ADVERTISEMENT

ಮನೆ ನಿರ್ಮಿಸುವವರಿಗೂ ತಪ್ಪದ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST

ಲೇಖನ ಮಾಲೆ - 6

ಬೆಂಗಳೂರು: ರಾಜಧಾನಿಯಲ್ಲಿ ವಾಸದ ಮನೆ ನಿರ್ಮಿಸುವವರಿಗೆ ಬಿಬಿಎಂಪಿ ಅಧಿಕಾರಿಗಳ ಕಿರುಕುಳ ತಪ್ಪಿದ್ದಲ್ಲ. ನಿವೇಶನದಾರರು ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿಗೆ ಪಾಲಿಕೆ ಅಧಿಕಾರಿಗಳಿಗೆ ಇಂತಿಷ್ಟು `ಕಪ್ಪ ಕಾಣಿಕೆ~ ನೀಡಲೇಬೇಕು. ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ಹಣದ ಮೊತ್ತದಲ್ಲಿ ಏರಿಳಿತವಾಗುತ್ತದೆ. ಸಾವಿರದಿಂದ ಲಕ್ಷಾಂತರ ರೂಪಾಯಿ ಕೈ ಬದಲಾಗುತ್ತಾ ಹೋಗುತ್ತದೆ!

ಕಟ್ಟಡ ಉಪವಿಧಿಗಳು ಪಾಲಿಕೆಯ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳ ಪಾಲಿಗೆ `ಹಣ~ ಗಳಿಕೆಯ ಪರಿಣಾಮಕಾರಿ ಅಸ್ತ್ರಗಳೆನಿಸಿವೆ. ನಿಯಮ ಉಲ್ಲಂಘನೆಯಾಗುವುದನ್ನೇ ಇವರು ನಿರೀಕ್ಷಿಸು ತ್ತಾರೆ. ಬಳಿಕ ನಿಯಮ ಉಲ್ಲಂಘನೆಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ಹೇಳಿ ಆತಂಕ ಹುಟ್ಟಿಸಿ, ಲಂಚ ಪಡೆಯುವುದು ನಡೆದೇ ಇದೆ.

ನಗರದಲ್ಲಿ ಕಟ್ಟಡ ನಿರ್ಮಾಣದ ವೇಳೆ ನಿಯಮ ಗಳ ಪಾಲನೆ ಬಗ್ಗೆ ಅಧಿಕಾರಿಗಳು ಸಮರ್ಪಕವಾಗಿ ಮೇಲ್ವಿಚಾರಣೆ ನಡೆಸುತ್ತಿಲ್ಲ. ಪರಿಣಾಮವಾಗಿ ಏನೆಲ್ಲಾ ನಿಯಮ ಉಲ್ಲಂಘಿಸಿದರೂ ಒಂದಿಷ್ಟು ಲಂಚ ನೀಡಿ, ತಪ್ಪಿಸಿಕೊಳ್ಳಬಹುದು ಎಂಬ ನಂಬಿಕೆ ಜನರಲ್ಲಿ ಬಲವಾಗತೊಡಗಿದೆ.

ನಕ್ಷೆ ಮಂಜೂರಾತಿ ಹಾಗೂ ಉಪವಿಧಿಗಳ ಪಾಲನೆಯ ಮೇಲ್ವಿಚಾರಣೆ ಹಂತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ. ನಿಯಮಬದ್ಧವಾಗಿ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದರೂ ನೇರವಾಗಿ ಹಣ ನೀಡುವಂತೆ ಬೇಡಿಕೆಯಿಡುವ ಮಟ್ಟಕ್ಕೆ ಕೆಲ ಅಧಿಕಾರಿಗಳು ತಲುಪಿರುವುದು ಈ ಆರೋಪಕ್ಕೆ ಪುಷ್ಟಿ ನೀಡಿದೆ.

