ADVERTISEMENT

ಮಹಿಳಾ ಧಾರ್ಮಿಕ ಗುರು ಏಕೆ ಬೇಡ?

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2011, 19:40 IST
Last Updated 7 ನವೆಂಬರ್ 2011, 19:40 IST
ಮಹಿಳಾ ಧಾರ್ಮಿಕ ಗುರು ಏಕೆ ಬೇಡ?
ಮಹಿಳಾ ಧಾರ್ಮಿಕ ಗುರು ಏಕೆ ಬೇಡ?   

ಬೆಂಗಳೂರು: `ಸ್ತ್ರೀಯನ್ನು ಧಾರ್ಮಿಕ ಗುರುವಾಗಿ ಸ್ವೀಕರಿಸಲು ಯಾವುದೇ ಧರ್ಮಗಳು ಒಪ್ಪುತ್ತಿಲ್ಲ~ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಇಲ್ಲಿ ತಿಳಿಸಿದರು.ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಶ್ರೀ. ಜ.ಚ.ನಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಶರಣರ ಕಾಲದಿಂದಲೂ ಸ್ತ್ರೀಯನ್ನು ಧಾರ್ಮಿಕ ಗುರುವಾಗಿ ಸ್ವೀಕರಿಸಲು ಯಾವುದೇ ಧರ್ಮಗಳು ಒಲವು ತೋರಿಲ್ಲ. ಅಂದಿನಿಂದ ಇಲ್ಲಿವರೆಗೂ ಅವರ ಧಾರ್ಮಿಕ ಹಕ್ಕಿಗೆ ಮಾನ್ಯತೆ ಸಿಗುತ್ತಿಲ್ಲ~ ಎಂದು ಹೇಳಿದರು.

ಪುರುಷ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಗುರುವಾಗಿ ಒಪ್ಪಿಕೊಳ್ಳುವುದು ಕಡಿಮೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದಕ್ಕೆ ನೆಲೆ ಕಲ್ಪಿಸಿಕೊಟ್ಟಿದ್ದು ಚನ್ನಮಲ್ಲಿಕಾರ್ಜುನ ದೇಶೀಕೇಂದ್ರ ನಿಡುಮಾಮಿಡಿ (ಜ.ಚ.ನಿ) ಸ್ವಾಮೀಜಿ ಎಂದು ಅಭಿಪ್ರಾಯಪಟ್ಟರು.

ಡಾ.ಶ್ರೀ. ಜ.ಚ.ನಿ ಅವರು ಸ್ತ್ರೀಯರು ಶರಣರ ಕಾಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು. ಕೇವಲ ಪುರುಷರ ಸ್ವತ್ತಾಗಿದ್ದ ಧಾರ್ಮಿಕ ಹಕ್ಕನ್ನು ಮಹಿಳೆಯರಿಗೂ ಕಲ್ಪಿಸುವಲ್ಲಿ ಶ್ರಮಿಸಿದರು ಎಂದರು.

ಮಹಿಳೆಯರ ಬಗ್ಗೆ ಅಃತಕರಣ ಹೊಂದಿದ್ದ ಅವರು ಅಕ್ಕಿಪೇಟೆಯಲ್ಲಿ ಭ್ರಮರಾಂಭ ಬಳಗ ಸ್ಥಾಪಿಸುವ ಮೂಲಕ ಮಹಿಳೆಯರ ಏಳಿಗೆಗೆ ಪ್ರಯತ್ನಿಸಿದರು. ಇಂದಿನ ದಿನಗಳಲ್ಲಿ ಮಹಿಳೆಯರನ್ನು ಧಾರ್ಮಿಕ ಗುರುವಾಗಿ ಸ್ವೀಕರಿಸುವ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಎಸ್.ನಾಗರಾಜು ಮಾತನಾಡಿ, `ಸಂಸಾರದ ಹೊರಗೂ ಹೆಣ್ಣಿಗೆ ಬದುಕಿದೆ ಎಂಬುದನ್ನು ತೋರಿಸಿಕೊಟ್ಟ ಮಹಿಳೆ ವಚನಗಾರ್ತಿ ಅಕ್ಕಮಹಾದೇವಿ~ ಎಂದು ಪ್ರಶಂಸಿದರು.

ಅಕ್ಕ ಮಹಾದೇವಿಯ ವಚನಗಳಲ್ಲಿ ಆತ್ಮ ವಿಮರ್ಶೆ ಹಾಗೂ ಸಾಮಾಜಿಕ ವಿಮರ್ಶೆಯ ಅಂಶಗಳು ಅಡಕವಾಗಿರುವುದು ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರ ಸಂಶೋಧನೆಯಿಂದ ತಿಳಿದು ಬಂದಿದೆ. ವೇದನೆ ಹಾಗೂ ನಿವೇದನೆ ಅವರ ವಚನದ ಕೇಂದ್ರ ವಿಷಯಗಳಾಗಿತ್ತು ಎಂದು ಅವರು ಹೇಳಿದರು.ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಕೆ.ರಾಮೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.