಪತ್ತೆಯಾಗಿತ್ತು. ನಂತರ, ಸ್ಥಳಕ್ಕೆ ಹೋದ ಹೊಯ್ಸಳ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ’ ಎಂದರು.

ಸಾಲ ವಸೂಲಿಗೆ ವೇಷ: ‘ಬಂಧಿತ ಶಿವರಾಜ್, ರಾಯಚೂರಿನವ ಎಂದು ಗೊತ್ತಾಗಿದೆ. ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದು ನೆಲೆಸಿದ್ದಾನೆ. ಆತ ಸ್ನೇಹಿತನೊಬ್ಬನಿಂದ ಸಾಲ ಪಡೆದುಕೊಂಡಿದ್ದ. ಸಾಲ ವಾಪಸ್‌ ನೀಡುವಂತೆ ಸ್ನೇಹಿತ ಒತ್ತಾಯಿಸುತ್ತಿದ್ದ. ಹೀಗಾಗಿ, ಆತನ ಮೇಲೆ ಹಲ್ಲೆ ಮಾಡಲು ಈ ರೀತಿಯ ವೇಷದಲ್ಲಿ ಹೊರಟಿದ್ದ’ ಎಂದು ಪೊಲೀಸರು ವಿವರಿಸಿದರು.

’ಸಾಲ ತೀರಿಸಲು ನನ್ನ ಬಳಿ ಹಣವಿರಲಿಲ್ಲ. ಕಾಲಾವಕಾಶವನ್ನೂ ಸ್ನೇಹಿತ ಕೊಡುತ್ತಿರಲಿಲ್ಲ. ಹೀಗಾಗಿ, ಆತನ ಮೇಲೆ ಹಲ್ಲೆ ಮಾಡಲೆಂದು ಚಾಕು ಹಿಡಿದುಕೊಂಡು ಹೋಗುತ್ತಿದ್ದೆ. ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಬುರ್ಖಾ ಧರಿಸಿದ್ದೆ’ ಎಂದು ಶಿವರಾಜ್‌ ಹೇಳಿಕೆ ನೀಡಿದ್ದಾನೆ.

ಆತನ ವಿರುದ್ಧ ದೂರು ನೀಡಿರುವ ಸ್ಥಳೀಯರು, ‘ಸ್ನೇಹಿತನ ಕೊಲೆ ಮಾಡುವ ಉದ್ದೇಶದಿಂದಲೇ ಆರೋಪಿ ಬಂದಿದ್ದ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.