ADVERTISEMENT

ಮಹದಾಯಿ: ಚರ್ಚೆಗೆ ಪತ್ರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಮಂಡಳಿ ಹೊರಗೆ ಮಾತುಕತೆ ನಡೆಸುವ ಸಂಬಂಧ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಗೋವಾ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲ್ಯೇಕರ್‌ ಅವರಿಗೆ ಪತ್ರ ಬರೆದಿದ್ದಾರೆ.

ಮಹದಾಯಿ ನ್ಯಾಯಮಂಡಳಿ ಸಲಹೆ ಮೇರೆಗೆ 2016ರ ಸೆ.1ರಂದು ಸಭೆ ಕರೆಯಲಾಗಿತ್ತು. ಆದರೆ, ಗೋವಾ ಮುಖ್ಯಮಂತ್ರಿ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ ಕಾರಣ ರದ್ದಾಗಿತ್ತು. ದಶಕಗಳಷ್ಟು ಹಳೆಯದಾದ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಸಭೆ ನಡೆಸುವ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಮಹದಾಯಿ ವಿಚಾರದಲ್ಲಿ ಕರ್ನಾಟಕ ನೀಚ ತಂತ್ರ (ಡರ್ಟಿ ಟ್ರಿಕ್ಸ್‌) ಮಾಡುತ್ತಿದೆ ಎಂದು ನೀವು (ವಿನೋದ್‌ ಪಾಲ್ಯೇಕರ್‌) ಇತ್ತೀಚೆಗೆ ಹೇಳಿಕೆ ನೀಡಿದ್ದೀರಿ. ಅಲ್ಲದೆ, ಕೆಲವು ಸುಳ್ಳು ಆರೋಪಗಳನ್ನೂ ಮಾಡಿದ್ದೀರಿ. ಇದು ಅಸಂಬದ್ಧ ಹೇಳಿಕೆಯ ಪರಮಾವಧಿ.  ನದಿ ನೀರು ವಿಚಾರದಲ್ಲಿ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಪ್ರಯತ್ನ ಕರ್ನಾಟಕದಿಂದ ಇದುವರೆಗೂ ಆಗಿಲ್ಲ. ಇನ್ನು ಮುಂದೆಯೂ ಆಗುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಕರ್ನಾಟಕ ಮತ್ತು ಗೋವಾ ನೆರೆ ರಾಜ್ಯಗಳಾಗಿದ್ದು, ಉಭಯ ರಾಜ್ಯಗಳ ಜನತೆ ಶಾಂತಿ, ನೆಮ್ಮದಿಯಿಂದ ಸಹಬಾಳ್ವೆ ನಡೆಸಬೇಕು. ಸಹಕಾರ ಒಕ್ಕೂಟ ವ್ಯವಸ್ಥೆಯಡಿ ನಾವೆಲ್ಲರೂ ಇರುವುದರಿಂದ ನೀರು ಹಂಚಿಕೆ ವಿವಾದವನ್ನು ಪರಿಹರಿಸುವುದಕ್ಕಾಗಿ ವೇದಿಕೆ ಸಿದ್ಧಪಡಿಸುವುದು ಸಂವಿಧಾನಾತ್ಮಕ ಹೊಣೆಗಾರಿಕೆಯೂ ಆಗಿದೆ ಎಂದು ಸಚಿವ ಪಾಟೀಲ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.