ಉದಾಹರಣೆಗೆ ಹೇಳುವುದಾರೆ ವ್ಯಕ್ತಿಯೊಬ್ಬರು, 30/40 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ವಾಸದ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಭಾವಿಸೋಣ. ಅರ್ಜಿ ಸಲ್ಲಿಸುತ್ತಿದ್ದಂತೆ ಅಧಿಕಾರಿಗಳು ಇಲ್ಲವೇ ಏಜೆಂಟ್‌ಗಳು ನಿವೇಶನದಾರರನ್ನು ಸಂಪರ್ಕಿಸಿ 15 ಸಾವಿರದಿಂದ 20 ಸಾವಿರ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಡುತ್ತಾರೆ.

ಈ ಬಗ್ಗೆ ಪ್ರಶ್ನಿಸಿದರೆ, `ಯಾರು ಕೂಡ ನಿಯಮ ಪ್ರಕಾರ ಕಟ್ಟಡ ನಿರ್ಮಿಸುವುದಿಲ್ಲ. ಹಾಗಾಗಿ ನಕ್ಷೆ ಮಂಜೂರಾತಿಗೆ ಇಂತಿಷ್ಟು ಹಣ ನೀಡಲೇಬೇಕು. ಈ ಹಣ ಕೇವಲ ಒಬ್ಬರಿಗೆ ಸೇರುವುದಿಲ್ಲ. ಬದಲಿಗೆ ಸ್ಥಳೀಯ ಪಾಲಿಕೆ ಸದಸ್ಯರು, ಹಿರಿಯ ಮತ್ತು ಕಿರಿಯ ಎಂಜಿನಿಯರ್‌ಗಳಿಗೂ ಪಾಲು ನೀಡಲಾಗುತ್ತದೆ. ತಕರಾರು ಇಲ್ಲದೇ ತಕ್ಷಣ ಮಂಜೂರಾತಿ ಪಡೆಯಬೇಕಾದರೆ ಹಣ ನೀಡಿ~ ಎಂದು ನೇರವಾಗಿ ಹೇಳುವವರಿದ್ದಾರೆ. ನಕ್ಷೆಯನ್ನು ತಮ್ಮ `ಪರಿಚಿತರ~ ಬಳಿಯೇ ಸಿದ್ಧಪಡಿಸಿದರೆ ಮಂಜೂರಾತಿ ಸುಲಭ ಎಂಬ ಸಲಹೆಯನ್ನು ಅವರು ನೀಡುತ್ತಾರೆ.

ಮಧ್ಯಮ ಮತ್ತು ಕೆಳ ವರ್ಗದ ಜನರು ಬ್ಯಾಂಕ್ ಸಾಲ ಪಡೆಯಲು ನಕ್ಷೆ ಮಂಜೂರಾತಿ ಪತ್ರ ಸಲ್ಲಿಸುವುದು ಅನಿವಾರ್ಯ. ಹಾಗಾಗಿ ನಕ್ಷೆ ಮಂಜೂರಾತಿ ಪಡೆಯಲು ಆತುರ ಪಡುತ್ತಾರೆ. ಈ ಆತುರವನ್ನೇ `ಬಂಡವಾಳ~ ಮಾಡಿಕೊಳ್ಳುವ ಅಧಿಕಾರಿಗಳು ಪಾಲಿಕೆಯಲ್ಲಿದ್ದಾರೆ. ಈ ನಡುವೆ ಪಾಲಿಕೆ ಸದಸ್ಯರು, ಶಾಸಕರ ಶಿಫಾರಸು ಅಥವಾ ಇತರೆ ಪ್ರಭಾವ ತಂದರೆ ಈ ಮೊತ್ತದಲ್ಲಿ ಒಂದಿಷ್ಟು ಇಳಿಕೆಯಾಗುತ್ತದೆ.

