ADVERTISEMENT

ಬೇಜವಾಬ್ದಾರಿ ಪರಮಾವಧಿ: ಕೋರ್ಟ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸಿರುವ ಆರೋಪ ಹೊತ್ತ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಹೈಕೋರ್ಟ್ ಆದೇಶದಂತೆ ಸೌಲಭ್ಯವನ್ನೂ ನೀಡದೆ, ಅವರ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳದೆ, ಆದೇಶ ಹೊರಟ ಒಂದು ವರ್ಷದ ನಂತರ ಮೇಲ್ಮನವಿ ಸಲ್ಲಿಸಿದ್ದ ಸರ್ಕಾರವನ್ನು ಹೈಕೋರ್ಟ್ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಪಾಲಿಕೆಯ ಕಾಮಗಾರಿಯಲ್ಲಿ ಕೆಲವು ಅವ್ಯವಹಾರ ನಡೆಸಿರುವ ಆರೋಪ ಹೊತ್ತಿದ್ದ ಬಿ.ಎಂ.ಮುನಿಯಪ್ಪ ಹಾಗೂ ಕೆ.ಕೆ.ಕೊಂಡಯ್ಯ ಅವರ ಪ್ರಕರಣ ಇದು. ಲೋಕಾಯುಕ್ತರು ಇವರ ವಿರುದ್ಧ ವರದಿ ನೀಡಿದ್ದನ್ನು ಇವರು ಏಕಸದಸ್ಯ ಪೀಠದ ಮುಂದೆ ಪ್ರಶ್ನಿಸಿದ್ದರು.

ಕೆಲವು ತಾಂತ್ರಿಕ ಕಾರಣಗಳಿಂದ ಅವರ ಪರವಾಗಿ ಏಕಸದಸ್ಯ ಪೀಠ ತೀರ್ಪು ನೀಡಿತ್ತು. ಆದರೆ ಅಗತ್ಯ ಬಿದ್ದರೆ ಅವರ ವಿರುದ್ಧ ಹೊಸದಾಗಿ ಪ್ರಕರಣ ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಪೀಠ ಆದೇಶಿಸಿತ್ತು.

ಆದರೆ ಅದಾವುದನ್ನೂ ಸರ್ಕಾರ ಮಾಡಿರಲಿಲ್ಲ. ಬದಲಾಗಿ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಒಂದು ವರ್ಷ ಕಳೆದ ಮೇಲೆ ಈಗ ಮೇಲ್ಮನವಿ ಸಲ್ಲಿಸಿತ್ತು. ಇದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠದ ಅಸಮಾಧಾನಕ್ಕೆ ಕಾರಣವಾಯಿತು.

`ಈ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು 2000ನೇ ಸಾಲಿನಲ್ಲಿ ನಿವೃತ್ತರಾದರೂ ಪ್ರಕರಣ ಕೋರ್ಟ್‌ನಲ್ಲಿ ಇರುವುದರಿಂದ ಅವರಿಗೆ ಇದುವರೆಗೆ ಸೌಲಭ್ಯ ನೀಡಿಲ್ಲ. ಏಕಸದಸ್ಯ ಪೀಠದ ಆದೇಶವನ್ನು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಕೊಂಡೊಯ್ಯುವಲ್ಲಿಯೇ ಸಮಯ ವ್ಯರ್ಥ ಮಾಡಲಾಗಿದೆ. 

ಹೈಕೋರ್ಟ್ ಆದೇಶದ ಪ್ರತಿ ಕಳೆದು ಹೋಯಿತು ಎಂಬ ಬೇಜವಾಬ್ದಾರಿಯ ಮಾಹಿತಿ ನೀಡಲಾಗಿದೆ. ಸರ್ಕಾರದ ಇಂತಹ ವರ್ತನೆ ಹಾಸ್ಯಾಸ್ಪದವಾಗಿದೆ. ಇದು ಬೇಜವಾಬ್ದಾರಿಯ ಪರಮಾವಧಿಯಾಗಿದೆ~ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೇಲ್ಮನವಿ ಸಲ್ಲಿಸಲು ವಿಳಂಬ ಮಾಡಲಾಗಿದೆ ಎಂಬ ಕಾರಣದಿಂದಲೇ ಸರ್ಕಾರದ ಮೇಲ್ಮನವಿಯನ್ನು ಪೀಠ ವಜಾಗೊಳಿಸಿ, ಎಂಜಿನಿಯರ್‌ಗಳ ಪರ ತೀರ್ಪು ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿಯಿತು.
 
ಆಕ್ಷೇಪಣೆಗೆ ಕಾಲಾವಕಾಶ
ದ್ವಿ ಪತ್ನಿತ್ವ ಅನುಸರಿಸುತ್ತಿರುವ ಆರೋಪ ಹೊತ್ತ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕ್ರಮಕ್ಕೆ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಕುಮಾರಸ್ವಾಮಿ ಹಾಗೂ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಶಶಿಧರ ಬೆಳಗುಂಬ ಎನ್ನುವವರು ಸಲ್ಲಿಸಿರುವ ಅರ್ಜಿ ಇದಾಗಿದೆ. ಮೊದಲ ಪತ್ನಿ ಅನಿತಾ ಬದುಕಿರುವಾಗಲೇ, ಚಿತ್ರನಟಿ ರಾಧಿಕಾರನ್ನು ಇವರು ವಿವಾಹವಾಗಿದ್ದಾರೆ ಎನ್ನುವುದು ಅವರ ಆರೋಪ.

ಹಿಂದು ವಿವಾಹ ಕಾಯ್ದೆಯನ್ನು ಉಲ್ಲಂಘಿಸಿ ಇವರು ಎರಡನೇ ಮದುವೆ ಆಗಿರುವ ಹಿನ್ನೆಲೆಯಲ್ಲಿ ಸಂಸದ ಸ್ಥಾನದಿಂದ ಅವರನ್ನು ವಜಾಗೊಳಿಸಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ಮುಂದೂಡಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.