ADVERTISEMENT

ಮಲ್ಲೇಶ್ವರಂ ಕ್ಷೇತ್ರದಿಂದ ಸೀತಾರಾಂ ಕಣಕ್ಕೆ?

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 19:47 IST
Last Updated 12 ಅಕ್ಟೋಬರ್ 2017, 19:47 IST

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ನಿರ್ಧರಿಸಿರುವ ಕಾಂಗ್ರೆಸ್‌ ವರಿಷ್ಠರು, ಯೋಜನೆ ಮತ್ತು ಸಾಂಖ್ಯಿಕ ಸಚಿವ ಎಂ.ಆರ್. ಸೀತಾರಾಂ ಅವರನ್ನು ಮಲ್ಲೇಶ್ವರ ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕೆ ಇಳಿಸಲು ಚಿಂತಿಸಿದ್ದಾರೆ.

ಎರಡು ಬಾರಿ ಮಲ್ಲೇಶ್ವರ ಕ್ಷೇತ್ರದಿಂದ ಆರಿಸಿ ಬಂದಿರುವ ಸೀತಾರಾಂ, 2008ರ ಚುನಾವಣೆಯಲ್ಲಿ ಬಿಜೆಪಿಯ ಡಾ. ಸಿ.ಎನ್‌. ಅಶ್ವತ್ಥನಾರಾಯಣ ವಿರುದ್ಧ ಸೋಲು ಕಂಡಿದ್ದರು. 2013ರಲ್ಲಿ ಅವರು ಸ್ಪರ್ಧಿಸಿರಲಿಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

‘ಮಲ್ಲೇಶ್ವರ ಕ್ಷೇತ್ರ ಪ್ರತಿನಿಧಿಸುವ ಅಶ್ವತ್ಥ ನಾರಾಯಣ ವಿರುದ್ಧ ಕಣಕ್ಕಿಳಿಯಲು ಸೀತಾರಾಂ ಸೂಕ್ತ ಅಭ್ಯರ್ಥಿ ಎಂದು ವರಿಷ್ಠರು ಭಾವಿಸಿದ್ದಾರೆ. ಅಲ್ಲದೆ, ಸೀತಾರಾಂ ಕೂಡಾ ಮತ್ತೊಮ್ಮೆ ಕಣಕ್ಕಿಳಿಯಲು ಒಲವು ಹೊಂದಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

‘ಸೀತಾರಾಂ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಕ್ಷೇತ್ರದ ಜನರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಅವರು ಈಗಲೂ ತಮ್ಮ ವರ್ಚಸ್ಸು ಉಳಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೂ ಅವರು ಉತ್ತಮ ಸಂಬಂಧ ಹೊಂದಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಜೆಡಿಎಸ್‌ನತ್ತ ಶಾಂತಕುಮಾರಿ, ರವೀಂದ್ರ?: ಬಿಬಿಎಂಪಿ ಮಾಜಿ ಮೇಯರ್‌ ಶಾಂತಕುಮಾರಿ ಮತ್ತು  ಮಾಜಿ ಸದಸ್ಯ ಎಂ.ಎಸ್‌. ರವೀಂದ್ರ ಅವರು ಜೆಡಿಎಸ್‌ ಸೇರಲು ಒಲವು ತೋರಿದ್ದಾರೆ.

ಬಿಜೆಪಿಯ ಈ ಇಬ್ಬರು ನಾಯಕರು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರ ಜೊತೆ ಈಗಾಗಲೇ ಚರ್ಚೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ವಿಜಯನಗರ ಮತ್ತು ಗೋವಿಂದರಾಜ ನಗರ ಕ್ಷೇತ್ರದಿಂದ ಈ ಇಬ್ಬರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಈ ಕ್ಷೇತ್ರಗಳಲ್ಲಿ ಕ್ರಮವಾಗಿ ವಿಧಾನಪರಿಷತ್‌ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ಮತ್ತು ಲಕ್ಷ್ಮಿನಾರಾಯಣ ಅವರು ಟಿಕೆಟ್‌ಗಾಗಿ ಯತ್ನನಡೆಸಿದ್ದಾರೆ.

ಟಿಕೆಟ್‌ ಸಿಗುವ ಸಾಧ್ಯತೆ ಇಲ್ಲದಿರುವುದರಿಂದ ಶಾಂತಕುಮಾರಿ, ರವೀಂದ್ರ ಜೆಡಿಎಸ್‌ನತ್ತ ವಾಲಿದ್ದಾರೆ. ಈ ಮಧ್ಯೆ, ಬಿಜೆಪಿ ಉಪಾಧ್ಯಕ್ಷ ವಿ. ಸೋಮಣ್ಣ ಈ ಇಬ್ಬರ ಮನವೊಲಿಸುತ್ತಿದ್ದಾರೆ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.