ADVERTISEMENT

ಮನಪರಿವರ್ತನೆ ಪ್ರಕ್ರಿಯೆಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 8:50 IST
Last Updated 16 ಜನವರಿ 2011, 8:50 IST
ಮನಪರಿವರ್ತನೆ ಪ್ರಕ್ರಿಯೆಗೆ ಹಿನ್ನಡೆ
ಮನಪರಿವರ್ತನೆ ಪ್ರಕ್ರಿಯೆಗೆ ಹಿನ್ನಡೆ   

ಬೆಂಗಳೂರು: ಬಂದಿಖಾನೆಗಳಲ್ಲಿ ಕೈದಿಗಳಲ್ಲಿ ಮಾದಕ ವಸ್ತುಗಳ ಸೇವನೆ ಪ್ರಮಾಣ ಹೆಚ್ಚುತ್ತಿರುವುದರಿಂದ ಅಪರಾಧಿಗಳ ಮನಪರಿವರ್ತನೆ ಪ್ರಕ್ರಿಯೆಗೆ ಹಿನ್ನಡೆ ಆಗುತ್ತಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಶನಿವಾರ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಮಾನಸಿಕ ಆರೋಗ್ಯ ಮತ್ತು ಜೈಲುಗಳಲ್ಲಿ ಬಳಸುವ ಆಹಾರ ಪದಾರ್ಥಗಳಿಂದ ಉಂಟಾಗುವ ಸಮಸ್ಯೆ’ ಕುರಿತ ವಿಭಾಗೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಜೈಲುಗಳಲ್ಲಿ ಮಾದಕ ವಸ್ತುಗಳ ಬಳಕೆಯ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗುತ್ತಿದೆ. ಕೈದಿಗಳು ಹೊರಗಡೆ ಇರುವಾಗ ಬಳಸುವ ಮಾದಕ ವಸ್ತುಗಳ ಪ್ರಮಾಣದ ಎರಡರಿಂದ ಮೂರು ಪಟ್ಟು ಹೆಚ್ಚು ಮಾದಕ ವಸ್ತುಗಳನ್ನು ಜೈಲಿನಲ್ಲಿ ಬಳಸುತ್ತಿರುವುದು ಕಂಡುಬಂದಿದೆ’ ಎಂದು ಹೇಳಿದರು.

ಜೈಲುಗಳಲ್ಲಿ ಇರುವ ಕೈದಿಗಳನ್ನು ಸಂಖ್ಯೆಗಳಿಂದಲೇ ಗುರುತಿಸಲಾಗುತ್ತದೆ. ಪರಿಣಾಮವಾಗಿ ಅವರು ಸ್ವಂತಿಕೆ ಕಳೆದುಕೊಂಡಿರುತ್ತಾರೆ. ಅವರು ಮದ್ಯ, ತಂಬಾಕು, ಅಫೀಮು ಮುಂತಾದ ಮಾದಕ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಕೈದಿಗಳ ಮನ ಪರಿವರ್ತನೆಗೆ ದೊಡ್ಡ ಅಡ್ಡಿಯಾಗುತ್ತದೆ ಎಂದರು.

ಕಾರಾಗೃಹಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯುವುದು ತುರ್ತು ಅಗತ್ಯ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ನ್ಯಾ.ಕೇಹರ್ ಎಚ್ಚರಿಕೆ ನೀಡಿದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಲ್ತಮಸ್ ಕಬೀರ್, ಹೈಕೋರ್ಟ್ ನ್ಯಾಯಮೂರ್ತಿಗಳಾದ ಮಂಜುಳಾ ಚೆಲ್ಲೂರು, ಎನ್.ಕೆ.ಪಾಟೀಲ್, ನಿಮ್ಹಾನ್ಸ್ ನಿರ್ದೇಶಕ ಡಾ.ಪಿ.ಸತೀಶ್ಚಂದ್ರ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ನಿಮ್ಹಾನ್ಸ್‌ನ ಹೊರ ರೋಗಿಗಳ ಸಂಕೀರ್ಣದಲ್ಲಿ ಸ್ಥಾಪಿಸಿರುವ ‘ಉಚಿತ ಕಾನೂನು ಸೇವಾ ಕ್ಲಿನಿಕ್’ ಅನ್ನು ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಉದ್ಘಾಟಿಸಿದರು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.