ADVERTISEMENT

ಮಾವಳ್ಳಿಪುರ ಕೃಷಿಕರಿಗೆ ಕಂಟಕವಾದ ನಗರದ ಕಸ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 19:30 IST
Last Updated 5 ನವೆಂಬರ್ 2012, 19:30 IST

ಬೆಂಗಳೂರು: `ದ್ರಾಕ್ಷಿ ಗಿಡಗಳಿಗೆ ಮಳೆಗಾಲದಲ್ಲಿ ಮೂರು ಬಾರಿ ಹಾಗೂ ಬೇಸಿಗೆಯಲ್ಲಿ ಎರಡು ಬಾರಿ ಔಷಧಿ ಸಿಂಪಡಿಸುತ್ತಿದ್ದೆ. ಈಗ ಮಳೆಗಾಲದಲ್ಲಿ ಆರು ಬಾರಿ ಹಾಗೂ ಬೇಸಿಗೆಯಲ್ಲಿ ಮೂರು ಬಾರಿ ಔಷಧಿ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುವುದಿಲ್ಲ. ಬಂದ ಲಾಭವೆಲ್ಲ ಔಷಧ ಸಿಂಪಡಣೆಗೆ ಸರಿಯಾಗುತ್ತಿದೆ. ರೈತರ ಸಂಕಷ್ಟ, ನೋವು ಯಾರಿಗೂ ಅರ್ಥವಾಗುವುದಿಲ್ಲ ಸ್ವಾಮಿ~. 

-ಹೀಗೆಂದು ಅಸಹಾಯಕರಾಗಿ ನುಡಿದವರು ಮಾವಳ್ಳಿಪುರದ ಕೃಷಿಕ ಸಿದ್ದಪ್ಪ. ಅವರ ಕೃಷಿಭೂಮಿ ತ್ಯಾಜ್ಯ ವಿಲೇವಾರಿ ಕೇಂದ್ರದಿಂದ ಕೂಗಳತೆಯ ದೂರದಲ್ಲಿದೆ. ದಶಕಗಳ ಕಾಲದಿಂದ ಗ್ರಾಮದಲ್ಲಿ ಸುರಿದ `ನಗರ ಕಸ~ದಿಂದ ಅತೀ ಹೆಚ್ಚು ಸಂಕಷ್ಟ ಅನುಭವಿಸಿದ ಗ್ರಾಮಸ್ಥರಲ್ಲಿ ಇವರೂ ಒಬ್ಬರು.

ಅವರು ಎರಡು ಎಕರೆ ಜಾಗದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದಾರೆ. ಒಂದು ಎಕರೆ ಜಾಗದಲ್ಲಿ ಟೊಮೆಟೊ ಬೆಳೆ ಇದೆ. ಈಚಿನ ವರ್ಷಗಳಲ್ಲಿ ದ್ರಾಕ್ಷಿ ಹಾಗೂ ಟೊಮೊಟೊ ಫಸಲು ಶೇ 50ರಷ್ಟು ಕಡಿಮೆ ಆಗಿದೆ ಎಂದು ಅವರು ಅಳಲು ತೋಡಿಕೊಂಡರು.

`ಮೂರು ವರ್ಷಗಳಿಂದ ಸಮಸ್ಯೆ ಗಂಭೀರ ಸ್ವರೂಪ ತಾಳಿದೆ. ನೊಣಗಳ ಕಾಟದಿಂದಾಗಿ ಫಸಲು ಕೈಗೆ ಬರುತ್ತಿಲ್ಲ. ಕೃಷಿ ಭೂಮಿಯ ಸುತ್ತಮುತ್ತಲ ಕೊಳಚೆ ನೀರು ನಿಂತು ಸೊಳ್ಳೆಗಳ ಆವಾಸಸ್ಥಾನವಾಗಿದೆ. ಸಾಕಷ್ಟು ಔಷಧಿ ಸಿಂಪಡಿಸಿದರೂ ಪ್ರಯೋಜನ ಆಗುತ್ತಿಲ್ಲ. ಒಂದು ಬಾರಿ ಔಷಧಿ ಸಿಂಪಡಿಸಲು ಐದು ಸಾವಿರ ರೂಪಾಯಿ ಖರ್ಚಾಗುತ್ತದೆ~ ಎಂದು ಅವರು ವಾಸ್ತವ ಚಿತ್ರಣವನ್ನು ಬಿಚ್ಚಿಟ್ಟರು.

