ADVERTISEMENT

ಭಿನ್ನ ಕಾಲಘಟ್ಟದಲ್ಲಿ ವಿಭಿನ್ನ ಮೌಲ್ಯ ಪಡೆಯುವ ಸಿನಿಮಾ

ಚಲನಚಿತ್ರಗಳ ಮೂಲಪ್ರತಿ ಕಣ್ಮರೆ: ಶಿವೇಂದ್ರ ಸಿಂಗ್‌ ಡುಂಗರ್‌ಪುರ್‌ ಕಳವಳ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 19:30 IST
Last Updated 6 ನವೆಂಬರ್ 2017, 19:30 IST
ಭಿನ್ನ ಕಾಲಘಟ್ಟದಲ್ಲಿ ವಿಭಿನ್ನ ಮೌಲ್ಯ ಪಡೆಯುವ ಸಿನಿಮಾ
ಭಿನ್ನ ಕಾಲಘಟ್ಟದಲ್ಲಿ ವಿಭಿನ್ನ ಮೌಲ್ಯ ಪಡೆಯುವ ಸಿನಿಮಾ   

ಬೆಂಗಳೂರು: ‘ಸಿನಿಮಾ ಒಂದು ಕಾಲದ ಮೌಲ್ಯಗಳನ್ನು ದಾಖಲಿಸುತ್ತದೆ. ಅದಕ್ಕೆ ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಮೌಲ್ಯಗಳು ಪ್ರಾಪ್ತವಾಗುತ್ತವೆ. ಹಾಗಾಗಿ ಅವುಗಳ ಸಂರಕ್ಷಣೆಗೆ ಮಹತ್ವ ನೀಡಬೇಕು’ ಎಂದು ಫಿಲಂ ಹೆರಿಟೇಜ್‌ ಫೌಂಡೇಷನ್‌ ಸಂಸ್ಥಾಪಕ ಶಿವೇಂದ್ರ ಸಿಂಗ್‌ ಡುಂಗರ್‌ಪುರ್ ಅಭಿಪ್ರಾಯಪಟ್ಟರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಆಶ್ರಯದಲ್ಲಿ ಸೋಮವಾರ ಇಲ್ಲಿ ಏರ್ಪಡಿಸಿದ್ದ ‘ಕನ್ನಡ ಚಲನಚಿತ್ರ ‍ಪರಂಪರೆಯ ಸಂರಕ್ಷಣೆ ಮತ್ತು ಸಂಗ್ರಹ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಸಿನಿಮಾ ಒಂದು ಕಾಲಘಟ್ಟದ ವರ್ಣತಂತು (ಡಿಎನ್‌ಎ) ಇದ್ದಂತೆ. ನಾವು ಎಲ್ಲಿಂದ ಬಂದೆವು ಎಂಬುದನ್ನು ಅದು ತಿಳಿಸುತ್ತದೆ. ಅದನ್ನು ಅರ್ಥ ಮಾಡಿಕೊಂಡರೆ ಮುಂದೆ ಸಾಗಬೇಕಾದ ದಾರಿಯ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಅವರು ಹೇಳಿದರು.

ADVERTISEMENT

ಸೆಲ್ಯುಲಾಲ್ಡ್‌ ಸಿನಿಮಾಗಳ ಅನೇಕ ಮೂಲ ನೆಗೆಟಿವ್‌ಗಳು ಕಣ್ಮರೆ ಆಗಿರುವ ಕುರಿತು ಅವರು ಕಳವಳ ವ್ಯಕ್ತಪಡಿಸಿದ ಅವರು, ‘ಹಿಂದಿನವರು ಭಾರತೀಯರು ಸಿನಿಮಾವನ್ನು ಸಾಮೂಹಿಕ ಮನರಂಜನೆಯ ಮಾಧ್ಯಮವನ್ನಾಗಿ ನೋಡಿದರು. ಅದನ್ನು ಕಲೆ ಎಂದು ಪರಿಗಣಿಸಲಿಲ್ಲ. ಅನೇಕ ಚಲನಚಿತ್ರಗಳ ಮೂಲಪ್ರತಿಗಳು ನಾಶವಾಗುವುದಕ್ಕೆ ಈ ಮನೋಭಾವವೇ ಕಾರಣ’ ಎಂದರು.

‘ಭಾರತೀಯ ಚಿತ್ರರಂಗದ ಚಟುವಟಿಕೆ ಕರಾವಳಿಯ ನಗರಗಳಾದ ಮುಂಬೈ, ಚೆನ್ನೈ, ಕೊಲ್ಕತ್ತಗಳಲ್ಲಿ ಕೇಂದ್ರೀಕೃತವಾಗಿತ್ತು. ಇಲ್ಲಿ ತೇವಾಂಶ ಜಾಸ್ತಿ. ಹಾಗಾಗಿ ಮೂಲಪ್ರತಿಗಳನ್ನು ಸಂರಕ್ಷಿಸುವುದು ಸವಾಲಿನಕೆಲಸ. ಅದಕ್ಕೆ ಪೂರಕ ವ್ಯವಸ್ಥೆಯೂ ನಮ್ಮಲ್ಲಿಲ್ಲ’ ಎಂದು ತಿಳಿಸಿದರು.

