ADVERTISEMENT

`ಮುಖಂಡರ ವಿರುದ್ಧ ಶಿಸ್ತುಕ್ರಮ'

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 19:25 IST
Last Updated 6 ಡಿಸೆಂಬರ್ 2012, 19:25 IST

ಸುವರ್ಣ ವಿಧಾನಸೌಧ (ಬೆಳಗಾವಿ): ಕೆಜೆಪಿ ಮುಖಂಡರು ಹಾವೇರಿಯಲ್ಲಿ ಡಿ. 9ರಂದು ಆಯೋಜಿಸಿರುವ ಉಪಾಹಾರ ಕೂಟದಲ್ಲಿ ಪಾಲ್ಗೊಳ್ಳುವ ಬಿಜೆಪಿ ಶಾಸಕರು ಮತ್ತು ಸಂಸದರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಮೊಗಸಾಲೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಈಗಾಗಲೇ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಪಕ್ಷದ ರಾಜ್ಯ ಮುಖಂಡರು ಚರ್ಚೆ ನಡೆಸಿದ್ದಾರೆ ಎಂದರು.

ಸರ್ಕಾರ ಉರುಳಿದರೂ ಚಿಂತೆಯಿಲ್ಲ. ಕೆಜೆಪಿ ಸಮಾವೇಶದಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುವವರು ಹಾಗೂ ಉಪಾಹಾರ ಕೂಟಗಳಂತಹ ಚಟುವಟಿಕೆಗಳಲ್ಲಿ ಭಾಗವಹಿಸುವವರ ವಿರುದ್ಧವೂ ಕ್ರಮ ಜರುಗಿಸುವ ಚಿಂತನೆ ನಡೆದಿದೆ ಎಂದರು.

ಸರ್ಕಾರದ ಅವಧಿ ಇನ್ನು ನಾಲ್ಕೇ ತಿಂಗಳು ಇದೆ ಎಂಬ ಕಾರಣಕ್ಕೆ ಬೇರೆ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವವರ ಬಗ್ಗೆ ಮೃದು ಧೋರಣೆ ತಾಳಿದರೆ ಬಿಜೆಪಿ ಕಚೇರಿಗೆ ಶಾಶ್ವತವಾಗಿ ಬೀಗಮುದ್ರೆ ಹಾಕಬೇಕಾಗುತ್ತದೆ. ಬಿಎಸ್‌ಆರ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡವರಿಗೂ ಶಿಸ್ತುಕ್ರಮ ಅನ್ವಯಿಸುತ್ತದೆ. ಅಧಿಕಾರಕ್ಕಿಂತ ಪಕ್ಷ ಮುಖ್ಯ ಎಂದರು.

ಕೆಜೆಪಿ ಮುಖಂಡರೊಂದಿಗೆ ಇಷ್ಟುದಿನ ರಾಜಕೀಯ ಹಾಗೂ ವೈಯಕ್ತಿಕ ಸಂಬಂಧ ಹೊಂದಿದ್ದವರು ಇನ್ನು ಮುಂದೆ ರಾಜಕೀಯ ಸಂಬಂಧ ಇಟ್ಟುಕೊಳ್ಳುವಂತಿಲ್ಲ. ಬೇಕಿದ್ದರೆ ವೈಯಕ್ತಿಕ ಸಂಬಂಧ ಮುಂದುವರೆಸಲಿ. ಬಿಜೆಪಿಯವರು ಬರಿ ಮಾತಾಡುತ್ತಾರೆ, ಕೃತಿಗಿಳಿಸುವುದಿಲ್ಲ ಎಂದು ಜನ ವ್ಯಂಗ್ಯವಾಡುತ್ತಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಖಚಿತವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.