ADVERTISEMENT

ಮೆಟ್ರೊ ಸುರಂಗ ಮಾರ್ಗ ನಿರ್ಮಾಣ :ನೆಲವನ್ನು ಅಗೆಯಲು ಚೀನಾದಿಂದ ಎರಡು ಯಂತ್ರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ಬೆಂಗಳೂರು: `ನಮ್ಮ ಮೆಟ್ರೊ~ದ ಉತ್ತರ- ದಕ್ಷಿಣ ಕಾರಿಡಾರ್‌ನ 4 ಕಿ.ಮೀ. ಉದ್ದದ ಸುರಂಗ ಮಾರ್ಗದ ನಿರ್ಮಾಣ ಕಾರ್ಯಕ್ಕೆ ಈ ತಿಂಗಳಲ್ಲೇ ಚಾಲನೆ ನೀಡಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವು ತಿಳಿಸಿದೆ.

ಕೆ.ಆರ್.ಮಾರುಕಟ್ಟೆ ಕಡೆಗೆ ನೆಲ ಕೊರೆದು ಸುರಂಗ ನಿರ್ಮಿಸುವುದಕ್ಕಾಗಿ ಕೆ.ಆರ್.ರಸ್ತೆಯಲ್ಲಿ ಶಿವಶಂಕರ್ ವೃತ್ತದ ಬಳಿ ನೆಲ ಅಗೆದು ಸುರಂಗ ಕೊರೆಯುವ ಯಂತ್ರವನ್ನು ಜೋಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ.
ಉತ್ತರ- ದಕ್ಷಿಣ ಕಾರಿಡಾರ್‌ನ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಚೀನಾದ ಹೆರೆನ್‌ನೆಂಚ್ಟ್ ಕಂಪೆನಿಯ ಎರಡು `ಅರ್ಥ್ ಪ್ರೆಷರ್ ಬ್ಯಾಲೆನ್ಸ್‌ಡ್ ಮೆಷಿನ್~ (ಇಪಿಬಿಎಂ) ಎಂಬ ಯಂತ್ರಗಳನ್ನು ತರಿಸಿಕೊಳ್ಳಲಾಗಿದೆ.

ಒಂದು ಯಂತ್ರವನ್ನು ಕೆ.ಆರ್.ರಸ್ತೆಯಲ್ಲಿ ಇರಿಸಿದ್ದು, ಇನ್ನೊಂದನ್ನು ಜಕ್ಕರಾಯನಕೆರೆ ಮೈದಾನದ ಕಡೆಯಿಂದ ಮೆಜೆಸ್ಟಿಕ್‌ವರೆಗೆ ಸುರಂಗ ಕೊರೆಯಲು ಬಳಸಲಾಗುವುದು. ಚೀನಾ ದೇಶದ್ದೇ ಆದ ಸೆಲಿ ಕಂಪೆನಿಯ ಮತ್ತೊಂದು ಇಪಿಬಿಎಂ ಬರಬೇಕಾಗಿದೆ.

ಪೂರ್ವ- ಪಶ್ಚಿಮ ಕಾರಿಡಾರ್‌ನಲ್ಲಿ ಮೆಜೆಸ್ಟಿಕ್‌ನಿಂದ ಸೆಂಟ್ರಲ್ ಕಾಲೇಜುವರೆಗೆ ಜೋಡಿ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಸೆಂಟ್ರಲ್ ಕಾಲೇಜಿನಿಂದ ವಿಧಾನಸೌಧದವರೆಗೆ ಜೋಡಿ ಸುರಂಗ ಕೊರೆಯುವ ಕಾರ್ಯವನ್ನು ಹೆಲೆನ್ ಮತ್ತು ಮಾರ್ಗರಿಟಾ ಹೆಸರಿನ ಟನೆಲ್ ಬೋರಿಂಗ್ ಮೆಷಿನ್‌ಗಳು ಪ್ರಾರಂಭಿಸಿವೆ. ಮೆಜೆಸ್ಟಿಕ್‌ನಿಂದ ನಗರ ರೈಲು ನಿಲ್ದಾಣ, ವಿಧಾನಸೌಧದಿಂದ ಮಿನ್ಸ್ಕ್ ಚೌಕದವರೆಗೆ ಸುರಂಗ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ.

 ಉಗುಳಿದರೆ 500 ರೂಪಾಯಿ ದಂಡ
ಬೆಂಗಳೂರು:  ನಗರದ `ಮೆಟ್ರೊ~ ನಿಲ್ದಾಣಗಳಲ್ಲಿ ಸಿಕ್ಕಸಿಕ್ಕಲ್ಲಿ ಉಗುಳುವ ಪ್ರವೃತ್ತಿಯನ್ನು ನಿಯಂತ್ರಿಸಲು `ಉಗುಳುಕೋರ~ರಿಗೆ ದಂಡ ವಿಧಿಸುವ ಕಾನೂನನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ 3,500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

`ನಿಲ್ದಾಣದಲ್ಲಿ ಉಗುಳುವ ವ್ಯಕ್ತಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಏಳು ಮಂದಿ ಸಿಕ್ಕಿ ಬಿದ್ದಿದ್ದಾರೆ. ದಂಡವನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಲಾಗುತ್ತಿದೆ. ಅಲ್ಲದೆ, ಈ ಬಗ್ಗೆ ಪ್ರಯಾಣಿಕರಿಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಇದರಿಂದಾಗಿ ನಿಲ್ದಾಣದಲ್ಲಿ ಉಗುಳುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ~ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

`ನಿಲ್ದಾಣಗಳಲ್ಲಿ ಶಿಸ್ತುಪಾಲನೆ, ಆಹಾರ ಸಾಮಗ್ರಿಗಳ ನಿಷೇಧ ಸೇರಿದಂತೆ ನಮ್ಮ ಮೆಟ್ರೊದ ಶಿಷ್ಟಾಚಾರಗಳ ಬಗ್ಗೆ ಪ್ರಯಾಣಿಕರಲ್ಲಿ ಇದೀಗ ಜಾಗೃತಿ ಮೂಡಲಾರಂಭಿಸಿದೆ. ರೈಲುಗಳಲ್ಲಿ ಜೇಬುಕಳವು (ಪಿಕ್ ಪಾಕೆಟ್) ಪ್ರಕರಣಗಳ ಬಗ್ಗೆ ಪ್ರಯಾಣಿಕರು ಪೊಲೀಸರಿಗೆ ದೂರು ನೀಡಲು ಹಿಂಜರಿಯಬಾರದು.

ನಿಗಮದ ವಿಚಕ್ಷಣಾ ವ್ಯವಸ್ಥೆಯ ಮೂಲಕ ಸುಲಭದಲ್ಲಿ ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಿದೆ~ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದರು.  ಪ್ರಯಾಣಿಕರು ತಮ್ಮ ದೂರುಗಳನ್ನು bmrcl @dataone.in  ಅಥವಾ  travelhelp @bmrc.co.in.ಗೆ ಸಲ್ಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.