‘ಸೆಲ್ಯುಲಾಯ್ಡ್‌ ನೆಗೆಟಿವ್‌ಗಳನ್ನು ಸ್ಕ್ಯಾನ್‌ ಮಾಡಿ ಡಿಜಿಟಲ್‌ ರೂಪದಲ್ಲಿ ಸಂಗ್ರಹ ಮಾಡಿದ ಮಾತ್ರಕ್ಕೆ ಸಿನಿಮಾ ರಕ್ಷಣೆ ಆಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಸೆಲ್ಯುಲಾಯ್ಡ್‌ ಫಿಲ್ಮ್‌ನ ಮೂಲಪ್ರತಿಯನ್ನೂ ಕಾಪಾಡಬೇಕು. ಅದಕ್ಕೆ ಅದರದ್ದೇ ಆದ ಮೌಲ್ಯವಿದೆ’ ಎಂದರು.

ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ‘ಸಾಬೂನನ್ನು ಬಳಸಿದ ಬಳಿಕ ಅದರ ಕವಚವನ್ನು ಬಿಸಾಡುವವರು ನಾವು. ಅಂತೆಯೇ ಒಂದು ಸಿನಿಮಾ ಲಾಭ ತರುವುದನ್ನು ನಿಲ್ಲಿಸಿದ ಬಳಿಕ ನಿರ್ಮಾಪಕರು ಅದನ್ನು ರಕ್ಷಿಸಿಡುವ ಕಾಳಜಿ ವಹಿಸುವುದಿಲ್ಲ. ಕನಿಷ್ಠ ಪಕ್ಷ ಸ್ಟುಡಿಯೊಗಳಾದರೂ ಉತ್ತಮ ಚಲನಚಿತ್ರಗಳನ್ನು ಉಳಿಸಿಕೊಳ್ಳಬಹುದಾಗಿತ್ತು’ ಎಂದರು.

‘ನಾನು ನಿರ್ದೇಶಿಸಿರುವ ಎಲ್ಲ ಸಿನಿಮಾಗಳ ಮೂಲಪ್ರತಿಯನ್ನು ನಿರ್ಮಾಪಕರಿಂದ ತರಿಸಿಕೊಂಡು ಅದನ್ನು ಫಿಲಂ ಹೆರಿಟೇಜ್‌ ಫೌಂಡೇಷನ್‌ಗೆ ನೀಡುತ್ತೇನೆ’ ಎಂದು ಅವರು ಹೇಳಿದರು..ಅಕಾಡೆಮಿ ಅಧ್ಯಕ್ಷ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು, ‘ಸಿನಿಮಾ ಸಂರಕ್ಷಣೆಗೆ ಸರ್ಕಾರ ಈ ಹಿಂದೆ ₹2 ಕೋಟಿ ಅನುದಾನ ನೀಡಿತ್ತು. ಆ ಹಣವನ್ನು ಬಳಸಿಕೊಳ್ಳಲಿಲ್ಲ. ಉತ್ತಮ ಕನ್ನಡ ಸಿನಿಮಾಗಳ ಸಂರಕ್ಷಣೆಗೆ ರೂಪರೇಷೆ ಸಿದ್ಧಪಡಿಸಿ ಮತ್ತೆ ಪ್ರಸ್ತಾವ ಸಲ್ಲಿಸುತ್ತೇವೆ’ ಎಂದರು.

***

"ಒಂದು ಸಿನಿಮಾದ ಮೂಲಪ್ರತಿಯನ್ನು ಕಳೆದುಕೊಳ್ಳುವುದು ತಾಯಿಯನ್ನು ಕಳೆದುಕೊಂಡಂತೆ"
ಶಿವೇಂದ್ರಸಿಂಗ್‌ ಡುಂಗರ್‌ಪುರ್‌, ಫಿಲಂ ಹೆರಿಟೇಜ್‌ ಫೌಂಡೇಷನ್‌ ಸಂಸ್ಥಾಪಕ ನಿರ್ದೇಶಕ

***

ಸಂರಕ್ಷಣೆಯ ಮಹತ್ವ ತಿಳಿಯದ ಕಾರಣ ಸಿನಿಮಾಗಳ ನೈಟ್ರೇಟ್‌ ಫಿಲ್ಮ್‌ಗಳು ಗುಜರಿಗೆ ಸೇರಿವೆ. ಅವು ಬಳೆಗಳಾಗಿ, ಚಪ್ಪಲಿಗಳಾಗಿ ಮಾರ್ಪಟ್ಟಿವೆ
ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

***

1,700 - ಮೂಕಿಚಿತ್ರಗಳು ಭಾರತದಲ್ಲಿ ನಿರ್ಮಾಣ
99% - ಮೂಕಿಚಿತ್ರಗಳು ಈಗ ಲಭ್ಯ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.