ADVERTISEMENT

ಮಸೂದೆ ಶೀಘ್ರ ಜಾರಿಯಾಗಲಿ: ಖುರೇಷಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಕ್ರಿಮಿನಲ್ ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ತಡೆಯುವ ಮಸೂದೆಯು ಆದಷ್ಟು ಬೇಗ ಸಂಸತ್ತಿನ ಅನುಮೋದನೆ ಪಡೆದುಕೊಳ್ಳಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಡಾ.ಎಸ್.ವೈ. ಖುರೇಷಿ ಆಶಿಸಿದರು.

ಬೆಂಗಳೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ತಯಾರಿಸುವಲ್ಲಿ ಚುನಾವಣಾ ಆಯೋಗಕ್ಕೆ ಸಹಕರಿಸಲು ಜನಾಗ್ರಹ ಸಂಸ್ಥೆಯೊಂದಿಗೆ ಭಾನುವಾರ ಒಪ್ಪಂದ ಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧ ಹಿನ್ನೆಲೆಯುಳ್ಳವರು ರಾಜಕೀಯ ಪ್ರವೇಶಿಸುವುದನ್ನು ತಡೆಯುವ ಉದ್ದೇಶದಿಂದ ಸಿದ್ಧಪಡಿಸಲಾದ `ರಾಜಕೀಯದ ಅಪರಾಧೀಕರಣ ವಿರೋಧಿ ಮಸೂದೆ~ಗೆ ಆದಷ್ಟು ಬೇಗ ಸಂಸತ್ತಿನ ಅನುಮೋದನೆ ದೊರೆಯಬೇಕು ಎಂದು ಹೇಳಿದರು.

ಚುನಾವಣೆ ನಡೆಯುವ ದಿನಾಂಕಕ್ಕಿಂತ ಕನಿಷ್ಠ ಆರು ತಿಂಗಳ ಹಿಂದೆಯೇ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಆರೋಪ ಪಟ್ಟಿ ದಾಖಲಾಗಿರಬೇಕು. ಆಗ ಮಾತ್ರ ಆ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹನಾಗುತ್ತಾನೆ ಎಂದು ಖುರೇಶಿ ವಿವರಿಸಿದರು.

ಒಪ್ಪಂದಕ್ಕೆ ಸಹಿ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು, `ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆ ವಿಚಾರದಲ್ಲಿ ಕರ್ನಾಟಕ ನೆರೆಯ ರಾಜ್ಯಗಳಷ್ಟು ಪ್ರಗತಿ ಸಾಧಿಸಿಲ್ಲ.~ ಎಂದರು. ಕೇರಳದಲ್ಲಿ ಶೇಕಡ 100ರಷ್ಟು ಅರ್ಹರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.

ತಮಿಳುನಾಡಿನಲ್ಲಿ ಇದರ ಪ್ರಮಾಣ ಶೇಕಡ 99ರಷ್ಟಿದ್ದರೆ ಕರ್ನಾಟಕದ ಪ್ರಮಾಣ ಶೇಕಡ 94 ಮಾತ್ರ. ಅದರಲ್ಲೂ ಬೆಂಗಳೂರು ನಗರದ ಅರ್ಹ ವ್ಯಕ್ತಿಗಳ ಪೈಕಿ ಶೇಕಡ 64ರಷ್ಟು ಮಂದಿ ಮಾತ್ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದರು.

ಇನ್ಫೋಸಿಸ್ ಲಿಮಿಟೆಡ್‌ನ ನಿವೃತ್ತ ಅಧ್ಯಕ್ಷ ಎನ್.ಆರ್. ನಾರಾಯಣಮೂರ್ತಿ ಮಾತನಾಡಿ, `ನಾಗರಿಕ ಸಮಾಜ ಮತ್ತು ಸಾಂವಿಧಾನಿಕ ಸಂಸ್ಥೆಗಳ ನಡುವಿನ ಸಹಕಾರದಿಂದ ರಾಷ್ಟ್ರದ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಯಾಗುತ್ತದೆ~ ಎಂದು ಹೇಳಿದರು. ಜನಾಗ್ರಹ ಸಂಸ್ಥೆಯ ಸಹ ಸಂಸ್ಥಾಪಕರಾದ ಸ್ವಾತಿ ರಾಮನಾಥನ್, ರಮೇಶ್ ರಾಮನಾಥನ್, ಕೇಂದ್ರ ಚುನಾವಣಾ ಆಯೋಗದ ಮಹಾನಿರ್ದೇಶಕ ಅಕ್ಷಯ್ ರಾವತ್, ರಾಜ್ಯ ಚುನಾವಣಾ ಆಯುಕ್ತ ಸಿ.ಆರ್. ಚಿಕ್ಕಮಠ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.