ADVERTISEMENT

ಭ್ರಷ್ಟಾಚಾರ, ಜಾತೀಯತೆ ವಿರುದ್ಧ ಸಮರಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

 ಬೆಂಗಳೂರು: `ಭ್ರಷ್ಟಾಚಾರ, ಅಪರಾಧ ಚಟುವಟಿಕೆ ಹಾಗೂ ಜಾತಿ ದೇಶದ ಅಭಿವೃದ್ಧಿಗೆ ಮಾರಕ. ಯುವಜನತೆ ಇವುಗಳ ವಿರುದ್ಧ ಸಮರ ಸಾರಬೇಕು~ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಸಲಹೆ ನೀಡಿದರು.

ಸತ್ಯಸಾಯಿ ಸೇವಾ ಸಂಘಟನೆಯ ರಾಜ್ಯ ಘಟಕ, ಸತ್ಯಸಾಯಿ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ಬೃಂದಾವನ ಕ್ಯಾಂಪಸ್ ಆಶ್ರಯದಲ್ಲಿ ನಗರದ ವೈಟ್‌ಫೀಲ್ಡ್‌ನ ಸತ್ಯಸಾಯಿ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ಸಭಾಂಗಣದಲ್ಲಿ ಸೋಮವಾರ ನಡೆದ `ಭಾರತೀಯ ಸಂಸ್ಕೃತಿ ಮತ್ತು ಅಧ್ಯಾತ್ಮ~ ಕುರಿತ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

`ಯುವಜನತೆ ದೇಶದ ಶಕ್ತಿ. ಯುವಶಕ್ತಿಯಿಂದ ಮಾತ್ರ ಪರಿವರ್ತನೆ ಸಾಧ್ಯ. ಯುವಜನರು ಉತ್ತಮ ನಡತೆ, ಸ್ಪರ್ಧಾತ್ಮಕ ಮನೋಭಾವ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯ ಹಾಗೂ ಅವರು ಸಕಾರಾತ್ಮಕ ಚಿಂತನೆ ಅಳವಡಿಸಿಕೊಳ್ಳಬೇಕು~ ಎಂದು ಅವರು ಸಲಹೆ ನೀಡಿದರು. 

 `ಸಮಯ ಎಲ್ಲರಿಗೂ ಎಲ್ಲ ಕಾಲದಲ್ಲಿಯೂ ಸಿಗಬಹುದಾದ ಮೂಲದ್ರವ್ಯ. ಇದನ್ನು ಸೂಕ್ತವಾಗಿ ಬಳಸಿಕೊಳ್ಳುವುದನ್ನು ಅರಿಯಬೇಕು. ಆಯವ್ಯಯ ಮಂಡಿಸುವಂತೆ ಸಮಯದ ವೆಚ್ಚದ ಕುರಿತು ಮುಂದಾಲೋಚನೆ ಮಾಡಬೇಕು. ಸರಿಯಾಗಿ ಸಮಯ ಕಳೆದಿದ್ದೇವೆಯೇ? ಎಂಬುದಾಗಿ ಸಂಜೆ ಪರಿಶೋಧನೆ ಮಾಡಬೇಕು~ ಎಂದು ಅವರು ತಿಳಿಸಿದರು.

`ಸಮಾಜದಲ್ಲಿ ದ್ವೇಷದ ಬದುಕು ಬೇಡ, ಪ್ರೀತಿಯ ಬದುಕು ಅಗತ್ಯ. ಪರರ ಸ್ವತ್ತುಗಳನ್ನು ಕಿತ್ತುಕೊಳ್ಳುವ ಆಕಾಂಕ್ಷೆ ಬೇಡ. ಸೇವಾ ಮನೋಭಾವ ಅತೀ ಮುಖ್ಯ. ಸಹನೆಯಿಂದ ವರ್ತಿಸಿ~ ಎಂದು ಯುವಸಮೂಹಕ್ಕೆ ಅವರು ಕಿವಿಮಾತು ಹೇಳಿದರು. 