`ಈ ಹಿಂದೆ ದ್ರಾಕ್ಷಿ ಗೊಂಚಲು ಒಂದೇ ಬಾರಿ ಹಣ್ಣಾಗುತ್ತಿತ್ತು. ಈಗ ಗೊಂಚಲಿನಲ್ಲಿ ನಾಲ್ಕು ಹಣ್ಣು, ಕೆಲವು ಕಾಯಿಗಳು ಹಾಗೂ ಉಳಿದವು ಕೆಂಗಾಯಿಗಳು ಕಾಣಸಿಗುತ್ತವೆ. ಇಂತಹ ಗೊಂಚಲನ್ನು ವ್ಯಾಪಾರಿಗಳು ಮೂರು ಕಾಸಿಗೆ ಕೇಳುತ್ತಾರೆ. ಅನಿವಾರ್ಯವಾಗಿ ಮಾರಾಟ ಮಾಡಲೇಬೇಕಾಗುತ್ತದೆ~ ಎಂದು ಅವರು ನೋವು ತೋಡಿಕೊಂಡರು.

ಸೀಬೆಗೂ ಕಾಯಿಲೆ: ಕೃಷಿಕ ರಮೇಶ್ ಎರಡು ಎಕರೆ ಜಾಗದಲ್ಲಿ ಸೀಬೆಗಿಡಗಳನ್ನು ನೆಟ್ಟಿದ್ದಾರೆ. ಈ ಗಿಡಗಳಿಗೆ ಈಗ ಎಂಟು ವರ್ಷ. ಈ ಅವಧಿಯಲ್ಲಿ ಭರ್ಜರಿ ಫಸಲು ದೊರೆಯುವ ಕಾಲ. ಆದರೆ, ಕಳೆದ ಮೂರು ವರ್ಷಗಳಲ್ಲಿ ಫಸಲು ಗಣನೀಯವಾಗಿ ಇಳಿದಿದೆ. ಗಿಡಗಳ ಬೆಳವಣಿಗೆ ಕುಂಠಿತವಾಗಿದೆ. ನಾಲ್ಕು ಕಾಯಿಗಳು ಕೆ.ಜಿ. ತೂಗುತ್ತಿದ್ದವು. ಈಗ 10 ಹಣ್ಣು ಹಾಕಿದರೂ ಕೆ.ಜಿ. ಭರ್ತಿ ಆಗುವುದಿಲ್ಲ.

`ಮೂರು ವರ್ಷಗಳ ಹಿಂದೆ 2.40 ಲಕ್ಷ ರೂಪಾಯಿಗೆ ಸೀಬೆಯನ್ನು ಮಾರಾಟ ಮಾಡಿದ್ದೆ. ಈ ವರ್ಷ 80 ಸಾವಿರ ರೂಪಾಯಿಗೆ ಸೀಬೆ ಮಾರಾಟ ಆಗಿದೆ. ಕಾಯಿಗಳು ಹಣ್ಣಾಗುವ ಮೊದಲೇ ಕಪ್ಪಾಗಿ ಬಿಡುತ್ತವೆ. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ತೋಟಕ್ಕೆ ಹೋಗುತ್ತಿದ್ದೆ. ತೋಟದ ದಾರುಣ ಸ್ಥಿತಿ ಕಂಡು ಈಗ ತೋಟಕ್ಕೆ ಹೋಗಲು ಬೇಸರವಾಗುತ್ತಿದೆ~ ಎಂದು ರಮೇಶ್ ಅವರು ತೋಟದಲ್ಲಿನ ಗಿಡಗಳನ್ನು ತೋರಿಸುತ್ತಾ ನೋವಿನಿಂದ ನುಡಿದರು.
ಗ್ರಾಮದಲ್ಲಿ ದಶಕದಿಂದ ಬೆಟ್ಟದೆತ್ತರಕ್ಕೆ ರಾಶಿ ಬಿದ್ದಿರುವ ಕಸದಿಂದಾಗಿ ಕೃಷಿ ಕ್ಷೇತ್ರದಲ್ಲಿ ಉಂಟಾದ `ಪಲ್ಲಟ~ಗಳ ಉದಾಹರಣೆಗಳಿವು. ಒಬ್ಬೊಬ್ಬ ರೈತನದ್ದು ಒಂದೊಂದು ನೋವಿನ ಕಥನ. ಕೃಷಿ ಉತ್ಪನ್ನಗಳ ಧಾರಣೆ ಕುಸಿತ, ಕಾರ್ಮಿಕರ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಕೃಷಿಕರಿಗೆ ಗ್ರಾಮದಲ್ಲಿ ಕಸ ವಿಲೇವಾರಿ ಮೂಲಕ ಬಿಬಿಎಂಪಿ ಮತ್ತಷ್ಟು ಸಮಸ್ಯೆಗಳನ್ನು `ಉಡುಗೊರೆ~ಯಾಗಿ ನೀಡಿದೆ.

