ADVERTISEMENT

ಮಾನಸಿಕ ಅಸ್ವಸ್ಥನಾದ ಬಿ.ಇ ಪದವೀಧರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 19:42 IST
Last Updated 3 ಜುಲೈ 2013, 19:42 IST
ರಾಜಾಜಿನಗರದಲ್ಲಿ ಅರೆಬೆತ್ತಲೆಯಾಗಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಶೇಖರ್ ಅವರನ್ನು ಹವ್ಯಾಸಿ ಛಾಯಾಗ್ರಾಹಕ ರಾಜಣ್ಣ ಮತ್ತು ಸ್ಥಳೀಯರು  ಪೊಲೀಸರನೆರವಿನಿಂದ ರಕ್ಷಿಸಿ ನಿಮ್ಹಾನ್ಸ್‌ಗೆ ಕಳುಹಿಸಿದರು
ರಾಜಾಜಿನಗರದಲ್ಲಿ ಅರೆಬೆತ್ತಲೆಯಾಗಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಶೇಖರ್ ಅವರನ್ನು ಹವ್ಯಾಸಿ ಛಾಯಾಗ್ರಾಹಕ ರಾಜಣ್ಣ ಮತ್ತು ಸ್ಥಳೀಯರು ಪೊಲೀಸರನೆರವಿನಿಂದ ರಕ್ಷಿಸಿ ನಿಮ್ಹಾನ್ಸ್‌ಗೆ ಕಳುಹಿಸಿದರು   

ಬೆಂಗಳೂರು: ರಾಜಾಜಿನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಿನ ಪಾದಚಾರಿ ಮಾರ್ಗ, ಕಮಲಮ್ಮನ ಗುಂಡಿ, ಬಸವ ಮಂಟಪ.. ಹೀಗೆ ನಗರದ ಎಲ್ಲೆಂದರಲ್ಲಿ ಅರೆಬೆತ್ತಲೆಯಾಗಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನನ್ನು ರಕ್ಷಿಸಿ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ.

ತುಮಕೂರಿನ ಸಿದ್ಧಾರ್ಥ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಓದಿರುವ, ನಿರರ್ಗಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ ಶೇಖರ್ ಎಂಬ ವ್ಯಕ್ತಿ ಕಳೆದ ಏಳೆಂಟು ವರ್ಷಗಳಿಂದ ಬಿಸಿಲು, ಮಳೆ, ಚಳಿ ಗಾಳಿ ಎನ್ನದೆ ಬೀದಿ ಬದಿಯಲ್ಲಿ ಸಿಕ್ಕಿದ್ದನ್ನು ತಿನ್ನುತ್ತ ಬದುಕುತ್ತಿದ್ದ. ಹವ್ಯಾಸಿ ಛಾಯಾಗ್ರಾಹಕ ರಾಜಣ್ಣ ಎಂಬುವವರು ಸ್ಥಳೀಯರ ನೆರವಿನಿಂದ ಇವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ.

ಶಿವನಗರದ 7ನೇ ಮುಖ್ಯರಸ್ತೆಯಲ್ಲಿ 35 ವರ್ಷಗಳಿಂದ ವಾಸವಾಗಿದ್ದ ಹುಬ್ಬಳ್ಳಿ ಮೂಲದ ಸರಳಮ್ಮ ಎಂಬುವರ ಮಗ ಶೇಖರ್. ಅವರು ಬಿಇಎಲ್‌ನಲ್ಲಿ ವಿನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ ಮೂವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದರು. ಮೊದಲ ಮಗ ಕುಟ್ಟಿ ಮನೆ ಬಿಟ್ಟು ಹೋಗಿ 35 ವರ್ಷಗಳೇ ಸಂದಿದ್ದು ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ. ಎರಡನೇ ಮಗ ಶ್ರೀಧರ್ ಮಾನಸಿಕ ಅಸ್ವಸ್ಥರಾಗಿ ಸಾವನ್ನಪ್ಪಿದ್ದಾರೆ. ಮಗಳು ವಿಜಯಲಕ್ಷ್ಮಿ ಸಹ ಮಾನಸಿಕ ಅಸ್ವಸ್ಥತೆಯಿಂದ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರಿಯ ಮಗಳು ರೇಣುಕಮ್ಮ ಎಂಬುವರಿಗೆ ಮದುವೆಯಾಗಿದ್ದು ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ.
`ತಂದೆಯ ನಿವೃತ್ತಿ ನಂತರ ಬಂದ ಹಣದಿಂದ ಸ್ವಂತ ಉದ್ಯೋಗ ಆರಂಭಿಸಿದ ಶೇಖರ್, ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ.

ಮಕ್ಕಳಿಬ್ಬರ ಸಾವಿನಿಂದ ಯಾತನೆ ಅನುಭವಿಸಿದ ಇವರ ತಂದೆ-ತಾಯಿ ಇಬ್ಬರೂ ಅದೇ ಕೊರಗಿನಲ್ಲಿ ಹಾಸಿಗೆ ಹಿಡಿದವರು ಮತ್ತೆ ಚೇತರಿಸಿಕೊಳ್ಳಲಿಲ್ಲ. ಅವರ ಅಗಲಿಕೆ ನಂತರ ಶೇಖರ್ ಮಾನಸಿಕ ಅಸ್ವಸ್ಥನಾಗಿರಬಹುದು' ಎಂದು ಸ್ಥಳೀಯರಾದ ಗುರುರಾಜ್ ಹೇಳಿದರು.

`ಶೇಖರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ತನ್ನ ಬಗೆಗಿನ ಮಾಹಿತಿಯನ್ನು ಹೇಳುತ್ತಿದ್ದಾನೆ. ಚಿಕಿತ್ಸೆ ಮುಂದುವರೆಸಿದರೆ ಗುಣಮುಖನಾಗುವ ಸಾಧ್ಯತೆ ಇದೆ' ಎಂದು ಚಿಕಿತ್ಸೆ ನೀಡುತ್ತಿರುವ ನಿಮ್ಹಾನ್ಸ್‌ನ ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.