ಅಖಿಲ ಭಾರತ ಸತ್ಯಸಾಯಿ ಸೇವಾ ಸಂಸ್ಥೆಯ ಅಧ್ಯಕ್ಷ ವಿ. ಶ್ರೀನಿವಾಸನ್ ಮಾತನಾಡಿ, `ಆಡಂಬರದ ಬದುಕು ಬೇಡ. ದುರಾಸೆ ಬಿಡಬೇಕು. ವಸ್ತುಗಳ ಮಿತ ಬಳಕೆ ಮಾಡಬೇಕು. ಭಗವಾನ್ ಸತ್ಯಸಾಯಿ ಬಾಬಾ ಅವರ ಆಶಯವೂ ಅದೇ ಆಗಿತ್ತು~ ಎಂದರು.

`ಮಾನವೀಯ ಮೌಲ್ಯಗಳು, ಏಕತೆ ಹಾಗೂ ಆಧ್ಯಾತ್ಮಿಕ ವಿಚಾರಗಳ ಒಟ್ಟು ಸಾರವೇ ಭಾರತೀಯ ಸಂಸ್ಕೃತಿ. ಈ ವೈಶಿಷ್ಟ್ಯಗಳಿಂದಲೇ ಸಾವಿರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿ ಉಳಿದುಕೊಂಡಿದೆ. ಭವಿಷ್ಯದಲ್ಲೂ ದೇಶದ ಶ್ರೇಷ್ಠ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಜವಾಬ್ದಾರಿ ಯುವಜನತೆಯ ಮೇಲಿದೆ~ ಎಂದರು.

ಸತ್ಯಸಾಯಿ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಧರ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, `ಭಾರತದ ಅಧ್ಯಾತ್ಮ ಪರಂಪರೆ ವಿಶ್ವ ಸಂಸ್ಕೃತಿಗೆ ಶ್ರೇಷ್ಠ ಕೊಡುಗೆ. ಮುಂದಿನ ದಿನಗಳಲ್ಲೂ ಈ ಪರಂಪರೆ ಉಳಿಸಿ ಬೆಳೆಸಲು ಯುವಜನರನ್ನು ಶಿಕ್ಷಿತರನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ~ ಎಂದರು.

ಕರ್ನಾಟಕ ಸತ್ಯಸಾಯಿ ಟ್ರಸ್ಟ್ ಅಧ್ಯಕ್ಷ ಗಂಗಾಧರ ಶೆಟ್ಟಿ, ಸತ್ಯಸಾಯಿ ಸೇವಾ ಸಂಸ್ಥೆ ಅಧ್ಯಕ್ಷ ನಾಗೇಶ್ ಜಿ. ದಾಕಪ್ಪ, ಬೃಂದಾವನ ಕ್ಯಾಂಪಸ್ ನಿರ್ದೇಶಕ ಸಂಜಯ್ ಸಹಾನಿ ಉಪಸ್ಥಿತರಿದ್ದರು. ರಾಷ್ಟ್ರೀಯ ವಿದ್ಯಾಲಯ ಇನ್‌ಸ್ಟಿಟ್ಯೂಟ್ ಆಫ್ ಸಂಸ್ಕೃತ ಸ್ಟಡೀಸ್‌ನ ಎಸ್. ರಂಗನಾಥ್, ಪ್ರೊ. ಪ್ರೇಮಾ ಪಾಂಡುರಂಗ, ರುಚಿರ್ ದೇಸಾಯಿ ಉಪನ್ಯಾಸ ನೀಡಿದರು. ಇದೇ 20ರ ವರೆಗೆ ಶಿಬಿರ ಮುಂದುವರಿಯಲಿದ್ದು, ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳ 460 ಹುಡುಗರು ಹಾಗೂ 440 ಹುಡುಗಿಯರು ಭಾಗವಹಿಸುತ್ತಿದ್ದಾರೆ. ಈ ಸಂದರ್ಭ ಪ್ರಾಣಾಯಾಮ, ಯೋಗ, ಭಜನೆ, ಸರ್ವಧರ್ಮ ಪ್ರಾರ್ಥನೆಗಳು ನಡೆದವು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.