ನಕ್ಷೆ ಮಂಜೂರಾತಿ ಪಡೆದು ಕಟ್ಟಡ ನಿರ್ಮಾಣ ಆರಂಭವಾದ ಬಳಿಕ ಅಧಿಕಾರಿಗಳು ಅತ್ತ ಸುಳಿಯುವುದಿಲ್ಲ. ಹಾಗೆಂದು ಅತ್ತ ನಿಗಾ ಇಟ್ಟಿಲ್ಲ ಎಂದರ್ಥವಲ್ಲ. ನಿಯಮ ಉಲ್ಲಂಘನೆ ಮಾಡಿ ನಿರ್ಮಾಣ ಮಾಡುವುದನ್ನೇ ನಿರೀಕ್ಷಿಸುತ್ತಾರೆ. ಒಂದು ಹಂತ ತಲುಪಿದಾಗ ಏಕಾಏಕಿ `ಪ್ರತ್ಯಕ್ಷ~ರಾಗುವ ವರ್ಕ್ ಇನ್‌ಸ್ಪೆಕ್ಟರ್ ನಿಯಮ ಉಲ್ಲಂಘನೆ ಬಗ್ಗೆ ಕಿಡಿ ಕಾರುತ್ತಾ, ನಿರ್ಮಾಣ ಕಾರ್ಯಕ್ಕೆ ದಿಢೀರ್ ತಡೆಯೊಡ್ಡುತ್ತಾರೆ.

ನಿಯಮಗಳ ಬಗ್ಗೆ ಮಾಹಿತಿ ನೀಡದ ಅವರು, ಉಲ್ಲಂಘನೆಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ಹೇಳುತ್ತಾ ಹೋಗುತ್ತಾರೆ. ಶೇ 5ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಉಲ್ಲಂಘನೆಯಾಗಿದ್ದರೆ ಅನಧಿಕೃತ ಭಾಗವನ್ನು ಕೆಡವಿ ಹಾಕಲು ಕಾನೂನಿನಲ್ಲಿ ಅವಕಾಶವಿದೆ ಎಂಬ ಬೆದರಿಕೆ ಒಡ್ಡುವವರಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾಗುವ ಆಸ್ತಿ ಮಾಲೀಕರು ಹಣ ನೀಡಲೇಬೇಕಾದ ಒತ್ತಡಕ್ಕೆ ಸಿಲುಕುತ್ತಾರೆ.

ಏಕೆಂದರೆ ನಿವೇಶನ ಮಾಲೀಕರು ಸಾಲ ಪಡೆದು ಕಟ್ಟಡ ನಿರ್ಮಿಸುತ್ತಿದ್ದರೆ, ನಿರ್ಮಾಣ ಕಾರ್ಯಕ್ಕೆ ತಡೆಯಾದರೆ ಕೊನೆಯ ಕಂತಿನ ಸಾಲ ಅಥವಾ ಬಾಕಿ ಸಾಲದ ಮೊತ್ತವನ್ನು ಬ್ಯಾಂಕ್‌ಗಳು ಬಿಡುಗಡೆ ಮಾಡುವುದಿಲ್ಲ. ಈ ಸಂದರ್ಭದಲ್ಲೂ ಅಧಿಕಾರಿಗಳು ಒತ್ತಡ ತಂತ್ರ ಅನುಸರಿಸುತ್ತಾರೆ. ಹಾಗಾಗಿ ಅನಿವಾರ್ಯವಾಗಿ ಹಣ ನೀಡಬೇಕಾಗುತ್ತದೆ.

ಒಂದೊಮ್ಮೆ ನಿಯಮ ಬದ್ಧವಾಗಿಯೇ ನಕ್ಷೆ ಮಂಜೂರಾತಿ ಪಡೆಯಲು ಮುಂದಾದರೆ ಎಂಜಿನಿಯರ್‌ಗಳು ನೀಡುವ ಕಿರುಕುಳ ಅಷ್ಟಿಷ್ಟಲ್ಲ. ಪ್ರತಿಯೊಂದಕ್ಕೂ ತಗಾದೆ ತೆಗೆಯುವುದು, ಮೇಲಿಂದ ಮೇಲೆ ಸ್ಥಳ ಪರಿಶೀಲಿಸುವುದು, ವಿಳಂಬ ಮಾಡುವುದು, ಇನ್ನೂ ಹಲವು ರೀತಿಯಲ್ಲಿ ತೊಂದರೆ ನೀಡುತ್ತಾರೆ.

