ADVERTISEMENT

ಮಹಿಳೆಯನ್ನು ರಸ್ತೆಯಲ್ಲಿ ಎಳೆದಾಡಿದ ಜೆಡಿಎಸ್‌ ಮುಖಂಡ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:56 IST
Last Updated 13 ಮಾರ್ಚ್ 2018, 19:56 IST

ಬೆಂಗಳೂರು: ಮಹಿಳೆಯನ್ನು ರಸ್ತೆಯಲ್ಲೇ ಎಳೆದಾಡಿ, ಜೀವಬೆದರಿಕೆ ಹಾಕಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಮುಖಂಡ ಪಿ.ನಾರಾಯಣ ಎಂಬಾತನನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಯಾದ ನಾರಾಯಣ, ಜೆಡಿಎಸ್‌ನ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂದು ಗೊತ್ತಾಗಿದೆ. ಸಂತ್ರಸ್ತೆ ನೀಡಿದ್ದ ದೂರಿನನ್ವಯ ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೆವು’ ಎಂದು ಮಹಾಲಕ್ಷ್ಮಿ ಲೇಔಟ್ ಪೊಲೀಸರು ತಿಳಿಸಿದರು.

‘ಸ್ಥಳೀಯ ನಿವಾಸಿಯಾದ ಸಂತ್ರಸ್ತೆಯು ಟ್ಯೂಷನ್‌ಗೆ ಹೋಗಿದ್ದ ಮಗನನ್ನು ಕರೆದುಕೊಂಡು ಫೆ. 16ರಂದು ಸಂಜೆ ಮನೆಯತ್ತ ಹೊರಟಿದ್ದರು. ಅವರನ್ನು ನಾರಾಯಣ ಅಡ್ಡಗಟ್ಟಿ ಜಗಳ ತೆಗೆದಿದ್ದ. ಅದನ್ನು ಪ್ರಶ್ನಿಸಿದ್ದಕ್ಕೆ ಸಂತ್ರಸ್ತೆಯ ಮೇಲೆಯೇ ಹಲ್ಲೆ ಮಾಡಿ ಬೆದರಿಸಿದ್ದ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಮಹಿಳೆಯ ಕೂದಲು ಹಿಡಿದು ಎಳೆದಾಡಿದ್ದ. ನಂತರ, ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಜಗಳ ಬಿಡಿಸಲು ಬಂದ ಸ್ಥಳೀಯರಿಗೂ ಬೆದರಿಕೆ ಹಾಕಿದ್ದ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ’ ಎಂದರು.

‘ಆರೋಪಿಯು ಠಾಣೆಯ ರೌಡಿಶೀಟರ್‌ ಆಗಿದ್ದಾನೆ. ಸಂತ್ರಸ್ತೆಯು ಆತನ ಸಂಬಂಧಿ ಎಂಬ ಮಾಹಿತಿ ಇದೆ. ಗಲಾಟೆಗೆ ಏನು ಕಾರಣ ಎಂಬುದು ಗೊತ್ತಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.