`ಗ್ರಾಮದಲ್ಲಿ 300 ಎಕರೆ ಪ್ರದೇಶದಲ್ಲಿ ದ್ರಾಕ್ಷಿ, 350 ಎಕರೆ ಪ್ರದೇಶದಲ್ಲಿ ಸೀಬೆ, 900 ಎಕರೆ ಪ್ರದೇಶದಲ್ಲಿ ತರಕಾರಿ ಬೆಳೆಗಳು, ರಾಗಿ, ಜೋಳ, ಅವರೆಕಾಳು ಬೆಳೆಯಲಾಗುತ್ತಿದೆ. ಈಚಿನ ವರ್ಷಗಳಲ್ಲಿ ಕೃಷಿ ಇಳುವರಿ ಶೇ 40ರಷ್ಟು ಕಡಿಮೆ ಆಗಿದೆ. ಇದರಿಂದಾಗಿ ಕೃಷಿಯಲ್ಲಿ ವಿಮುಖರಾಗುವವರ ಸಂಖ್ಯೆ ಜಾಸ್ತಿ ಆಗುತ್ತಿದೆ~ ಎಂಬುದು ಗ್ರಾಮಸ್ಥರು ಅಭಿಪ್ರಾಯ.

ನೀರು ಕಲುಷಿತ: `ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತಳಮಟ್ಟಕ್ಕೆ ಇಳಿದಿದೆ. 800-900 ಅಡಿ ತೋಡಿದರೂ ಕೊಳವೆಬಾವಿಯಲ್ಲಿ ನೀರು ಸಿಗುವುದಿಲ್ಲ ಎಂಬ ಸಂಕಷ್ಟದ ಸ್ಥಿತಿ ಇದೆ. ಮಾವಳ್ಳಿಪುರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿಲ್ಲ. 200-300 ಅಡಿ ತೋಡಿದಾಗ ಸಮೃದ್ಧ ನೀರು ಬರುತ್ತದೆ. ಆದರೆ, ಗ್ರಾಮದ ನೀರು ಮಾತ್ರ ಕಲುಷಿತ~ ಎಂಬುದು ಗ್ರಾಮಸ್ಥರ ಅಭಿಮತ.

