ADVERTISEMENT

ಮೇಲ್ಮನೆಗೆ ಚುನಾವಣೆ: ಮತದಾನ ಕುಸಿತಕ್ಕೆ ಕಾರಣ ಹುಡುಕುತ್ತಾ...

ವಿಜಯ್ ಜೋಷಿ
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST

ಬೆಂಗಳೂರು: ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಮತದಾನದ ಪ್ರಮಾಣ ತೀವ್ರವಾಗಿ ಕುಸಿಯಲು ಮತದಾರರ ನಿರಾಸಕ್ತಿಯೊಂದಿಗೆ ಚುನಾವಣಾ ಆಯೋಗದ ಕೆಲವು ಕ್ರಮಗಳೂ ಕಾರಣ ಎಂಬ ಆರೋಪಗಳು ಕೇಳಿಬಂದಿವೆ. ಈ ಕ್ಷೇತ್ರಗಳಿಗೆ 2006ರಲ್ಲಿ ನಡೆದ ಮತದಾನಕ್ಕಿಂತ ಈ ಬಾರಿ ಮತದಾನದ ಪ್ರಮಾಣ ಕುಸಿಯಲು ಏನೆಲ್ಲ ಕಾರಣಗಳು ಇರಬಹುದು ಎಂಬ ಕುರಿತೂ ಚಿಂತನೆ ನಡೆದಿದೆ.

ಪದವೀಧರರ ಮೂರು ಕ್ಷೇತ್ರಗಳಿಂದ ಪರಿಷತ್ತಿಗೆ ಭಾನುವಾರ ನಡೆದ ಮತದಾನದ ಪ್ರಮಾಣ ಕಳೆದ ಬಾರಿಗಿಂತ ಕಡಿಮೆ. ಅದರಲ್ಲಿಯೂ ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಶೇಕಡ 25.17ರಷ್ಟು ಮಾತ್ರ ಮತದಾನ ಆಗಿದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಮತದಾನದ ಪ್ರಮಾಣ ಬರಿ ಶೇ 15ರಷ್ಟು ಇರಬಹುದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಅಂದಾಜಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಈಶಾನ್ಯ ಹಾಗೂ ನೈಋತ್ಯ ಪದವೀಧರರ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ 41.92 ಹಾಗೂ ಶೇ 53.01ರಷ್ಟು ಮತದಾನ ನಡೆದಿದೆ. 2006ರಲ್ಲಿ ನಡೆದ ಚುನಾವಣೆಯಲ್ಲಿ ಬೆಂಗಳೂರು, ಈಶಾನ್ಯ ಹಾಗೂ ನೈಋತ್ಯ ಪದವೀಧರರ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ 36.04, ಶೇ 62.34 ಹಾಗೂ ಶೇ 66.24ರಷ್ಟು ಮತದಾನ ಆಗಿತ್ತು.

ಈ ಕುರಿತು `ಪ್ರಜಾವಾಣಿ~ ಜೊತೆ ಮಾತನಾಡಿದ ಬೆಂಗಳೂರು ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಚಂದ್ರ ಗೌಡ, `ಮತದಾರರು ಒಂದು ಕಡೆ ಇದ್ದರೆ, ಮತಗಟ್ಟೆ ಇನ್ನೆಲ್ಲೋ ಇತ್ತು. ಆಯೋಗ ಜವಾಬ್ದಾರಿಯುತವಾಗಿ ವರ್ತಿಸದ ಕಾರಣದಿಂದಲೇ ಇಷ್ಟು ಕಡಿಮೆ ಪ್ರಮಾಣದ ಮತದಾನ ಆಗಿದೆ~ ಎಂದು ದೂರಿದರು.
 
ಬೆಂಗಳೂರು ಅಗಾಧವಾಗಿ ಬೆಳೆದಿದೆ. ಮತ ಚಲಾಯಿಸಲು ದೂರದ ಮತಗಟ್ಟೆಗಳಿಗೆ ತೆರಳಬೇಕು. ಇದಕ್ಕೆ ಹಣವೂ ಖರ್ಚಾಗುತ್ತದೆ. ಕಡಿಮೆ ಮತದಾನಕ್ಕೆ ಇದೂ ಒಂದು ಕಾರಣ ಇರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಆದರೆ ಈ ಆರೋಪವನ್ನು ಅಲ್ಲಗಳೆಯುವ ಆಯೋಗ, ಪದವೀಧರ ಮತದಾರರು ವಿವಿಧ ಕ್ಷೇತ್ರಗಳಲ್ಲಿ ಹರಿದು-ಹಂಚಿ ಹೋಗಿರುವುದೇ ಮತದಾನದಲ್ಲಿನ ಕುಸಿತಕ್ಕೆ ಕಾರಣ ಎಂಬ ವಾದ ಮುಂದಿಟ್ಟಿದೆ.

