ADVERTISEMENT

ಬ್ಯಾಂಕಿಂಗ್ ಪರೀಕ್ಷೆ– ಕನ್ನಡಿಗರಿಗೆ ಅನ್ಯಾಯ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 20:27 IST
Last Updated 10 ಅಕ್ಟೋಬರ್ 2017, 20:27 IST

ಬೆಂಗಳೂರು: ‘ಬ್ಯಾಂಕಿಂಗ್ ಹಾಗೂ ಸಣ್ಣ ಹಣಕಾಸು ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ’ ಎಂದು ಆರೋಪಿಸಿ ಕರ್ನಾಟಕ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಅಭ್ಯರ್ಥಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ನೇಮಕಾತಿಯಲ್ಲಿ ರಾಜ್ಯದವರಿಗೆ ಹೆಚ್ಚಿನ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

‘ಮುಂಬೈನ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (ಐಬಿಪಿಎಸ್) ನಡೆಸಿದ ಪರೀಕ್ಷೆಯಲ್ಲಿ ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಬೇರೆ ರಾಜ್ಯಗಳಲ್ಲಿ ಶೇ 85ರಿಂದ 100ರಷ್ಟು ಸ್ಥಳೀಯ ಅಭ್ಯರ್ಥಿಗಳು ನೇಮಕಗೊಳ್ಳುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಶೇ 20ರಷ್ಟು ಸ್ಥಳೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಹೊರ ರಾಜ್ಯದವರಿಗೆ ಶೇ 80ರಷ್ಟು ಅವಕಾಶ ಮಾಡಿಕೊಡಲಾಗಿದೆ’ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ADVERTISEMENT

ಪ್ರತಿಭಟನಾಕಾರ ಯೋಗೇಶ್, ‘ಐಬಿಪಿಎಸ್ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ರಾಜ್ಯದ ಅಭ್ಯರ್ಥಿಗಳನ್ನು ಮೌಖಿಕ ಪರೀಕ್ಷೆಯಲ್ಲಿ ಉದ್ದೇಶಪೂರ್ವಕವಾಗಿ ಅನುತ್ತೀರ್ಣಗೊಳಿಸಲಾಗಿದೆ. ಈ ಮೂಲಕ ಹೊರ ರಾಜ್ಯದವರಿಗೆ ಅವಕಾಶ ಮಾಡಿಕೊಡಲಾಗಿದೆ’ ಎಂದು ಆರೋಪಿಸಿದರು.

‘2004ರ ನೇಮಕಾತಿ ನಿಯಮಗಳ ಪ್ರಕಾರ ಮತ್ತೆ ಅಧಿಸೂಚನೆಯನ್ನು ಹೊರಡಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.