ADVERTISEMENT

ಬೆದರಿಕೆ ಆರೋಪ: ಆರು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 19:35 IST
Last Updated 17 ಆಗಸ್ಟ್ 2012, 19:35 IST

ಬೆಂಗಳೂರು: ಈಶಾನ್ಯ ರಾಜ್ಯಗಳಿಂದ ಬಂದಿರುವ ಜನರಿಗೆ ಬೆದರಿಕೆ ಹಾಕಿರುವ, ಎಸ್‌ಎಂಎಸ್ ಮತ್ತು ಎಂಎಂಎಸ್ ಮೂಲಕ ಬೆದರಿಸಿರುವ ಆರೋಪದ ಮೇಲೆ ಆರು ಮಂದಿಯನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಆರ್.ಅಶೋಕ ತಿಳಿಸಿದರು.

ಶುಕ್ರವಾರ ಸಂಜೆ ನಗರದ ರೈಲ್ವೆ ನಿಲ್ದಾಣದಲ್ಲಿ ಪರಿಸ್ಥಿತಿ ಅವಲೋಕಿಸಿದ ಬಳಿಕ ವಿಧಾನಸೌಧದಲ್ಲಿ ಕಾನೂನು ಸಚಿವ ಎಸ್.ಸುರೇಶ್‌ಕುಮಾರ್, ಅಸ್ಸಾಂ ಸಚಿವರಾದ ಚಂದನ್ ಬ್ರಹ್ಮ ಮತ್ತು ನಿಲೊಮಣಿ ಸೇನ್ ದೇಕಾ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, `ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರನ್ನು ಬಂಧಿಸಲಾಗುವುದು~ ಎಂದು ತಿಳಿಸಿದರು.

ಎಸ್‌ಎಂಎಸ್ ಮತ್ತು ಎಂಎಂಎಸ್ ಮೂಲಕ ಈಶಾನ್ಯ ರಾಜ್ಯಗಳ ಜನರನ್ನು ಬೆದರಿಸುವಲ್ಲಿ ಕೆಲವರು ಭಾಗಿಯಾಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈಶಾನ್ಯ ಭಾಗದಿಂದ ಬಂದಿರುವ ಜನರಿಗೆ ನೇರವಾಗಿ ಬೆದರಿಕೆ ಹಾಕಿರುವವರನ್ನೂ ಈಗಾಗಲೇ ಗುರುತಿಸಿ ಬಂಧಿಸಲಾಗಿದೆ. ಸಾಮೂಹಿಕ ಎಸ್‌ಎಂಎಸ್, ಎಂಎಂಎಸ್ ರವಾನಿಸಿದವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದರು.

`ಈಶಾನ್ಯ ರಾಜ್ಯಗಳಿಂದ ಬಂದ ಜನರಿಗೆ ತೊಂದರೆ ನೀಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಆರೋಪಿಗಳು ಎಷ್ಟೇ ಬಲಾಢ್ಯರಾದರೂ ಅವರ ವಿರುದ್ಧ ಕಾನೂನು ತನ್ನ ಕ್ರಮ ಜರುಗಿಸಲಿದೆ. ಯಾವುದೇ ವ್ಯಕ್ತಿ ಇಂತಹ ದುಸ್ಸಾಹಸಕ್ಕೆ ಕೈಹಾಕಿದರೂ ಅವರನ್ನು ಮಟ್ಟ ಹಾಕಲಾಗುವುದು~ ಎಂದು ಎಚ್ಚರಿಕೆ ನೀಡಿದರು.

