ಬೆಂಗಳೂರು: ‘ಭಾರತದಲ್ಲಿ ಪ್ರತಿ ತಿಂಗಳು 2,000 ವಾಣಿಜ್ಯ ಕ್ಲೌಡ್ ಗ್ರಾಹಕರು ಸಂಸ್ಥೆಗೆ ಸೇರ್ಪಡೆಯಾಗುತ್ತಿದ್ದಾರೆ’ ಎಂದು ಮೈಕ್ರೊಸಾಫ್ಟ್ ಇಂಡಿಯಾ ಅಧ್ಯಕ್ಷ ಭಾಸ್ಕರ್ ಪ್ರಮಾಣಿಕ್ ಹೇಳಿದರು.
ಮೈಕ್ರೊಸಾಫ್ಟ್ ಇಂಡಿಯಾ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ವಿಂಡೋಸ್ ಅಜೂರ್’ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬ್ಯಾಂಕಿಂಗ್, ತಯಾರಕಾ ವಲಯ, ಆರೋಗ್ಯ ಸೇವೆ, ಮಾಧ್ಯಮ ಹಾಗೂ ಬೃಹತ್, ಮಧ್ಯಮ ಹಾಗೂ ಸಣ್ಣ ಕಂಪೆನಿಗಳು ಈ ಗ್ರಾಹಕರು. ಕಳೆದ 12 ತಿಂಗಳಲ್ಲಿ ದೇಶದಲ್ಲಿನ ಸಂಸ್ಥೆಯ ಬೆಳವಣಿಗೆಯಲ್ಲಿ ಗಣನೀಯ ಪಾಲು ಕ್ಲೌಡ್ ವ್ಯವಹಾರದಿಂದ ಬಂದಿದೆ’ ಎಂದು ಅವರು ಮಾಹಿತಿ ನೀಡಿದರು.
‘ಕಡಿಮೆ ವೆಚ್ಚ, ಸರಳ, ವ್ಯಾಪಾರಿ ಜಾಗೃತಿ ಹಾಗೂ ತ್ವರಿತ ಸೇವೆ ಕಾರಣದಿಂದ ದೇಶದಲ್ಲಿ ಕ್ಲೌಡ್ ಗ್ರಾಹಕರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ದೇಶದಲ್ಲಿ ಸಂಸ್ಥೆಯು 10,000 ಕ್ಲೌಡ್ ಪಾಲುದಾರರನ್ನು ಹೊಂದಿದೆ. 16 ಲಕ್ಷ ತಂತ್ರಾಂಶ ಅಭಿವೃದ್ಧಿದಾರರಿಗೆ ಕ್ಲೌಡ್ ವರ್ಗಾವಣೆಗೆ ಬೇಕಾದ ಅಗತ್ಯ ನೆರವು ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.
ಮೈಕ್ರೊಸಾಫ್ಟ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕರಣ್ ಬಾಜ್ವಾ ಮಾತನಾಡಿ, ‘ಪಾಲುದಾರರು ಹಾಗೂ ತಂತ್ರಾಂಶ ಅಭಿವೃದ್ಧಿದಾರರ ನಡುವೆ ಕ್ಲೌಡ್ ಸಾಮರ್ಥ್ಯವನ್ನು ಸುಧಾರಿಸಲು ಮೈಕ್ರೊಸಾಫ್ಟ್ ಗಣನೀಯ ಬಂಡವಾಳ ಹೂಡುತ್ತಿದೆ. ಕಳೆದ ವರ್ಷ ಸಂಸ್ಥೆಯ ಕ್ಲೌಡ್ ಸೊಲೂಷನ್ ಪಾಲುದಾರರ ಸಂಖ್ಯೆಯಲ್ಲಿ ಶೇ 200 ವೃದ್ಧಿ ಆಗಿದೆ. ವಿಂಡೋಸ್ ಅಜೂರ್‌ನಲ್ಲಿ ಐಎಸ್‌ವಿ (ಇಂಡಿಪೆಂಡೆಂಟ್ ಸಾಫ್ಟ್‌ವೇರ್ ವೆಂಡರ್) ಅಪ್ಲಿಕೇಶನ್‌ಗಳ ಸಂಖ್ಯೆಯಲ್ಲಿ ಶೇ 100ರಷ್ಟು ಪ್ರಗತಿ ಆಗಿದೆ. ವಿಂಡೋಸ್ ಅಜೂರ್ ಅಳವಡಿಸಿಕೊಳ್ಳಲು 1700 ಸ್ಟಾರ್ಟ್ ಅಪ್‌ಗಳಿಗೆ ನೆರವು ನೀಡಲಾಗಿದೆ’ ಎಂದರು.
‘ದೇಶದಲ್ಲಿ ಮೂರು ಖಾಸಗಿ ಬ್ಯಾಂಕ್‌ಗಳು, ಐದು ವಾಹನ ತಯಾರಕಾ ಸಂಸ್ಥೆಗಳು, ನಾಲ್ಕು ಆರೋಗ್ಯ ಸೇವಾ ಸಂಸ್ಥೆಗಳು, ಮೂರು ಮಾಧ್ಯಮ ಸಂಸ್ಥೆಗಳು ವಿಂಡೋಸ್ ಅಜೂರ್ ಗ್ರಾಹಕರು. ಸಂಸ್ಥೆಯ ಸಹಯೋಗದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮೈಕ್ರೊಸಾಫ್ಟ್ ನಾವಿನ್ಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ದೇಶದಲ್ಲಿ ಇಂತಹ 39 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷ ಎರಡು ಲಕ್ಷ ಮಾಹಿತಿ ತಂತ್ರಜ್ಞಾನ ವೃತ್ತಿಪರರು ಹಾಗೂ ತಂತ್ರಾಂಶ ಅಭಿವೃದ್ಧಿದಾರರಿಗೆ ಒಟ್ಟು 2,000 ತರಬೇತಿಗಳನ್ನು ನೀಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.