`ಮಾವಳ್ಳಿಪುರದ ಆಸುಪಾಸಿನ 13 ಹಳ್ಳಿಗಳ ಮೇಲೆ ತ್ಯಾಜ್ಯ ಪ್ರತ್ಯಕ್ಷ-ಪರೋಕ್ಷ ಪರಿಣಾಮ ಬೀರುತ್ತಿದೆ. ಈ ಹಳ್ಳಿಗಳಿಂದ ರಾಜಧಾನಿಗೆ ದಿನನಿತ್ಯ ಆರು ಸಾವಿರ ಟನ್ ತರಕಾರಿ ಹಾಗೂ ಹಣ್ಣು ಮಾರಾಟ ಮಾಡಲಾಗುತ್ತಿದೆ. ರೋಗಗಳ ಸಂಖ್ಯೆ ಹೆಚ್ಚಾದಂತೆ ಔಷಧ ಪ್ರಮಾಣವೂ ಹೆಚ್ಚು ಹಾಕಬೇಕಾಗುತ್ತದೆ. ಇದರಿಂದಾಗಿ ನಮಗಿಂತಲೂ ಜಾಸ್ತಿ ಆರೋಗ್ಯ ಸಮಸ್ಯೆ ಅನುಭವಿಸುವವರು ನಗರವಾಸಿಗಳು. ರಾಸಾಯನಿಕ ಮಿಶ್ರಿತ ಹಣ್ಣನ್ನು ತಿನ್ನುವವರು ನಗರವಾಸಿಗಳು~ ಎಂದು ಕೃಷಿಕ ಶ್ರೀನಿವಾಸ್ ಮಾರ್ಮಿಕವಾಗಿ ನುಡಿದರು.

`ಮಾವಳ್ಳಿಪುರ ಆಸುಪಾಸಿನ 13 ಗ್ರಾಮಗಳಲ್ಲಿ ಬೆಂಗಳೂರು ಡೇರಿಗೆ ಪ್ರತಿದಿನ 11 ಸಾವಿರ ಲೀಟರ್ ಹಾಲು ಪೂರೈಕೆ ಮಾಡಲಾಗುತ್ತಿದೆ. ಹಾಲಿನಲ್ಲಿ ಕೊಬ್ಬಿನಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಡೇರಿಯವರು ಎಚ್ಚರಿಕೆ ನೀಡಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಹೈನುಗಾರಿಕೆಗೆ ದೊಡ್ಡ ಹೊಡೆತ ಬೀಳಲಿದೆ~ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬೇಟೆಗಾರ ನಾಯಿಗಳು
ತ್ಯಾಜ್ಯದಿಂದ ಹೊರಸೂಸುವ ವಿಷಪೂರಿತ ನೀರು, ಕಲುಷಿತ ನೀರಿನ ಸಮಸ್ಯೆ ಒಂದು ಕಡೆಯಾದರೆ, ತ್ಯಾಜ್ಯ ರಾಶಿಯ ಸುತ್ತ `ಸಮೃದ್ಧ~ವಾಗಿ ಕಾಣಿಸಿಕೊಂಡಿರುವ ಬೀದಿನಾಯಿಗಳ ಕಾಟ ಮತ್ತೊಂದು ರೀತಿಯದು.

`ಕಸದ ರಾಶಿಯ ಸುತ್ತ 500ಕ್ಕೂ ಅಧಿಕ ಬೀದಿನಾಯಿಗಳಿವೆ. ಕಸದ ರಾಶಿ ಈಗ ಅವುಗಳ ವಾಸಸ್ಥಾನವಾಗಿ ಪರಿವರ್ತನೆಗೊಂಡಿದೆ. ಜಾನುವಾರುಗಳು ಹಾಗೂ ಕುರಿಗಳ ಮೇಲೆ ಅವುಗಳ ದಾಳಿ ನಿತ್ಯ ನಿರಂತರ. ಸಾಕುಪ್ರಾಣಿಗಳಿಗೆ ಸದಾ ಕಾವಲು ಇರಬೇಕಿದೆ~ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

`ದಿನದಿಂದ ದಿನಕ್ಕೆ ನಾಯಿಗಳ ಸಂಖ್ಯೆ ವೃದ್ಧಿಯಾಗುತ್ತಿದೆ. ಈಗ ಎರಡು ತಿಂಗಳಿಂದ ಕಸ ಹಾಕುತ್ತಿಲ್ಲ. ಇದರಿಂದಾಗಿ ಅವುಗಳ ಗಮನ ಪ್ರಾಣಿಗಳ ಮೇಲೆ ಬಿದ್ದಿದೆ. ಒಂದು ತಿಂಗಳಲ್ಲೇ ಐದಕ್ಕೂ ಅಧಿಕ ಕುರಿಗಳನ್ನು ತಿಂದು ಹಾಕಿವೆ. ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು~ ಎಂದು ಗ್ರಾಮಸ್ಥರು ಒತ್ತಾಯಿಸಿದರು.

