ADVERTISEMENT

ಮುಂದುವರಿದ ಮರಳು ಲಾರಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST

ಬೆಂಗಳೂರು: ಸರ್ಕಾರದ ನೂತನ ಮರಳು ನೀತಿಯನ್ನು ವಿರೋಧಿಸಿ ಮರಳು ಲಾರಿ ಮಾಲೀಕರು ಡಿ.20 ರಿಂದ ನಡೆಸುತ್ತಿರುವ ಮುಷ್ಕರ ಸೋಮವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಗ್ರಾಹಕರು ಮರಳಿಗಾಗಿ ಪರದಾಡುವಂತಾಗಿದೆ.

ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸುವವರೆಗೂ ಮುಷ್ಕರ ನಡೆಸ­ಲಾಗುವುದು ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ತಿಳಿಸಿದ್ದಾರೆ.

‘ನೂತನ ಮರಳು ಸಾಗಣೆ ನೀತಿ ಅವೈಜ್ಞಾನಿಕವಾಗಿದೆ. ಹೊಸ ನೀತಿಯಲ್ಲಿ ಮರಳು ಸಾಗಣೆಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಗಳಿಲ್ಲ. ಸರ್ಕಾರ ಮರಳು ಸಾಗಣೆ ಬಗ್ಗೆ ವೈಜ್ಞಾನಿಕ ಹಾಗೂ ಸ್ಪಷ್ಟವಾದ ನಿಯಮ ರೂಪಿಸುವವರೆಗೆ ಮುಷ್ಕರ ನಿಲ್ಲದು’ ಎಂದು ಅವರು ಹೇಳಿದರು.

‘ಮುಷ್ಕರದಿಂದ ರಾಜ್ಯದ ಸುಮಾರು 15 ಸಾವಿರ ಮರಳು ಸಾಗಣೆ ಲಾರಿಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿನಿತ್ಯ ನಗರಕ್ಕೆ ಬರುತ್ತಿದ್ದ ಮೂರು ಸಾವಿರ ಲೋಡ್‌ ಮರಳು ಸಾಗಣಿಕೆ ಸ್ಥಗಿತಗೊಂಡಿದೆ’ ಎಂದರು.

‘ಮರಳು ಸಾಗಣೆಗೆ ಮಾಸಿಕ ಪರವಾನಗಿ (ಪರ್ಮಿಟ್‌) ನೀಡಬೇಕು. ಲಾರಿ ಮಾಲೀಕರ ಮೇಲೆ ಲೋಕೋಪ­ಯೋಗಿ, ಸಾರಿಗೆ, ಪೊಲೀಸ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಡೆಸು­ತ್ತಿರುವ ದೌರ್ಜನ್ಯ ತಡೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.

ಅಕ್ರಮ ಮರಳು ಸಾಗಣೆ ತಡೆಗೆ ಕಡಿವಾಣ ಹಾಕಬೇಕು. ಈ ಬೇಡಿಕೆಗಳನ್ನು ಈಡೇರಿಸುವ­ವರೆಗೂ ಮುಷ್ಕರ ಹಿಂಪಡೆ­ಯು­ವುದಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.