ಬೆಂಗಳೂರು: ದೇಶದಲ್ಲೇ ಮಹಿಳಾ ನಿರ್ವಾಹಕರನ್ನು ಹೊಂದಿದ ಮೊದಲ ಸರ್ಕಾರಿ ಸಾರಿಗೆ ಸಂಸ್ಥೆ ಎನಿಸಿರುವ ಬಿಎಂಟಿಸಿಯು ಮಹಿಳಾ ನಿರ್ವಾಹಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಹಿಂದುಳಿದಿದೆ.
ಬಿಎಂಟಿಸಿ 2003ರಿಂದ ಮಹಿಳಾ ನಿರ್ವಾಹಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಸದ್ಯ ಸಂಸ್ಥೆಯಲ್ಲಿ 1,523 ಮಹಿಳಾ ನಿರ್ವಾಹಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚುವರಿ ವೈದ್ಯಕೀಯ ಸೌಲಭ್ಯ, ಒತ್ತಡ ನಿವಾರಣೆಗೆ ಕ್ರಮ ಸೇರಿದಂತೆ ಯಾವುದೇ ವಿಶೇಷ ಸವಲತ್ತುಗಳನ್ನು ಸಂಸ್ಥೆಯು ಮಹಿಳಾ ನಿರ್ವಾಹಕರಿಗೆ ಒದಗಿಸಿಲ್ಲ.
ಇತ್ತೀಚೆಗೆ ಸಂಸ್ಥೆಯ ಬಸ್ ಚಾಲಕ ಮಹಿಳಾ ಪ್ರಯಾಣಿಕರ ಜತೆಗೆ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದ ಬಳಿಕ ಮಹಿಳಾ ನಿರ್ವಾಹಕರನ್ನು ಬೆಳಿಗ್ಗೆಯಿಂದ ಸಂಜೆವರೆಗೆ ಮಾತ್ರ ಕೆಲಸಕ್ಕೆ ನಿಯೋಜಿಸಲು ಬಿಎಂಟಿಸಿ ನಿರ್ಧರಿಸಿದೆ.
ಬಹುತೇಕ ಮಹಿಳಾ ನಿರ್ವಾಹಕರು ಕಾಲು ನೋವು, ಬೆನ್ನು ನೋವು, ಆಯಾಸ, ತೀವ್ರ ಕೆಲಸದ ಒತ್ತಡ, ಗರ್ಭಪಾತದಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಹಿಳಾ ನಿರ್ವಾಹಕರು ಪುರುಷ ಪ್ರಯಾಣಿಕರ ಅಸಭ್ಯ ವರ್ತನೆಯನ್ನೂ ಸಹಿಸಿಕೊಳ್ಳಬೇಕಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯವು ಮಹಿಳಾ ನಿರ್ವಾಹಕರ ಸಮಸ್ಯೆಗಳ ಕುರಿತು ಎರಡು ವರ್ಷಗಳ ಹಿಂದೆಯೇ ಅಧ್ಯಯನ ನಡೆಸಿ, ಕೆಲವು ಶಿಫಾರಸುಗಳನ್ನು ಬಿಎಂಟಿಸಿಗೆ ನೀಡಿತ್ತು.
ಮಹಿಳಾ ನಿರ್ವಾಹಕರ ಮೇಲಿನ ತೀವ್ರ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಒಂದು ಟ್ರಿಪ್‌ನ ಮಧ್ಯೆ 10 ನಿಮಿಷಗಳ ಕಾಲ ವಿರಾಮ ನೀಡಬೇಕು. ಬಸ್‌ನಲ್ಲಿ ಮಹಿಳಾ ನಿರ್ವಾಹಕರು ಕುಳಿತಿರುವ ಜಾಗದಲ್ಲಿಯೇ ಪ್ರಯಾಣಿಕರು ಬಂದು ಟಿಕೆಟ್ ಕೊಳ್ಳಬೇಕು. ಒಂದು ಬಸ್‌ನಲ್ಲಿ ಕನಿಷ್ಠ 60 ಪ್ರಯಾಣಿಕರು ಮಾತ್ರ ಪ್ರಯಾಣಿಸುವಂತಿರಬೇಕು. ನಿಗದಿಯಾಗಿರುವ ವೇಳೆಗೆ ಅನುಗುಣವಾಗಿ ಕೆಲಸ ಮಾಡಿಸಬೇಕು.