`ಕೃಷಿ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ~
`ಇಲ್ಲಿರುವುದು ಕೆಂಪುಮಣ್ಣಿನ ಫಲವತ್ತಾದ ಭೂಮಿ. ಕೃಷಿ ಭೂಮಿಗೆ ನೀರಿನ ಸಮಸ್ಯೆಇಲ್ಲ. ಗೊಬ್ಬರದ ಕೊರತೆಯೂ ಇಲ್ಲ. ಕೂಲಿಯಾಳುಗಳ ಕೊರತೆಯೂ ಅಷ್ಟಾಗಿ ಇಲ್ಲ. ಕಾಯಿಲೆಯದ್ದೇ ಈಗ ದೊಡ್ಡ ಸಮಸ್ಯೆ. ಈ ತಿಪ್ಪೆ ರಾಶಿಯಿಂದಾಗಿ ಹೊಸ ಹೊಸ ಕಾಯಿಲೆ ಊರಿಗೆ ದಾಂಗುಡಿ ಇಟ್ಟು ಮನುಷ್ಯರಿಗೆ ಹಾಗೂ ಕೃಷಿಗೆ ಹಾನಿ ಮಾಡುತ್ತಿದೆ. ಈ ಎಲ್ಲ ಸಮಸ್ಯೆಗೆ ಬಿಬಿಎಂಪಿ ಹಾಗೂ ರಾಮ್ಕಿ ಸಂಸ್ಥೆಯೇ ಕಾರಣ. ಕೃಷಿ ಕ್ಷೇತ್ರದ ಪುನಶ್ಚೇತನಕ್ಕೆ ಬಿಬಿಎಂಪಿಯಿಂದ ವಿಶೇಷ ಪ್ಯಾಕೇಜ್ ರೂಪಿಸಬೇಕು.~
-ರಂಗಪ್ಪ, ಕೃಷಿಕ

`ಬೀದಿನಾಯಿಗಳಿಗೆ ಕುರಿ ಬಲಿ~
`ತ್ಯಾಜ್ಯದ ವಿಷಯುಕ್ತ ನೀರು ಆಸುಪಾಸಿನ ಕೆರೆ, ತೋಡುಗಳನ್ನೆಲ್ಲ ಕಲುಷಿತಗೊಳಿಸಿದೆ. ಈ ನೀರನ್ನು ಕುಡಿದು ಒಂದೂವರೆ ತಿಂಗಳ ಹಿಂದೆ ಏಳೂವರೆ ತಿಂಗಳ ಗರ್ಭಿಣಿ ಹಸುವೊಂದು ಸತ್ತಿದೆ. ತ್ಯಾಜ್ಯದ ರಾಶಿಯ ಪಕ್ಕ ಬೀದಿನಾಯಿಗಳ ಕಾಟ ವಿಪರೀತವಾಗಿದೆ. ಮೂರು ಕುರಿಗಳನ್ನು ನಾಯಿಗಳು ತಿಂದುಹಾಕಿವೆ. ಕುರಿ ಹಾಗೂ ಜಾನುವಾರುಗಳನ್ನು ಹೊರಗೆ ಬಿಟ್ಟಾಗ ಪ್ರತಿಕ್ಷಣ ಕಾವಲು ಕಾಯುವ ಸ್ಥಿತಿ ಇದೆ~.
-ಮುನಿರಾಜು, ಕೃಷಿಕ 

