ADVERTISEMENT

ಮರ ಬಿದ್ದು ಕೆಎಸ್‌ಆರ್‌ಟಿಸಿ ಬಸ್‌ ಜಖಂ

ಓಕಳಿಪುರ ರೈಲ್ವೆ ನಿಲ್ದಾಣ ಬಳಿ ಘಟನೆ: ಪ್ರಯಾಣಿಕರು ಪಾರು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2016, 19:44 IST
Last Updated 3 ಆಗಸ್ಟ್ 2016, 19:44 IST
ಮರ ಬಿದ್ದಿದ್ದರಿಂದ ಜಖಂಗೊಂಡಿರುವ ಕೆಎಸ್‌ಆರ್‌ಟಿಸಿ ಬಸ್‌ – ಪ್ರಜಾವಾಣಿ ಚಿತ್ರ
ಮರ ಬಿದ್ದಿದ್ದರಿಂದ ಜಖಂಗೊಂಡಿರುವ ಕೆಎಸ್‌ಆರ್‌ಟಿಸಿ ಬಸ್‌ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಓಕಳಿಪುರದ ರೈಲ್ವೆ ನಿಲ್ದಾಣ ಗೇಟ್‌  ವೃತ್ತದಲ್ಲಿ ಬುಧವಾರ ಮರವೊಂದು ನೆಲಕ್ಕುರುಳಿದ್ದು,  ಕೆಎಸ್‌ ಆರ್‌ಟಿಸಿ ಬಸ್‌ ಜಖಂಗೊಂಡಿದೆ.‘ಮೆಜೆಸ್ಟಿಕ್‌ನಿಂದ ತುಮಕೂರು ಜಿಲ್ಲೆಯ ಶಿರಾಗೆ ಹೋಗುತ್ತಿದ್ದ ಬಸ್‌ ಮೇಲೆಯೇ ಮರ ಬಿದ್ದಿದ್ದು, ಪರಿಣಾಮ ಬಸ್‌ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.  ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ’ ಎಂದು ಶ್ರೀರಾಮಪುರ ಪೊಲೀಸರು ತಿಳಿಸಿದರು.

ಮಧ್ಯಾಹ್ನ 2ರ ಸುಮಾರಿಗೆ ಘಟನೆ ನಡೆದಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ರಸ್ತೆಯಿಂದ ತೆರವುಗೊಳಿಸಿದರು. ಅಲ್ಲಿಯವರೆಗೂ ವೃತ್ತದ ಸುತ್ತಮುತ್ತ ಅರ್ಧ ಗಂಟೆ ಸಂಚಾರ ದಟ್ಟಣೆ ಉಂಟಾಗಿತ್ತು.

‘ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡ ಜಾಗದಲ್ಲಿ  ಬಿಬಿಎಂಪಿ ವತಿಯಿಂದ ಸೇತುವೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ಜಾಗವನ್ನು ಅವೈಜ್ಞಾನಿಕವಾಗಿ ಅಗೆಯಲಾಗಿದ್ದು, ಅದರಿಂದ ಟೊಳ್ಳಾದ ಮರ ದಿಢೀರ್‌ ಉರುಳಿ ಬಿದ್ದಿದೆ’ ಎಂದು ಸ್ಥಳೀಯರು ದೂರಿದರು.

‘ಓಕಳಿಪುರ ವೃತ್ತದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಮಾರ್ಗದಲ್ಲಿ ಇನ್ನು 10ಕ್ಕೂ ಹೆಚ್ಚು ಮರಗಳಿದ್ದು, ನಾನಾ ಕಾರಣಕ್ಕೆ ಅವುಗಳು ಟೊಳ್ಳಾಗುತ್ತಿವೆ. ನೆರಳು ನೀಡಬೇಕಾದ ಮರಗಳು ಕೆಲ ಕಾಮಗಾರಿಗಳಿಂದ ಅಪಾಯವನ್ನುಂಟು ಮಾಡುವ ಸ್ಥಿತಿಗೆ ಬಂದಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.