ಹಾಗಿದ್ದೂ ಹಣ ನೀಡದಿದ್ದರೆ ನಕ್ಷೆ ಮಂಜೂರು ಮಾಡಬಹುದು. ಆದರೆ ಕಟ್ಟಡದ ಮೇಲೆ ನಿರಂತರವಾಗಿ ನಿಗಾ ವಹಿಸುತ್ತಾರೆ. ಉಲ್ಲಂಘನೆಗೆ ಮುಂದಾದರೆ ಸಮಯ ನೋಡಿ ದುಬಾರಿ ಹಣ ವಸೂಲಿ ಮಾಡುತ್ತಾರೆ. 

ಲಂಚವಿಲ್ಲದೇ ಏನೂ ನಡೆಯದು!

ADVERTISEMENT

`ವಾಸದ ಮನೆಯಿರಲಿ, ವಾಣಿಜ್ಯ ಕಟ್ಟಡವಿರಲಿ ನಕ್ಷೆ ಮಂಜೂರಾತಿಗೆ ಹಣ ನೀಡಲೇಬೇಕು. 30/40 ಚ.ಅಡಿ ವಿಸ್ತೀರ್ಣದ ನಿವೇಶನದಲ್ಲಿ ಮನೆ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿಗೆ ಕನಿಷ್ಠ ರೂ 15,000ದಿಂದ 20,000 ನೀಡಬೇಕು. ಜನಪ್ರತಿನಿಧಿಗಳ ಶಿಫಾರಸು ಇಲ್ಲವೇ ಇತರೆ ಪ್ರಭಾವ ತಂದರೆ ಈ ಮೊತ್ತದಲ್ಲಿ ತುಸು ಕಡಿಮೆಯಾಗುತ್ತದೆ~ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ಇನ್ನು 60/40 ಚ.ಅಡಿ ನಿವೇಶನದಲ್ಲಿ ಶೇ 20ರಷ್ಟು ಭಾಗವನ್ನು ವಾಣಿಜ್ಯಕ್ಕೆ ಬಳಸಬಹುದು. ಈ ನಕ್ಷೆ ಮಂಜೂರಾತಿಗೆ ಕನಿಷ್ಠ ಒಂದು ಲಕ್ಷ ರೂಪಾಯಿ ಪಡೆಯುವವರಿದ್ದಾರೆ. ಏಕೆಂದರೆ ಈ ನಕ್ಷೆಗೆ ಆ ವಲಯದ ಜಂಟಿ ಆಯುಕ್ತರ ಅಧ್ಯಕ್ಷತೆಯ ಸಮಿತಿ ಅನುಮೋದನೆ ನೀಡಬೇಕಾಗುತ್ತದೆ~ ಎಂದು ಹೇಳಿದರು.

`30/40 ಚ.ಅ. ವಿಸ್ತೀರ್ಣದ ಕಟ್ಟಡದಲ್ಲಿ ನಿಯಮ ಉಲ್ಲಂಘನೆಗೆ 50,000 ರೂಪಾಯಿ ಲಂಚ ಪಡೆಯುವವರಿದ್ದಾರೆ. 40/60 ಚ.ಅಡಿ ಅಳತೆಯ ಭಾಗಶಃ ವಾಸದ ಕಟ್ಟಡದಲ್ಲಿ ನಿಯಮ ಉಲ್ಲಂಘನೆಯಾಗಿದ್ದರೆ ಸುಮಾರು 2 ಲಕ್ಷ ರೂಪಾಯಿ ಕೇಳುತ್ತಾರೆ~ ಎಂದು ಮಾಹಿತಿ ನೀಡಿದರು.

 (-ಮುಂದುವರಿಯುವುದು...)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.