ADVERTISEMENT

ಭಾರತೀಯ ಸಿನಿಮಾ ಸುವರ್ಣ ಕ್ಷಣಗಳ ಸ್ಮರಣೆ

ಐದನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:53 IST
Last Updated 20 ಡಿಸೆಂಬರ್ 2012, 19:53 IST
ನಗರದಲ್ಲಿ ಗುರುವಾರ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಜಪಾನಿನ ಸಿನಿಮಾ ನಿರ್ದೇಶಕ ಮಾಶಿರೊ ಕೊಬಾಯಾಶಿ,  ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆ ತಾರಾ ಅನುರಾಧ, ನಟಿ ಹರಿಪ್ರಿಯಾ, ನಟ ವಿ.ರವಿಚಂದ್ರನ್, ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಿಲ್ಪಾ ಶೆಟ್ಟರ್, ಹಿರಿಯ ನಿರ್ದೇಶಕ ಕೆ. ವಿಶ್ವನಾಥ್ ಭಾಗವಹಿಸಿದ್ದರು
ನಗರದಲ್ಲಿ ಗುರುವಾರ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಜಪಾನಿನ ಸಿನಿಮಾ ನಿರ್ದೇಶಕ ಮಾಶಿರೊ ಕೊಬಾಯಾಶಿ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆ ತಾರಾ ಅನುರಾಧ, ನಟಿ ಹರಿಪ್ರಿಯಾ, ನಟ ವಿ.ರವಿಚಂದ್ರನ್, ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಿಲ್ಪಾ ಶೆಟ್ಟರ್, ಹಿರಿಯ ನಿರ್ದೇಶಕ ಕೆ. ವಿಶ್ವನಾಥ್ ಭಾಗವಹಿಸಿದ್ದರು   
ಬೆಂಗಳೂರು: ಭಾರತೀಯ ಚಿತ್ರರಂಗದ ನೂರು ವರ್ಷಗಳ ಭವ್ಯ ಚರಿತ್ರೆಯನ್ನು ಮೆಲುಕು ಹಾಕುವುದರೊಂದಿಗೆ ಗುರುವಾರ ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಆರಂಭವಾಯಿತು. 
 
`ರಾಜಾ ಹರಿಶ್ಚಂದ್ರ', `ಆಲಂ ಆರಾ', `ಮುಘಲ್ ಎ ಆಜಂ', `ಪ್ಯಾಸಾ', ಕನ್ನಡದ `ಅಣ್ಣತಂಗಿ', ತೆಲುಗಿನ `ಮಾಯಾಬಜಾರ್' ಚಿತ್ರಗಳ ದೃಶ್ಯಾವಳಿಗಳನ್ನು ಪ್ರದರ್ಶಿಸುವ ಜೊತೆಗೆ ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ರಾಜ್ ಕಪೂರ್, ಸೈಗಲ್, ವಿ.ಕೆ. ಮೂರ್ತಿ ಹಾಗೂ ಗಿರೀಶ್ ಕಾಸರವಳ್ಳಿ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು.
 
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, `ಚಿತ್ರರಂಗದ ಸಮಗ್ರ ವಿಕಾಸಕ್ಕೆ ಶ್ರಮಿಸುತ್ತಿರುವ ಸರ್ಕಾರ, ಚಿತ್ರೋತ್ಸವಗಳಿಗೆ ಅಗತ್ಯ ಉತ್ತೇಜನ ನೀಡಲು ಬದ್ಧವಾಗಿದೆ' ಎಂದು  ತಿಳಿಸಿದರು.
 
 `ಚಲನಚಿತ್ರ ಸಂಸ್ಕೃತಿಯನ್ನು ಬೆಳೆಸಲು ಹಾಗೂ ಜಾಗತಿಕ ಮಟ್ಟದಲ್ಲಿ ಸಿನಿಮಾವನ್ನು ಪ್ರಚುರಪಡಿಸಲು ಇಂತಹ ಉತ್ಸವಗಳು ಶ್ರಮಿಸುತ್ತವೆ. ಭಾರತೀಯ ಚಿತ್ರರಂಗ ಸುವರ್ಣ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಚಿತ್ರೋತ್ಸವಕ್ಕೆ ಹೊಸ ಅರ್ಥ ಬಂದಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸರ್ಕಾರ ಚಲನಚಿತ್ರರಂಗವನ್ನು ಬಲಪಡಿಸಲು ಅಗತ್ಯ ನೆರವು ನೀಡಿದೆ. ಮುಂದೆಯೂ ಈ ಬಗೆಯ ಸಹಕಾರ ಮುಂದುವರಿಯಲಿದೆ' ಎಂದರು. 
 
ಇದಕ್ಕೂ ಮುನ್ನ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ. ವಿಜಯಕುಮಾರ್, `ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪೈರಸಿ ತಡೆಯುವ ಉದ್ದೇಶದಿಂದ ಗೂಂಡಾ ಕಾಯ್ದೆ ಜಾರಿಗೆ ತರಲು ಶ್ರಮಿಸಿದ್ದರು. ಇನ್ನಾದರೂ ಮುಖ್ಯಮಂತ್ರಿಗಳು ಅದನ್ನು ಜಾರಿಗೊಳಿಸಬೇಕು. 75 ಚಿತ್ರಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ನೂರು ಚಿತ್ರಗಳಿಗೆ ಹೆಚ್ಚಿಸಲು ಬಜೆಟ್‌ನಲ್ಲಿ ಹಣ ಮೀಸಲಿಡಬೇಕು. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಸ್ಮಾರಕ ಭವನ ಕಟ್ಟಲು ಮುಂದಾಗಬೇಕು' ಎಂದು ಮನವಿ ಮಾಡಿದರು. 
 
