ADVERTISEMENT

ಭೂ ಒತ್ತುವರಿ: ಮರು ಸಮೀಕ್ಷೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 19:59 IST
Last Updated 11 ಜುಲೈ 2013, 19:59 IST

ಬೆಂಗಳೂರು: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ 60.23 ಎಕರೆ ಮೀಸಲು ಅರಣ್ಯ ಭೂಮಿ ಕುರಿತು ಮರು ಸಮೀಕ್ಷೆ ನಡೆಸುವಂತೆ ಹೈಕೋರ್ಟ್ ಗುರುವಾರ ಆದೇಶಿಸಿದೆ.

ರಮೇಶ್ ಕುಮಾರ್ ಅವರು ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ನಡೆಸಿದರು. `ಸಮೀಕ್ಷೆಯನ್ನು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆಸಬೇಕು ಎಂಬ ನಿರ್ದೇಶನ ಇತ್ತು. ಆದರೆ ಅದರಂತೆ ಸಮೀಕ್ಷೆ ನಡೆದಿಲ್ಲ' ಎಂದು ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಸಮೀಕ್ಷೆಯ ಸಂದರ್ಭದಲ್ಲಿ ಹಾಜರಿರಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿತ್ತು. ಆದರೆ ಅವರು ಬರಲಿಲ್ಲ ಎಂದು ಸರ್ಕಾರದ ಪರ ವಕೀಲರು ಸ್ಪಷ್ಟನೆ ನೀಡಿದರು. ಇದನ್ನು ದಾಖಲು ಮಾಡಿಕೊಂಡ ಪೀಠ, `ಜಿಲ್ಲಾಧಿಕಾರಿ, ಜಮೀನು ದಾಖಲೆಗಳ ಅಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಮ್ಮುಖದಲ್ಲಿ ಸಮೀಕ್ಷೆ ನಡೆಸಿ' ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತು.

ರಮೇಶ್ ಕುಮಾರ್ ಅವರು ಶ್ರೀನಿವಾಸಪುರ ತಾಲ್ಲೂಕಿನ ಜಿನಗುಂಟೆ ಎಂಬಲ್ಲಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಆ ಜಮೀನನ್ನು ವಶಕ್ಕೆ ತೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ತಕರಾರು ಅರ್ಜಿ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.