`ಶಿಕ್ಷಕರ ಕ್ಷೇತ್ರಗಳ ಮತದಾರರು ಶಕ್ತಿಯುತ ಸಂಘಟನೆ ಹೊಂದಿದ್ದಾರೆ. ತಮ್ಮ ಅಭ್ಯರ್ಥಿ ಯಾರು, ಅವರ ಸಾಮರ್ಥ್ಯ ಏನು, ಶಿಕ್ಷಕರ ಹಿತರಕ್ಷಣೆಗೆ ಏನು ಮಾಡಬಲ್ಲರು ಎಂಬುದು ಮತದಾರರಿಗೆ ತಿಳಿದಿದೆ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೂ ಮತದಾರರನ್ನು ಸಂಪರ್ಕಿಸುವುದು ಸುಲಭದ ಕೆಲಸ.

ಶಿಕ್ಷಕರ ಕ್ಷೇತ್ರದ ಮತದಾರರಿಗೆ ಹೋಲಿಸಿದರೆ, ಪದವೀಧರರ ಕ್ಷೇತ್ರಗಳ ಮತದಾರರ ಸಂಘಟನಾ ಶಕ್ತಿ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಪದವೀಧರರ ಕ್ಷೇತ್ರಕ್ಕಿಂತ ಶಿಕ್ಷಕರ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ಮತದಾನ ಆಗಿದೆ~ ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ಪದವೀಧರರ ಕ್ಷೇತ್ರಗಳ ಮತದಾರರು ಬೇರೆ ಬೇರೆ ಕ್ಷೇತ್ರಗಳಲ್ಲಿ ವ್ಯಾಪಿಸಿದ್ದಾರೆ. ಅವರೆಲ್ಲರ ಆಶೋತ್ತರಗಳೂ ವಿಭಿನ್ನ. ಅವರು ಒಂದೇ ಉದ್ದೇಶ/ಗುರಿ ಇಟ್ಟುಕೊಂಡು ಸಂಘಟಿತರಾಗಿಲ್ಲ. ಚುನಾವಣೆಯ ಸಂದರ್ಭದಲ್ಲಿ ಈ ಕ್ಷೇತ್ರಗಳ ಮತದಾರರಲ್ಲಿ ಹೆಚ್ಚಿನ ಆಸಕ್ತಿಯೂ ಕಂಡುಬರುವುದಿಲ್ಲ~ ಎಂದು ಅವರು ಹೇಳಿದರು.

`ಮತದಾನ ಕಡಿಮೆಯಾಗಲು ಆಯೋಗವೂ ಕಾರಣ. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ವಾಸಿಸುವವರಿಗೆ ದೂರದ ರಾಜರಾಜೇಶ್ವರಿ ನಗರದಲ್ಲಿ (ಅಂದಾಜು 15.2 ಕಿ.ಮೀ. ದೂರ) ಮತಗಟ್ಟೆ ತೆರೆಯಲಾಗಿತ್ತು.

ಹಾಗೆಯೇ ಸುಂಕದಕಟ್ಟೆಯಲ್ಲಿ ವಾಸಿಸುವವರಿಗೆ ಮಲ್ಲೇಶ್ವರದಲ್ಲಿ (10.5 ಕಿ.ಮೀ) ಮತಗಟ್ಟೆ ಇತ್ತು. ಇಷ್ಟು ದೂರದಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಿದಾಗ ಮತದಾನದ ಪ್ರಮಾಣ ಕುಸಿಯುವುದು ಸಹಜ~ ಎಂದು ಬೆಂಗಳೂರು ಪದವೀಧರರ ಕ್ಷೇತ್ರದ ಮತದಾರ, ಕವಿ ಕೆ.ವೈ. ನಾರಾಯಣ ಸ್ವಾಮಿ ಅವರು ಅಭಿಪ್ರಾಯಪಟ್ಟರು.

ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರತಿ ಮತದಾರನಿಗೂ 2 ಕಿ.ಮೀ. ವ್ಯಾಪ್ತಿಯಲ್ಲೇ ಮತಗಟ್ಟೆ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಆದರೆ ಮತದಾರರ ಸಂಖ್ಯೆ ಕಡಿಮೆ ಇರುವ ಕಾರಣ, ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಮತದಾರನಿಂದ ಮತಗಟ್ಟೆ 16 ಕಿ.ಮೀ ವ್ಯಾಪ್ತಿಯಲ್ಲಿ ಇದ್ದರೆ ಸಾಕು ಎಂಬ ನಿಯಮ ಇದೆ. ಈ ಚುನಾವಣೆಯಲ್ಲಿ ಒಂದು ಮತಗಟ್ಟೆಗೆ ಕನಿಷ್ಠ 30 ಮತದಾರರು ಇರಬೇಕು ಎಂದು ಆಯೋಗದ ಅಧಿಕಾರಿಗಳು ತಿಳಿಸಿದರು.

ಎಸ್‌ಎಂಎಸ್ ಮೂಲಕವೇ ತಮ್ಮ ಮತಗಟ್ಟೆ ಎಲ್ಲಿದೆ ಎಂದು ತಿಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಯಾವ ಮತಗಟ್ಟೆ ಎಲ್ಲಿದೆ ಎಂಬುದನ್ನು ಪತ್ರಿಕಾ ಜಾಹೀರಾತಿನ ಮೂಲಕ ತಿಳಿಸಲಾಗಿತ್ತು. ಇಷ್ಟಿದ್ದರೂ ಮತದಾನ ಕಡಿಮೆಯಾಗಿದೆ ಎಂದು ಅವರು ವಿವರಿಸಿದರು.

ಪ್ರತಿ ಸಲ ಪರಿಷತ್ ಚುನಾವಣೆ ಸಂದರ್ಭ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರಗಳಲ್ಲಿ ಹೊಸದಾಗಿ ಮತಪಟ್ಟಿ ಸಿದ್ಧಪಡಿಸಲಾಗುತ್ತಿತ್ತು. ಅರ್ಹ ಮತದಾರರು ಪ್ರತಿ ಚುನಾವಣೆಗೂ ತಮ್ಮ ಹೆಸರನ್ನು ಹೊಸದಾಗಿ ನೋಂದಾಯಿಸಿಕೊಳ್ಳಬೇಕಿತ್ತು.

ಆದರೆ ಈ ಬಾರಿ, ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ, ಸಾರ್ವತ್ರಿಕ ಚುನಾವಣೆಗಳಲ್ಲಿ ಮಾಡುವಂತೆ, ಪರಿಷತ್ ಚುನಾವಣೆಯಲ್ಲೂ ಮತದಾರರ ಕರಡು ಪಟ್ಟಿ ಸಿದ್ಧಪಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಆಯೋಗ ಸ್ವೀಕರಿಸಿದ ಆಕ್ಷೇಪಣೆಗಳು, ದೂರಿನ ಆಧಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯೂ ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಮುಂದಣ ದಾರಿ ಯಾವುದು...?
ರಾಜಕೀಯ ಪ್ರಕ್ರಿಯೆಯಿಂದ ನಗರವಾಸಿಗಳು ದೂರ ಹೋಗುತ್ತಿದ್ದಾರೆ ಎಂಬುದಕ್ಕೆ ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಆಗಿರುವ ಕನಿಷ್ಠ ಪ್ರಮಾಣದ ಮತದಾನ ಸಾಕ್ಷಿ. `ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ~ ಎಂದು ನಗರವಾಸಿಗಳು ದೂರುವುದು ಇದ್ದಿದ್ದೇ. ಆದರೆ, ಅವರು ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಒಳ್ಳೆಯವರನ್ನು ಆಯ್ಕೆ ಮಾಡುವ ಮೂಲಕ ಈ ಕ್ಷೇತ್ರದ ಶುದ್ಧಿಗೆ ಸಹಕರಿಸಬೇಕು.

`ನನಗೆ ಪ್ರಜಾಪ್ರಭುತ್ವದ ಬಗ್ಗೆ ಪ್ರೀತಿ ಇದೆ, ಆದರೆ ರಾಜಕೀಯದಿಂದ ನಾನು ದೂರ~ ಎಂಬ ಧೋರಣೆ ಸಲ್ಲದು. ರಾಜಕೀಯದಲ್ಲಿ ಪಾಲ್ಗೊಳ್ಳುವಿಕೆ ಕುರಿತು ಯುವಕರಲ್ಲಿ ಇನ್ನಷ್ಟು ಅರಿವು ಮೂಡಿಸಬೇಕು. ಇದೊಂದೇ ನಮಗೆ ಉಳಿದಿರುವ ಮಾರ್ಗ.
 - ಡಾ. ಸಂದೀಪ್ ಶಾಸ್ತ್ರಿ, ಸಹಕುಲಪತಿ, ಜೈನ್ ವಿಶ್ವವಿದ್ಯಾಲಯ,   ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.