ಉತ್ಸವದ ಕಲಾತ್ಮಕ ನಿರ್ದೇಶಕ ಎಚ್. ಎನ್. ನರಹರಿ ರಾವ್, `ಚಿತ್ರೋತ್ಸವಗಳ ಆಯೋಜನೆಗೆ ಕನಿಷ್ಠ ಆರು ತಿಂಗಳ ಕಾಲಾವಕಾಶ ಅಗತ್ಯವಿದೆ. ಮೂರು ತಿಂಗಳಲ್ಲಿ ಸುಮಾರು 160 ಸಿನಿಮಾಗಳನ್ನು ಸಂಗ್ರಹಿಸಿ ಪ್ರದರ್ಶಿಸುವುದು ಸುಲಭದ ಮಾತಲ್ಲ. ಚಿತ್ರೋತ್ಸವಗಳ ಆಯೋಜನೆಗೆ ಶಾಶ್ವತ ನಿರ್ದೇಶನಾಲಯ ಇಲ್ಲದೇ ಇರುವುದರಿಂದ ಈ ರೀತಿ ತೊಂದರೆಗಳಾಗುತ್ತಿವೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ' ಎಂದು ಹೇಳಿದರು.
 
ನಟ ವಿ. ರವಿಚಂದ್ರನ್, `ಅದ್ಭುತ ಹಾಗೂ ಕನಸು ಎಂಬ ಎರಡೇ ಪದಗಳ ಮೂಲಕ ಸಿನಿಮಾದ ಅರ್ಥ ಹೇಳಬಹುದು. ಯಾವಾಗ ಬೇಕಾದರೂ ಪ್ರಳಯವಾಗುವುದು ಸಿನಿಮಾದಲ್ಲಿ ಮಾತ್ರ. ಕಲಾವಿದರು ಬಿದ್ದರೂ ಸಿನಿಮಾ ಮೇಲೆತ್ತುತ್ತದೆ ಎಂಬ ನಂಬಿಕೆ ನನ್ನದು' ಎಂದು ಅಭಿಪ್ರಾಯಪಟ್ಟರು.
 
ತೆಲುಗು ಚಿತ್ರರಂಗದ ಹಿರಿಯ ನಿರ್ದೇಶಕ ಕೆ. ವಿಶ್ವನಾಥ್ ಅವರು ವೇದಿಕೆ ಮೇಲೇರುತ್ತಿದ್ದಂತೆ ಸಭಿಕರು ಎದ್ದು ನಿಂತು ಗೌರವ ಸೂಚಿಸಿದರು. 
 
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್ `ನನ್ನ ಶಂಕರಾಭರಣಂ,  ಸ್ವಾತಿಮುತ್ಯಂ, ಸಾಗರ ಸಂಗಮಂನಂಥ ಚಿತ್ರಗಳನ್ನು ಕನ್ನಡನಾಡು ಕೂಡ ಪ್ರೋತ್ಸಾಹಿಸಿದೆ.  ಅಂಥ ಚಿತ್ರಗಳು ಹೊರಬರಲು ಯಾವುದೋ ಮಾನವಾತೀತ ಶಕ್ತಿ ಕಾರಣ ಅನ್ನಿಸುತ್ತಿದೆ. ಹೊಸ ಹೊಸ ತಂತ್ರಜ್ಞಾನಗಳು ಚಿತ್ರರಂಗಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ನಾನಿನ್ನೂ ಶಿಶುವಿಹಾರದ ವಿದ್ಯಾರ್ಥಿ ಎಂಬ ಭಾವನೆ ಮೂಡುತ್ತಿದೆ' ಎಂದರು.
 
ಜಪಾನಿ ಚಿತ್ರಗಳ ನಿರ್ದೇಶಕ ಮಾಸಾಹಿರೋ ಕೊಬಯಾಷಿ, `ಇನ್ನೂ ಬಾಲ್ಯಾವಸ್ಥೆಯಲ್ಲಿರುವ ಬೆಂಗಳೂರು ಚಿತ್ರೋತ್ಸವ ಯುವ ಸ್ವಯಂ ಸೇವಕರನ್ನು ಒಳಗೊಂಡು ಬೆಳೆಯಬೇಕಿದೆ' ಎಂದು ಅಭಿಪ್ರಾಯಪಟ್ಟರು.
 
ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ಪ್ರಕಟಿಸಿರುವ `ಕನ್ನಡ ಸಿನಿಮಾ ಬೆಳ್ಳಿ ಬಿಂಬ' ಪುಸ್ತಕ ಹಾಗೂ ನಿರ್ದೇಶಕಿ ಮಾಯಾರಾವ್ ಅವರ `ಕನ್ನಡ ಜೀವಸ್ವರ' ಡಿವಿಡಿಗಳನ್ನು ಬಿಡುಗಡೆ ಮಾಡಲಾಯಿತು. 
 
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನೂರಾಧ ಸ್ವಾಗತಿಸಿದರು. ಸಂಘಟನಾ ಸಮಿತಿ ಅಧ್ಯಕ್ಷರೂ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಿ. ಬಸವರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೇಯರ್ ಡಿ. ವೆಂಕಟೇಶಮೂರ್ತಿ, ಶಾಸಕ ದಿನೇಶ್ ಗುಂಡೂರಾವ್, ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷ ಎ.ಆರ್. ರಾಜು, ಚಲನಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.