ಬೆಂಗಳೂರು: ಬೇಸಿಗೆ ಕಾಲ ಈಗಾಗಲೇ ಆರಂಭವಾಗಿದ್ದು, ಕುಡಿಯುವ ನೀರಿಗಾಗಿ ರಾಜಧಾನಿಯ ಜನತೆ ಪರದಾಡುತ್ತಿದ್ದಾರೆ. ಆದರೆ ಈ ಸಮಸ್ಯೆ ನಿವಾರಣೆಗೆ ಪಾಲಿಕೆ ಈವರೆಗೆ ಕ್ರಿಯಾ ಯೋಜನೆಯನ್ನೇ ರೂಪಿಸದಿರುವುದು ಶುಕ್ರವಾರ ನಡೆದ ಸಭೆಯಲ್ಲಿ ಬಹಿರಂಗವಾಯಿತು.
ವಿಷಯ ಸಂಬಂಧಿ ಸಭೆಯಲ್ಲಿ ಕೆಲ ಸದಸ್ಯರು ನೀರಿನ ಅಭಾವ ಕುರಿತು ಅಳಲು ತೋಡಿಕೊಂಡರು. ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ‘ನಗರದಲ್ಲಿ ನೀರಿನ ಅಭಾವ ತೀವ್ರವಾಗಿದೆ. ಕೆಲವೆಡೆ ಕೊಳವೆ ಬಾವಿಗಳು ಬತ್ತಿ ಹೋಗುತ್ತಿದ್ದು, ಆ ಭಾಗದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ನೀರಿನ ಸಮಸ್ಯೆ ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಸಿದ್ದಯ್ಯ, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 1,012 ಕೊಳವೆ ಬಾವಿಗಳನ್ನು (ಬೋರ್‌ವೆಲ್) ಕೊರೆಸಲು ನಿರ್ಧರಿಸಲಾಗಿದ್ದು, ಈವರೆಗೆ 952 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಪಾಲಿಕೆ ವತಿಯಿಂದ 468 ಹಾಗೂ ಜಲಮಂಡಳಿ ವತಿಯಿಂದ 484 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. 899 ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ. ಉಳಿದವುಗಳನ್ನು ಶೀಘ್ರವಾಗಿ ಕೊರೆಸಲಾಗುವುದು’ ಎಂದರು.
‘ನೀರಿನ ಸಮಸ್ಯೆ ನಿವಾರಣೆಗೆ ಕೊಳವೆ ಬಾವಿ ಕೊರೆಸುವುದು ಹಾಗೂ ಬಾವಿಗಳು ಬತ್ತಿ ಹೋಗಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಆ ಬಗ್ಗೆ ಸದಸ್ಯರು ಇದೇ 25ರೊಳಗೆ ಮಾಹಿತಿ ನೀಡಿದರೆ ಅಧಿಕಾರಿಗಳು ಕ್ರಿಯಾ ಯೋಜನೆ ರೂಪಿಸುವರು. ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಬಳಿಕ ಜೆಡಿಎಸ್‌ನ ಹನುಮಂತೇಗೌಡ ಮತ್ತಿತರರು ನೀರಿನ ಸಮಸ್ಯೆ ಕುರಿತು ಮಾತನಾಡಿದರು. ಬಿಜೆಪಿಯ ಬಿ.ಆರ್. ನಂಜುಂಡಪ್ಪ ಮಾತನಾಡಿ, ‘ಒಂದು ಬೋರ್‌ವೆಲ್ ಕೊರೆದರೆ ಹತ್ತಾರು ಬೋರ್‌ವೆಲ್‌ಗಳು ಬತ್ತಿ ಹೋಗುತ್ತವೆ. ಅಲ್ಲದೇ ಖಾಸಗಿ ಟ್ಯಾಂಕರ್‌ಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು’ ಎಂದರು.