ರಕ್ಷಣೆಗೆ ಸಭೆ: ಈಶಾನ್ಯ ರಾಜ್ಯಗಳಿಂದ ಬಂದಿರುವ ಜನರ ರಕ್ಷಣೆಗೆ ಸಂಬಂಧಿಸಿದಂತೆ ಗೃಹ ಸಚಿವರೂ ಆದ ಅಶೋಕ ಅವರು ಶುಕ್ರವಾರ ಮಧ್ಯಾಹ್ನ ,`ಕಾಸಿಯಾ~, ಮಾಲ್‌ಗಳ ಮಾಲೀಕರು, ಹೋಟೆಲ್ ಅಸೋಸಿಯೇಷನ್, ಟಿಬೆಟಿಯನ್ನರ ಅಸೋಸಿಯೇಷನ್, ನರ್ಸಿಂಗ್ ಹಾಗೂ ಇತರ ಕಾಲೇಜುಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ಬಳಿಕ ಮಾತನಾಡಿದ ಅವರು, ನಗರದ ಮಾಲ್ ಮತ್ತು ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ಈಶಾನ್ಯ ರಾಜ್ಯಗಳ ಜನರಿಗೆ ಅಲ್ಲಿಯೇ ಊಟ, ವಸತಿ ವ್ಯವಸ್ಥೆ ಕಲ್ಪಿಸಲು ಹಾಗೂ ಸುರಕ್ಷತೆ ಬಗ್ಗೆ ಅವರಲ್ಲಿ ವಿಶ್ವಾಸ ಮೂಡಿಸಲು ಮಾಲ್ ಮತ್ತು ಹೋಟೆಲ್ ಮಾಲೀಕರಿಗೆ ಸೂಚಿಸಲಾಗಿದೆ. ರಾತ್ರಿ ವೇಳೆ ಮಾಲ್‌ಗಳಲ್ಲಿ ಕನ್ನಡಿಗರೊಂದಿಗೆ ತಂಗಲು ಈಶಾನ್ಯ ರಾಜ್ಯದವರಿಗೆ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ ಎಂದರು.

`ರೈಲ್ವೆ ನಿಲ್ದಾಣಕ್ಕೆ ತೆರಳಿ, ಸೂಕ್ತ ಭದ್ರತೆ ಕಲ್ಪಿಸುವ ಭರವಸೆ ನೀಡುವ ಮೂಲಕ 200 ಜನರ ನಿರ್ಗಮನ ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಕ್ಷಿಪ್ರ ಕಾರ್ಯಪಡೆಯ ಆರು ತುಕಡಿಗಳು ನಗರಕ್ಕೆ ಬರಲಿವೆ. ಈಶಾನ್ಯ ರಾಜ್ಯಗಳ ಸುಮಾರು ಮೂರು ಲಕ್ಷ ಜನರು ನಗರದಲ್ಲಿ ವಾಸ ಮಾಡುತ್ತಿದ್ದಾರೆ. ಅವರು ಹೆಚ್ಚಾಗಿ ವಾಸ ಮಾಡುವ ಬಡಾವಣೆಗಳಲ್ಲಿ ಪಥಸಂಚಲನ, ಗಸ್ತು, ಬಂದೋಬಸ್ತ್ ಹೆಚ್ಚಿಸಲಾಗುವುದು~ ಎಂದರು.

ಪ್ರಕರಣ ದಾಖಲು: ಮೊಟಾರು ಬೈಕ್‌ನಲ್ಲಿ ಬಂದು ರಸ್ತೆಯಲ್ಲಿಯೇ ಬೆದರಿಕೆ ಹಾಕಿದ್ದಾರೆ ಎಂದು ಈಶಾನ್ಯ ರಾಜ್ಯಗಳ ಜನರು ನೀಡಿದ ದೂರು ಆಧರಿಸಿ ಆರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಸರ್ಕಾರ ಧೈರ್ಯ ತುಂಬಿದ ನಂತರ ದೂರು ನೀಡಲು ಮುಂದೆ ಬರುತ್ತಿದ್ದಾರೆ. ದೂರು ಸ್ವೀಕರಿಸಲು ನಿರಾಕರಿಸಿದ ಪೋಲಿಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

`ರೈಲು ನಿಲ್ದಾಣದಲ್ಲಿ 400 ಜನರೊಂದಿಗೆ ಮಾತನಾಡಿದ್ದೇನೆ. ಅವರಲ್ಲಿ ಶೇ 60ರಷ್ಟು ಜನರು ತಮ್ಮ ಪೋಷಕರೊಂದಿಗೆ ಇರಬೇಕು ಎಂಬ ಕಾರಣಕ್ಕಾಗಿ ಅಸ್ಸಾಂಗೆ ತೆರಳಿದ್ದಾರೆ. ಶೇ 40ರಷ್ಟು ಜನರು ಮಾತ್ರ ಆತಂಕದಿಂದ ಇಲ್ಲಿಂದ ತೆರಳಿದ್ದಾರೆ~ ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.