ಬೆಂಗಳೂರು: `ಸರ್ದಾರ್ ವಲ್ಲಬಾಯಿ ಪಟೇಲ್ ಅವರ ಬೆನ್ನಿಗೆ ಹಿಂದೂ ವಾದವು ಅಂಟಿಕೊಂಡಿತ್ತು. ಆದ್ದರಿಂದ ಎಲ್ಲ ಜಾತಿ ಧರ್ಮವನ್ನು ಸಮನಾಗಿ ಪ್ರೀತಿಸುತ್ತಿದ್ದ ನೆಹರೂ ಅವರ ಗುಣವನ್ನು ಗಾಂಧೀಜಿ ಅರ್ಥೈ ಸಿಕೊಂಡೇ ಪ್ರಧಾನಿಯಾಗಿಸಿದ್ದರು~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅಭಿಪ್ರಾಯಪಟ್ಟರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಹುತಾತ್ಮ ಮೈಲಾರ ಮಹಾದೇವ ಜನ್ಮಶತಮಾನೋತ್ಸವ ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಗಾಂಧೀಜಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಲು ಮೈಲಾರ ಅವರಿಗೆ ಅವಕಾಶ ನೀಡಿದ್ದರು. ಸ್ವತಃ ಗಾಂಧೀಜಿ ಅವರೇ ಮೈಲಾರ ಮಹಾದೇವ ಅವರನ್ನು ಅಂತರಂಗದ ಶಿಷ್ಯನೆಂದು ಅವರ ಜೀವನ ಚರಿತ್ರೆಯಲ್ಲಿ ಕರೆದಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ರಾಜ್ಯದ ಹೋರಾಟಗಾರರಲ್ಲಿ ಮೈಲಾರ ಪ್ರಮುಖರು~ ಎಂದರು.
`ಗಾಂಧೀಜಿ ತತ್ವಗಳು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತವೆ. ನಲ್ಸೇನ್ ಮಂಡೇಲಾ ಅವರು ಗಾಂಧಿ ಗುಣಗಳಿಂದ ಪ್ರಭಾವಿತರಾಗಿ ದಕ್ಷಿಣ ಆಫ್ರಿಕಾದಲ್ಲಿ ಹೊಸ ಶಕೆಯನ್ನೇ ಆರಂಭಿಸಿದರು. ಆದರೆ ಭಾರತ ಮಾತ್ರ ಗಾಂಧೀಜಿ ತತ್ವಗಳನ್ನು ಬಹಳ ಭಿನ್ನವಾಗಿ ಸ್ವೀಕರಿಸಿದೆ~ ಎಂದರು.
ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ. `ಪ್ರಸ್ತುತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಇರುವ ನಕಲಿ ಸ್ವಾತಂತ್ರ್ಯ ಹೋರಾಟಗಾರರು ಸಹ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದು, ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳಬೇಕು~ ಎಂದು ಒತ್ತಾಯಿಸಿದರು.
`ಮೈಲಾರ ಮಹಾದೇವ ಅವರ ಹೆಸರಿನಲ್ಲಿ ಹಾವೇರಿಯಲ್ಲಿ ಸ್ಮಾರಕ ರಚನೆ ಮತ್ತು ವಿಧಾನಸೌಧ ಮುಂಭಾಗದಲ್ಲಿ ಪ್ರತಿಮೆ ಸ್ಥಾಪನೆಗೆ ಸಂಬಂಧಪಟ್ಟಂತೆ ಸಚಿವ ಸಿ.ಎಂ.ಉದಾಸಿ ಅವರಿಗೆ ಈಗಾಗಲೇ ಮನವಿ ಪತ್ರ ಸಲ್ಲಿಸಿದ್ದು, ಮುಂದಿನ ಎರಡು ವರ್ಷದೊಳಗೆ ಈಡೇರಿಸುವುದಾಗಿ ತಿಳಿಸಿದ್ದಾರೆ~ ಎಂದು ಹೇಳಿದರು.
ಮಹಾದೇವ ಅವರ ಮಗಳು ಕಸ್ತೂರಿಯಮ್ಮ ಅವರು ಒಂದು ಲಕ್ಷ ರೂಪಾಯಿ ಮೊತ್ತದ ಮೈಲಾರ ಮಹಾದೇವ ದತ್ತಿನಿಧಿಯನ್ನು ಇದೇ ಸಂದರ್ಭದಲ್ಲಿ ಸ್ಥಾಪಿಸಿದರು. ಹೈಕೋರ್ಟ್‌ನ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್, ಹಾವೇರಿ ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, ಗಾಂಧಿ ಭವನದ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಡಾ.ಮಹೇಶ್ ಜೋಶಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.