ADVERTISEMENT

‘ಮಂಡ್ಯ ಸಮಾವೇಶದಲ್ಲಿ ನಿರ್ಲಕ್ಷ್ಯ ‌ಸಚಿವ ಎಂ. ಕೃಷ್ಣಪ್ಪ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST

ಬೆಂಗಳೂರು: ‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ರಾಜ್ಯ ಭೇಟಿ ಸಂದರ್ಭದಲ್ಲಿ ನನ್ನನ್ನು ಮೂಲೆಗುಂಪು ಮಾಡಿದರು’ ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ಅಸಮಾಧಾನ
ವ್ಯಕ್ತಪಡಿಸಿದ್ದಾರೆ.

‘ಮಾರ್ಚ್‌ 24 ರಂದು ರಾಹುಲ್‌ ಮಂಡ್ಯಕ್ಕೆ ಭೇಟಿ ನೀಡಿದಾಗ, ಜಿಲ್ಲಾ ಉಸ್ತುವಾರಿ ಸಚಿವನಾದ ನನಗೆ ರಾಹುಲ್‌ ಜತೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಲಿಲ್ಲ. ವೇದಿಕೆಯಲ್ಲಿ ಕುಳಿತುಕೊಳ್ಳುವವರ ಪಟ್ಟಿಯಲ್ಲೂ ಹೆಸರನ್ನು ಸೇರಿಸಿರಲಿಲ್ಲ’ ಎಂದು ಕೃಷ್ಣಪ್ಪ ತಮ್ಮ ಆಪ್ತರ ಬಳಿ ಅಲವತ್ತುಕೊಂಡಿದ್ದಾರೆ.

‘ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮಂಡ್ಯ ಜಿಲ್ಲೆಯ ಸಮಾವೇಶದ ಉಸ್ತುವಾರಿ ವಹಿಸಿದ್ದರು. ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯಲ್ಲಿ ತಮ್ಮನ್ನು ಪ್ರಬಲ ಒಕ್ಕಲಿಗ ನಾಯಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದಾರೆ’ ಎಂಬುದು ಕೃಷ್ಣಪ್ಪ ಅವರ ಆಕ್ಷೇಪ ಎನ್ನಲಾಗಿದೆ.

ADVERTISEMENT

‘ನನ್ನ ನೆರವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬರಲಿಲ್ಲ. ಬದಲಿಗೆ ಬೆಂಗಳೂರು– ಮೈಸೂರು ಆರು ಪಥಗಳ ರಸ್ತೆ ಯೋಜನೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಲಹೆ ನೀಡಿದರು’ ಎಂದೂ ಅವರು ಹೇಳಿಕೊಂಡಿದ್ದಾರೆ.

ಮುಖ್ಯಮಂತ್ರಿ, ಕೃಷ್ಣಪ್ಪ ಅವರನ್ನು ಸೋಮವಾರ ಕರೆದು ಮಾತನಾಡಿದರು. ಕಾರ್ಯಕ್ರಮಕ್ಕೆ ಗೈರಾದ ಬಗ್ಗೆಯೂ ವಿವರಣೆ ಕೇಳಿದರು. ಬಿಜೆಪಿಗೆ ಹೋಗುವ ಕುರಿತು ಇರುವ ಊಹಾಪೋಹ ಕುರಿತೂ ವಿಚಾರಿಸಿದರು. ಆದರೆ, ಅವೆಲ್ಲ ಕೇವಲ ವದಂತಿ ಎಂದು ಕೃಷ್ಣಪ್ಪ ಮಾಹಿತಿ ನೀಡಿದ್ದಾರೆ.

ಮಂಡ್ಯದ ಮೂಲದವರಾದ ಕೃಷ್ಣಪ್ಪ, ಬೆಂಗಳೂರಿನ ವಿಜಯನಗರ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.