 `ಕೊಳಚೆ ನೀರಿನಿಂದಾಗಿ ಜಾನುವಾರುಗಳಿಗೂ ಅನಾರೋಗ್ಯ~
`ಗೋಮಾಳ ಭೂಮಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಗ್ರಾಮದ ಜಾನುವಾರುಗಳನ್ನು ಇಲ್ಲೇ ಮೇಯಲು ಬಿಡಲಾಗುತ್ತಿದೆ. ಬೀದಿನಾಯಿಗಳು ದಾಳಿ ನಡೆಸಿ ಎರಡು ಕುರಿ ಮರಿಗಳು ಸತ್ತು ಹೋಗಿವೆ. ಕಲುಷಿತ ನೀರಿನಿಂದಾಗಿ ದನಕರುಗಳಿಗೂ ಅಪಾಯ ತಪ್ಪಿದ್ದಲ್ಲ. ಕೆರೆನೀರು ಮೇಲ್ನೋಟಕ್ಕೆ ತಿಳಿಯಾಗಿದ್ದಂತೆ ಕಾಣುತ್ತದೆ. ಆ ನೀರನ್ನು ಜಾನುವಾರುಗಳು ಕುಡಿದಾಗ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ. ತ್ಯಾಜ್ಯ ರಾಶಿಯ ಹತ್ತಿರದಲ್ಲೇ ಹೆಚ್ಚು ಸಮಯ ಇರುವುದರಿಂದ ಕೆಮ್ಮಿನ ಸಮಸ್ಯೆ ಉಂಟಾಗಿದೆ. ತಿಂಗಳಿಗೊಮ್ಮೆ ಜ್ವರ ಬರುತ್ತಿದೆ~.
-ಬಾಲಕೃಷ್ಣ, ರೈತ

`ಕಸ ವಿಲೇವಾರಿಗೆ ಹೊಸ ಗುತ್ತಿಗೆ: ಕಂಪೆನಿಗಳಿಗೆ ಸಿಬ್ಬಂದಿ ಕೊರತೆ~
ಬೆಂಗಳೂರು: ಬೆಂಗಳೂರಿನ ತ್ಯಾಜ್ಯ ವಿಲೇವಾರಿಯ ಗುತ್ತಿಗೆಯನ್ನು ಹೊಸದಾಗಿ ಪಡೆದಿರುವ ಕಂಪೆನಿಗಳು ಅಗತ್ಯ ಪ್ರಮಾಣದ ಸಿಬ್ಬಂದಿ ಹೊಂದಿಲ್ಲ ಎಂದು ಈ ಹಿಂದೆ ಗುತ್ತಿಗೆ ಪಡೆದಿದ್ದವರ ಪರ ವಕೀಲರು ಹೈಕೋರ್ಟ್‌ನಲ್ಲಿ ಸೋಮವಾರ ವಾದಿಸಿದರು.

2007ರಲ್ಲಿ ಬೆಂಗಳೂರಿನಲ್ಲಿ ಪ್ರತಿನಿತ್ಯ ಅಂದಾಜು 1,500 ಟನ್ ತ್ಯಾಜ್ಯ ಉತ್ಪಾದನೆ ಆಗುತ್ತಿತ್ತು. ಆ ಸಂದರ್ಭದಲ್ಲಿ 12 ಸಾವಿರ ಮಂದಿ ಪೌರಕಾರ್ಮಿಕರು ತ್ಯಾಜ್ಯ ವಿಲೇವಾರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಈಗ ಪ್ರತಿನಿತ್ಯ ಐದು ಸಾವಿರ ಟನ್ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಆದರೆ ಹೊಸದಾಗಿ ಟೆಂಡರ್ ಪಡೆದಿರುವ ಕಂಪೆನಿಗಳಲ್ಲಿರುವ ಒಟ್ಟು ಸಿಬ್ಬಂದಿ ಸಂಖ್ಯೆ ಅಂದಾಜು ಎಂಟು ಸಾವಿರ ಮಾತ್ರ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ವಕೀಲರು ವಿವರ ನೀಡಿದರು.

ಇಷ್ಟು ಕಡಿಮೆ ಸಂಖ್ಯೆಯಲ್ಲಿ ಪೌರಕಾರ್ಮಿಕರು ಇರುವಾಗ, ಹೊಸ ಟೆಂಡರ್‌ಗೆ ಸರ್ಕಾರದ ಒಪ್ಪಿಗೆ ದೊರೆತರೆ, ಪೌರಕಾರ್ಮಿಕನೊಬ್ಬ ಪ್ರತಿನಿತ್ಯ ಸರಾಸರಿ ಎಂಟು ಕಿ.ಮೀ. ಉದ್ದದ ರಸ್ತೆಯನ್ನು ಸ್ವಚ್ಛಗೊಳಿಸಬೇಕಾದ ಜವಾಬ್ದಾರಿ ಹೊರಬೇಕಾಗುತ್ತದೆ. ಇದು ಕಷ್ಟಸಾಧ್ಯ ಎಂದು ವಕೀಲರು ಹೇಳಿದರು. ವಿಚಾರಣೆಯನ್ನು ನ್ಯಾಯಪೀಠ ಮಂಗಳವಾರಕ್ಕೆ ಮುಂದೂಡಿದೆ.
 