ರಾತ್ರಿ ಪಾಳಿ ಕೆಲಸವನ್ನು ಆದಷ್ಟು ತಪ್ಪಿಸಬೇಕೆಂಬ ಶಿಫಾರಸುಗಳನ್ನು ನೀಡಿತ್ತು. ಆದರೆ, ಈ ಶಿಫಾರಸುಗಳು ಇಲ್ಲಿಯವರೆಗೂ ಜಾರಿಯಾಗಿಲ್ಲ.
‘ಬಸ್‌ನಲ್ಲಿ ಹೆಚ್ಚಿನ ಜನ ಪ್ರಯಾಣಿಕರಿದ್ದಾಗ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಪ್ರಯಾಣಿಕರೇ ನಮ್ಮ ಬಳಿ ಬಂದು ಟಿಕೆಟ್ ತೆಗೆದುಕೊಂಡು ಹೋಗುವುದು ಕಷ್ಟವೇ. ನಾವೇ ಅವರಿದ್ದ ಜಾಗಕ್ಕೆ ಹೋಗಿ ಟಿಕೆಟ್ ನೀಡಬೇಕು. ಇದರಿಂದ ಕಾಲುನೋವು ಮತ್ತು ಕಾಲಿನಲ್ಲಿ ಊತ ಕಾಣಿಸಿಕೊಂಡಿದೆ.
ಆದರೆ, ಇದೇ ನನ್ನ ಕೆಲಸವಾಗಿರುವುದರಿಂದ ಇದನ್ನು ಮಾಡಲೇ ಬೇಕಾಗಿದೆ’ ಎಂದು ಕಳೆದ ಐದು ವರ್ಷಗಳಿಂದ ಮಹಿಳಾ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸುಮಲತಾ (ಹೆಸರು ಬದಲಿಸಿದೆ) ಹೇಳಿದರು.
‘ನಾನು ಮೊದಲು ಕೆಲಸಕ್ಕೆ ಸೇರಿದಾಗ ಎಲ್ಲರೂ ಇವಳು ಕೆಲಸ ಮಾಡುತ್ತಾಳಾ ಎಂದು ಸಂಶಯದಿಂದ ನೋಡುತ್ತಿದ್ದರು. ಪ್ರಯಾಣಿಕರು ಸಹ ಮಹಿಳಾ ನಿರ್ವಾಹಕರೆಂದರೆ ಹೀನಾಯವಾಗಿ ನೋಡುತ್ತಾರೆ. ಆದರೆ, ಪ್ರಯಾಣಿಕರೊಂದಿಗೆ ಹೇಗೆ ವರ್ತಿಸಬೇಕು ಎಂಬುದು ಅಭ್ಯಾಸವಾಗಿದೆ’ ಎಂದು ನಿರ್ವಾಹಕಿ ಗೀತಾ (ಹೆಸರು ಬದಲಿಸಿದೆ) ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿ ಬಿಎಂಟಿಸಿ ಅಧಿಕಾರಿಗಳು, ‘ಬಸ್‌ನಲ್ಲಿ ಅರವತ್ತೇ ಜನರು ಪ್ರಯಾಣಿಸಬೇಕು ಎಂಬ ಶಿಫಾರಸನ್ನು ಜಾರಿಗೆ ತರಲು ಸಾಧ್ಯವಿಲ್ಲ, ಅಗತ್ಯವಿದ್ದರೆ ಪ್ರಯಾಣಿಕರ ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬಹುದು’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.