ಬಿಜೆಪಿ ಧರಣಿ; ಕಾಂಗ್ರೆಸ್ ಸಭಾತ್ಯಾಗ: ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಎಂ.ನಾಗರಾಜ್ ಅವರು ಮುಖ್ಯಮಂತ್ರಿಗಳ ವಿರುದ್ಧ ಮಾಡಿದ ಆರೋಪಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರು ಧರಣಿಗೆ ಮುಂದಾದಾಗ ಮೇಯರ್ ಸಭೆಯನ್ನು ಕೆಲ ಕಾಲ ಮುಂದೂಡಿದರು.
ಕಾಂಗ್ರೆಸ್ ಸದಸ್ಯ ಗುಣಶೇಖರ್ ಮಾತನಾಡಿ, ‘ಕೆಎಂಸಿ ಕಾಯ್ದೆ ಅನ್ವಯ ಫೆಬ್ರುವರಿ 1ರಂದು ಬಜೆಟ್ ಕರಡು ಪ್ರತಿ ಮಂಡನೆಯಾಗಬೇಕು. ಹಣಕಾಸು ವರ್ಷ ಪೂರ್ಣಗೊಳ್ಳುವ ಮೂರು ವಾರಕ್ಕೆ ಮೊದಲೇ ಬಜೆಟ್ ಮಂಡನೆಯಾಗಬೇಕು ಎಂಬ ನಿಯಮವಿದೆ. ಆದರೆ ಬಿಜೆಪಿ ಆಡಳಿತ ಕೆಎಂಸಿ ಕಾಯ್ದೆಯನ್ನು ಉಲ್ಲಂಘಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಹಾಗೆಯೇ ಪಾಲಿಕೆ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ದನಿಗೂಡಿಸಿದ ಎಂ. ನಾಗರಾಜ್, ‘ಮುಖ್ಯಮಂತ್ರಿಗಳು ಪಾಲಿಕೆ ಸಭೆಗೆ ಆಗಮಿಸಿ ವಿಶೇಷ ಅನುದಾನ ಪ್ರಕಟಿಸುತ್ತಾರೆ ಎಂದು ಮೇಯರ್ ಹೇಳಿದ್ದರು. ಆದರೆ ಈವರೆಗೆ ಇದು ಸಾಧ್ಯವಾಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಯಡಿಯೂರಪ್ಪನವರೇ ಮನೆಗೆ ಹೋಗುತ್ತಾರೆ. ಹಾಗಾದರೆ ವಿಶೇಷ ಅನುದಾನದ ಕತೆ ಏನು’ ಎಂದು ಲೇವಡಿ ಮಾಡಿದರು.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಮೇಯರ್ ಪೀಠದ ಮುಂಭಾಗಕ್ಕೆ ತೆರಳಿ ಧರಣಿ ನಡೆಸಿದರು. ಗೊಂದಲಮಯ ವಾತಾವರಣ ನಿರ್ಮಾಣವಾದ ಕಾರಣ ಮೇಯರ್ ಸಭೆಯನ್ನು ಕೆಲ ಕಾಲ ಮುಂದೂಡಿದರು. ಬಳಿಕ ಸಭೆ ಆರಂಭವಾದಾಗ ವಿಷಯಗಳ ಮಂಡನೆಗೆ ಮುಂದಾಗಿದ್ದನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಚರ್ಚೆಗೆ ಅವಕಾಶವಿಲ್ಲ: ವಿಷಯ ಮಂಡಿಸಿ ಅನುಮೋದನೆ ಪಡೆದ ಬಳಿಕ ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ಅವರು ಅನುಮೋದನೆಗೊಂಡ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿದರು. ಆದರೆ ಎರಡನೇ ವಿಷಯ ಕುರಿತು ಚರ್ಚೆ ನಡೆಯುವಾಗಲೇ ಮೇಯರ್ ಸಭೆಯನ್ನು ಮುಂದೂಡಿ ಹೊರನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.