ಅಂಕಿ-ಅಂಶ ನೀಡಲು ಸೂಚನೆ: ಕೇಂದ್ರ ಆಡಳಿತ ನ್ಯಾಯಮಂಡಳಿಯನ್ನು (ಸಿಎಟಿ) ವಿಭಜಿಸಿ, ಕೋಲ್ಕತ್ತಕ್ಕೆ ಸ್ಥಳಾಂತರಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಿಎಟಿಯಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಕುರಿತು ಅಂಕಿ-ಅಂಶಗಳನ್ನು ನೀಡುವಂತೆ ಅರ್ಜಿದಾರರಿಗೆ ಸೂಚಿಸಿದೆ. ಹಸಿರು ನ್ಯಾಯಮಂಡಳಿಯನ್ನು ಚೆನ್ನೈಗೆ ಸ್ಥಳಾಂತರಿಸುವ ಕುರಿತು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ,  ಬೆಂಗಳೂರಿನಿಂದ ಏಕೆ ಬೇರೆಡೆ ಸ್ಥಳಾಂತರಸಲಾಗುತ್ತಿದೆ~ ಎಂದು ಪ್ರಶ್ನಿಸಿತು.

ದೂರದೃಷ್ಟಿಯ ಕೊರತೆ- ಸಿ.ಎಂ ಅಸಮಾಧಾನ
ಬೆಂಗಳೂರು:`ಬೆಂಗಳೂರು ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಉಲ್ಬಣಿಸಲು ದೂರದೃಷ್ಟಿಯ ಕೊರತೆಯೇ ಕಾರಣ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೋಮವಾರ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

`ಕಸದ ಈಗಿನ ಸಮಸ್ಯೆಗೆ ಕಾರಣ ಯಾರು ಎಂಬುದನ್ನು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಆದರೆ, ಈ ದುಃಸ್ಥಿತಿಗೆ ದೂರದೃಷ್ಟಿಯ ಕೊರತೆ ಪ್ರಮುಖ ಕಾರಣ ಎಂದು ನಾನು ಹೇಳಬಲ್ಲೆ~ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸಮಸ್ಯೆಯ ತೀವ್ರತೆಗೆ ಅವರಿವರನ್ನು ದೂರುವುದಕ್ಕಿಂತ ಅದನ್ನು ಮೆಟ್ಟಿ ನಿಲ್ಲುವುದು ಮುಖ್ಯ. ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಶ್ರಮ ಹಾಕಿದ್ದರಿಂದ ಸ್ವಲ್ಪ ಹತೋಟಿಗೆ ಬಂದಿದ್ದು, ಕೆಲವು ದಿನಗಳಲ್ಲಿ ಪೂರ್ಣ ವಿಲೇವಾರಿ ಆಗಲಿದೆ. ಕಸ ನಿರ್ವಹಣೆಗೆ ಅನೇಕ ಖಾಸಗಿ ಸಂಸ್ಥೆಗಳು ಮುಂದೆ ಬಂದಿದ್ದು, ಅವುಗಳ ನೆರವು ಪಡೆಯಲಾಗುವುದು ಎಂದರು.

ಮುಂದೊಂದು ದಿನ ರಾಜ್ಯದ ಇತರ ನಗರಗಳೂ ಕಸದ ಸಮಸ್ಯೆ ಸಿಲುಕಬಹುದು. ಹೀಗಾಗಿ ಈಗಿನಿಂದಲೇ ಕಸದ ವೈಜ್ಞಾನಿಕ ವಿಲೇವಾರಿಗೆ ಆದ್ಯತೆ ನೀಡಬೇಕು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.